ಪ್ರೇಕ್ಷಕರ ಮನ ಸೆಳೆದ ನೃತ್ಯ ಪ್ರದರ್ಶನ
ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನಗರದ ಈಜುಕೊಳದ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಜರುಗುತ್ತಿರುವ ಗುರುರಾಯರ ಆರಾಧನಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಾಸ್ಯ ವರ್ಧನ ನೃತ್ಯ ಶಾಲೆಯ ಗುರುಗಳಾದ ಡಾ|| ಮಾಲಿನಿ ರವಿಶಂಕರ್ ಇವರ ಶಿಷ್ಯೆಯರಾದ ಕು|| ಆರ್. ಶ್ರೇಯಾ ಮತ್ತು ಕು|| ಎನ್. ಮಂದಾರ ಇವರುಗಳು ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.
ಮೊದಲ ಪ್ರಸ್ತುತಿಯಾಗಿ ಸುಬ್ರಹ್ಮಣ್ಯ ಭಾರತಿ ರಚಿಸಿದ ಹಂಸಧ್ವನಿ ರಾಗದ ‘ನರ್ತನv ಗಣಪತಿ’, ನಂತರ ಕ್ರಮವಾಗಿ ಪಟ್ಟಣ ಸುಬ್ರಹ್ಮಣ್ಯ ಅಯ್ಯರ್ ಅವರ ರಚನೆಯ "ರಾರಾ ವೇಣು ಗೋಪ ಬಾಲ", ಬಳ್ಳಾರಿ ಶೇಷಗಿರಿ ಆಚಾರ್ಯರ "ಚಂದ್ರಶೇಖರಂ ಭಜಾಮಿ ಸತತಂ", ಕವಿ ಜಯದೇವ ಗೋಸ್ವಾಮಿ ಅವರ "ದಶಾವತಾರ" ನೃತ್ಯದ ನಂತರ ಪ್ರಮುಖ ಆಕರ್ಷಣೆಯಾದ ಕದನ ಕುತೂಹಲ ರಾಗ, ಆದಿ ತಾಳದ ಖ್ಯಾತ ಗಾಯಕ ಡಾ|| ಎಂ. ಬಾಲಮುರಳಿಕೃಷ್ಣ ಹಾಡಿದ ತಿಲ್ಲಾನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಮಕ್ಕಳು ಈ ಎಲ್ಲಾ ಕೃತಿಗಳನ್ನು ಬಹಳ ಸೊಗಸಾಗಿ ಅಭಿನಯಿಸಿ ನೆರೆದಿದ್ದ ಪ್ರೇಕ್ಷಕರ ಮನ ಸೆಳೆದರು.