ಪ್ರೇಕ್ಷಕರ ಮನ ಸೆಳೆದ ಸುಷ್ಮಾ ಗಾಯನ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 4 ರಿಂದ 7ರ ವರೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು
ಮೊದಲ ಮೂರು ದಿನಗಳು ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮತ್ತು ಪಂಡಿತ ಶ್ರೀ ಚಂದ್ರಶೇಖರ ಆಚಾರ್ಯರಿಂದ "ಶ್ರೀ ಜಯತೀರ್ಥರ ಜೀವನ ಮತ್ತು ಸಾಧನೆ" ವಿಷಯವಾಗಿ ಧಾರ್ಮಿಕ ಪ್ರವಚನ ನಡೆಯಿತು.
ಆಗಸ್ಟ್ 7 ರಂದು ಜರುಗಿದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮದಲ್ಲಿ ಸಿಂಧನೂರಿನ ಶ್ರೀಮತಿ ಸುಷ್ಮಾ ಜೋಯಿಸ್ ಅವರಿಂದ ಗಾಯನ ಕಾರ್ಯಕ್ರಮ ಜರುಗಿತು.
"ಗಜವದನ ಬೇಡುವೆ" ಎಂಬ ವಿಘ್ನೇಶ್ವನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಸುಷ್ಮಾ "ತಂದೆ ವಿಜಯರಾಯ', "ಭೋಯತಿ ವರದೇಂದ್ರ" "ನೋಡು ನೋಡು ಟೀಕಾರಾಯರ', "ಶಂಭೋ ಸ್ವಯಂಭೋ", "ಬಾರೇ ಭಾಗ್ಯದ ನಿಧಿಯೇ", "ಜಾಣ ನೀನಹುದೋ", "ರಾಮ ರಾಮ ಜಯರಾಮ" ಮುಂತಾದ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನ ಸೆಳೆದರು.
ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಶ್ರೀ ಶ್ರೀ ರಾಮು ಕೊಡೇಕಲ್ ಮತ್ತು ತಬಲಾ ವಾದನದಲ್ಲಿ ಶ್ರೀ ಭೀಮಾಶಂಕರ್ ಸಾಥ್ ನೀಡಿದರು. ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.