ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮರುಪಾವತಿಗೆ ಕ್ರಮ: ಶಾಸಕಿ ರೂಪಶಶಿಧರ್
ಕೆಜಿಎಫ್: ಪಿಂಚಣಿ ಪಡೆಯುತ್ತಿದ್ದ ಕೆಲವು ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿರುವುದು ತಪ್ಪಾಗಿರುವುದು ಕಂಡುಬಂದಿದ್ದು, ಅರ್ಹ ಫಲಾನುಭವಿಗಳನ್ನು ಮರುಪರಿಶೀಲಿಸಿ ಪಿಂಚಣಿ ಸೌಲಭ್ಯವನ್ನು ಪುನಃ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ರೂಪಶಶಿಧರ್ ಹೇಳಿದರು.
ಕೆಜಿಎಫ್ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಾರ್ಡ್ವಾರು ಪಿಂಚಣಿ ಅದಾಲತ್ಗಳನ್ನು ನಡೆಸಲಾಗುವುದು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಂದ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು. ಅರ್ಹರೆಂದು ಕಂಡುಬಂದವರಿಗೆ ಮತ್ತೆ ಪಿಂಚಣಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸ್ತುತ ಪಿಂಚಣಿ ಪಡೆಯಲು ಆದಾಯ ಮಿತಿಯನ್ನು 1.20 ಲಕ್ಷಕ್ಕೆ ನಿಗದಿಪಡಿಸಿರುವುದರಿಂದ ಹಲವು ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದಾಯ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಅಲ್ಲಿಯವರೆಗೆ ಅಧಿಕಾರಿಗಳು ಮಾನವೀಯ ದೃಷ್ಟಿಕೋನದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕಿ ಸೂಚಿಸಿದರು.
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಅಧಿಕಾರಿಗಳಿಗೆ ಸೂಚನೆ: ತಾಲ್ಲೂಕು ಕಚೇರಿಗೆ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಚೇರಿಗೆ ಬಂದಾಗ ಅವರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಸಾಧ್ಯವಾದಷ್ಟು ಬೇಗ ಪರಿಹಾರ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು.
ಇ-ಕೆವೈಸಿ ಮಾಡಿಸದಿದ್ದರೆ 70 ಸಾವಿರ ಪಡಿತರ ಚೀಟಿ ರದ್ದು:
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೋಲಾರ ಜಿಲ್ಲಾ ಡಿಡಿ ಮಲ್ಲಿಕಾರ್ಜುನ್ ಮಾತನಾಡಿ, ಪಡಿತರ ಚೀಟಿದಾರರು ಸೆಪ್ಟೆಂಬರ್ 20ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಸುಮಾರು 70 ಸಾವಿರ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಕಾರ್ಡ್ದಾರರು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗಾಯಿತ್ರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಡಿಡಿ ಶಾಂತಕುಮಾರಿ, ನಿರೀಕ್ಷಕ ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸನ್, ಕೆಪಿಸಿಸಿ ಸದಸ್ಯ ದುರ್ಗಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಮಾಜಿ ನಗರಸಭೆ ಸದಸ್ಯ ಕೊದಂಡನ್, ಕಬೀರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.