ಹರಿಕಥಾ ವಿದ್ವಾನ್ ಸೋಸಲೆ ನಾರಾಯಣದಾಸ್ ಪ್ರಶಸ್ತಿ ಸ್ವೀಕರಿಸಿದ ಜಿ.ವಿ. ಶ್ರೀನಿವಾಸಮೂರ್ತಿ

ಹರಿಕಥಾ ವಿದ್ವಾನ್ ಸೋಸಲೆ ನಾರಾಯಣದಾಸ್ ಪ್ರಶಸ್ತಿ ಸ್ವೀಕರಿಸಿದ ಜಿ.ವಿ. ಶ್ರೀನಿವಾಸಮೂರ್ತಿ

     ಬೆಂಗಳೂರು ; ಸೋಸಲೆ ಪ್ರಕಾಶ್ ಮತ್ತು ಕುಟುಂಬದವರು ತಮ್ಮ ತೀರ್ಥರೂಪರಾದ ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣ ದಾಸ್ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಪ್ರಾರಂಭಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ/ಸಲ್ಲಿಸುತ್ತಿರುವ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದ್ದಾರೆ.
ನಾಡಿನ ಹೆಸರಾಂತ ಗಾಯಕರಿಗೆ, ಕಲಾವಿದರಿಗೆ, ರಾಜಕೀಯ ಧುರೀಣರಿಗೆ ಈ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ನೀಡಲಾಗುತ್ತಿದ್ದು, ಈ ವರ್ಷದ (2026) ಪ್ರಶಸ್ತಿಯನ್ನು ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಜಿ.ವಿ. ಶ್ರೀನಿವಾಸ ಮೂರ್ತಿಯವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯಂದು ನೀಡಿದ್ದು ಮತ್ತೊಂದು ವಿಶೇಷ.
ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ :
ಖ್ಯಾತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುವ "ಮಧ್ವನಾಮ" ಧ್ವನಿ ಸುರುಳಿ ಇಂದ ಮಧ್ವನಾಮ ಮೂರ್ತಿ ಎಂದೇ ಪ್ರಸಿದ್ಧರಾದ ಶ್ರೀಯುತರು "ದೇವರು ಕೊಟ್ಟಾನು", "ಗಜೇಂದ್ರ ಮೋಕ್ಷ", ಮುಂತಾದ 75ಕ್ಕೂ ಹೆಚ್ಚು ಧ್ವನಿಸುರುಳಿಗಳನ್ನು ಹೊರತಂದಿದ್ದು ಇಂದಿಗೂ ಜನಪ್ರಿಯವಾಗಿ ಉಳಿದಿವೆ. ಅಲ್ಲದೇ "ಕರ್ನಾಟಕದ ಹರಿದಾಸರು" ಎಂಬ ಸುಮಾರು 45 ಹರಿದಾಸರ ಜೀವನ ಚರಿತ್ರೆಯನ್ನು ತಿಳಿಸುವ ಪ್ರವಚನಗಳನ್ನು ಹರಿದಾಸರ ಬಗ್ಗೆ ಪಿ.ಎಚ್.ಡಿ. ಮಾಡಿರುವ ಹಾಗೂ ನಾಡಿನ ಹಿರಿಯ ವಿದ್ವಾಂಸರಿಂದ ಮಾಡಿಸಿರುವುದು ವಿಶೇಷ. 2001ರಲ್ಲಿ "ಹರಿದಾಸ ಸಂಪದ ಟ್ರಸ್ಟ್" ಎಂಬ ಸಂಸ್ಥೆಯನ್ನು ಗೆಳೆಯರೊಂದಿಗೆ ಸೇರಿ "ಹರಿದಾಸ ಹಬ್ಬ" ಎಂಬ ಶೀರ್ಷಿಕೆಯಲ್ಲಿ ಏಳು ದಿನಗಳ ಕಾಲ ಹರಿದಾಸರ ಪದಗಳನ್ನು ಹಾಗೂ ಪ್ರವಚನಗಳನ್ನು ನಗರದ ಪ್ರತಿಷ್ಠಿತ ವೇದಿಕೆಯಾದ "ಗಾಯನ ಸಮಾಜ"ದಲ್ಲಿ ನಾಡಿನ ಎಲ್ಲಾ ಪ್ರಸಿದ್ಧ ಗಾಯಕ-ಗಾಯಕಿಯರಲ್ಲದೆ ಯುವ ಪ್ರತಿಭೆಗಳು ಸಹ ಅಲ್ಲಿ ಹಾಡುವಂತೆ ಮಾಡಿರುವುದು ಇಂದಿಗೂ ಜನಪ್ರಿಯವಾಗಿದೆ.
ಹರಿದಾಸರ ಸಂದೇಶಗಳನ್ನು ಸಾರುವ 'T-shirt'ಗಳನ್ನು ಮಾಡಿ ಅದು ಬಹು ಜನಪ್ರಿಯವಾಗಿರುವುದು ಅಲ್ಲದೇ ಎಲ್ಲಾ ಹರಿದಾಸರ ಭಾವಚಿತ್ರಗಳಿರುವ ಕ್ಯಾಲೆಂಡರುಗಳನ್ನು ಮಾಡಿಸಿ ದೇಶ-ವಿದೇಶಗಳಲ್ಲಿ ಎಲ್ಲಾ ಹರಿದಾಸರ ಬಂಧುಗಳ ಮನೆ-ಮಠದಲ್ಲಿ ರಾರಾಜಿಸುತ್ತಿವೆ.
ಹರಿದಾಸ ಸಂಪದ ಟ್ರಸ್ಟ್, ಹರಿದಾಸ ಸೇವಾ ಸಂಘ, ದಾಸವಾಣಿ ಕರ್ನಾಟಕ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ ಕಳೆದ 35 ವರ್ಷಗಳಿಂದ ಹರಿದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ-ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಜಿ.ವಿ. ಶ್ರೀನಿವಾಸ ಮೂರ್ತಿಯವರಿಗೆ "ಹರಿದಾಸ ಸಾಹಿತ್ಯ ಸೇವಾ ಧುರಂಧರ" ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.