ಬಳುವನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ 280 ಸಸಿಗಳ ನಾಟಿ

ಬಳುವನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ 280 ಸಸಿಗಳ ನಾಟಿ

      ಬೇತಮಂಗಲ: ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ವಲಯದ ಬಳುವನಹಳ್ಳಿ ಗ್ರಾಮದ ಹಿಂದೂ ರುದ್ರಭೂಮಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ 280 ವಿವಿಧ ಹಣ್ಣಿನ ಸಸಿಗಳನ್ನು ನಾಟಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸತೀಶ್ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯತೆಯಾಗಬೇಕು. ಸಸಿಗಳನ್ನು ನೆಟ್ಟು ಅವುಗಳನ್ನು ನಿರಂತರವಾಗಿ ಪೋಷಿಸಿ ಬೆಳೆಸಿದರೆ ಉತ್ತಮ ಪರಿಸರ ನಿರ್ಮಾಣವಾಗುವುದರ ಜೊತೆಗೆ ಸಕಾಲದಲ್ಲಿ ಮಳೆ-ಬೆಳೆ ಆಗಲು ಸಹಕಾರಿಯಾಗುತ್ತದೆ. ಅಲ್ಲದೆ, ಗಿಡಗಳು ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಲಿವೆ ಎಂದು ತಿಳಿಸಿದರು.

ಸಸಿಗಳ ವಿವಿಧ ವಿಧಗಳು, ಅವುಗಳ ಪಾಲನೆ ಹಾಗೂ ಸಂರಕ್ಷಣೆಯ ಕುರಿತು ಅವರು ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆಯೂ ಭಾಗವಹಿಸಿದ್ದವರಿಗೆ ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ರವಿ ರೆಡ್ಡಿ ಅವರು ಸಸಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ 280 ವಿವಿಧ ಹಣ್ಣಿನ ಸಸಿಗಳನ್ನು ನಾಟಿ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಸಿ ನಾಟಿ ಕಾರ್ಯಕ್ರಮವು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಬಳುವನಹಳ್ಳಿ ಹಾಲು ಒಕ್ಕೂಟದ ಅಧ್ಯಕ್ಷರು, ಗ್ರಾಮದ ಮುಖಂಡರು, ರೈತರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.