ಕಂಗಾಂಡ್ಲಹಳ್ಳಿಯಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್‌ ವತಿಯಿಂದ ಜನಸಂಪರ್ಕ ಹಾಗೂ ಕುಂದುಕೊರತೆ ಸಭೆ

ಚಿತ್ರ 01: ಕಂಗಾಂಡ್ಲಹಳ್ಳಿ ಗ್ರಾಮದಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಜನಸಂಪರ್ಕ ಮತ್ತು ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಂಗಾಂಡ್ಲಹಳ್ಳಿಯಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್‌ ವತಿಯಿಂದ ಜನಸಂಪರ್ಕ ಹಾಗೂ ಕುಂದುಕೊರತೆ ಸಭೆ

     ಬೇತಮಂಗಲ: ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಕೆಜಿಎಫ್ ಜಿಲ್ಲಾ ಪೊಲೀಸ್ ಕ್ಯಾಸಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ  ಕಂಗಾಂಡ್ಲಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಪೊಲೀಸ್ ಡಿವೈಎಸ್ಪಿ ಲಕ್ಷ್ಮಯ್ಯ, ಹಾಗೂ ಅಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ಈ ವೇಳೆ ಡಿವೈಎಸ್ಪಿ ಲಕ್ಷ್ಮಯ್ಯ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಅಥವಾ ಅಪರಾಧಗಳು ಕಂಡುಬಂದಲ್ಲಿ ಯಾವುದೇ ಭಯವಿಲ್ಲದೆ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಎಪಿಕೆ (APK) ಫೈಲ್‌ಗಳು ಹಾಗೂ ವಾಟ್ಸ್ಆ್ಯಪ್ ಮೂಲಕ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಹಾಗೆ ಮಾಡಿದರೆ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಯು ಹ್ಯಾಕರ್‌ಗಳ ಕೈಗೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.

ಪೋಷಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಗಾ ವಹಿಸಬೇಕು. ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸಿ ಮೋಸ ಹಾಗೂ ಅನಾಹುತಗಳಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪಟಾಕಿ ಚೀಟಿ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಇಂತಹ ಮೋಸಗಳಿಗೆ ಬಲಿಯಾಗದಂತೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.

ಅಕ್ರಮ ಮದ್ಯ ಮಾರಾಟಕ್ಕೆ ತಡೆ: ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಸಾರ್ವಜನಿಕರು ಮಾಹಿತಿ ನೀಡಿದರೆ, ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಮೂಢನಂಬಿಕೆ: ಜನರು ಹೆಚ್ಚಾಗಿ ಮೂಡನಂಬಿಕಗಳಿಗೆ ವಂಚಿತರಾಗುತ್ತಿದ್ದಾರೆ ಕಳ್ಳ ಸ್ವಾಮೀಜಿಗಳ ಮಾತುಗಳನ್ನು ನಂಬಿ ಹಣ ಕಳೆದುಕೊಳ್ಳುತ್ತಿದ್ದಾರೆ ಸಾರ್ವಜನಿಕರು ಯಾವುದೇ ರೀತಿಯ ಮೂಢನಂಬಿಕೆಗಳಿಗೆ ತುತ್ತಾಗದೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು. 

ಸ್ಥಳೀಯ ಕುಂದುಕೊರತೆಗಳಿಗೆ ಅಧಿಕಾರಿಗಳ ಸ್ಪಂದನೆ: ಸಭೆಯಲ್ಲಿ ಸಾರ್ವಜನಿಕರು ವೃದ್ಧಾಪ್ಯ ಪಿಂಚಣಿ, ಗ್ರಾಮದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ, ಅಕ್ರಮ ಜಮೀನು ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷಯ್ಯ, ವೃತ್ತ ನೀರಿಕ್ಷಕ ಎಸ್ ಆರ್ ಜಗದೀಶ್, ಪಿಎಸೈ ಸಂಗಮೇಶ್, ಪಿಡಿಒ ವೈಶಾಲಿ ಸಾಗರ್, ಗ್ರಾಮದ ಯುವನಾಯಕರಾದ ನವೀನ್ ರಾಮ್, ಕಂದಾಯ ಅಧಿಕಾರಿ ಮುರಳಿ ಸೇರಿದಂತೆ ಸಾರ್ವಜನಿಕರು ಹಾಗೂ ಉಪಸ್ಥಿತರಿದ್ದರು.