ಕಲೆಗಳ ಉತ್ಸವದ ‘ದಿ ಸ್ಟುಡಿಯೋ ಮಾರ್ಗಂ’ ಹಾಗೂ ‘ಆರೋಹಿ’ ಕಾರ್ಯಕ್ರಮಗಳಿಗೆ ಭರ್ಜರಿ ಚಾಲನೆ
ಬೆಂಗಳೂರು ಕಲೆಗಳ ಉತ್ಸವ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಆಯೋಜಿಸಲಾದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಾದ ದಿ ಸ್ಟುಡಿಯೋ ಮಾರ್ಗಂ’ ಹಾಗೂ ಆರೋಹಿ ಕಾರ್ಯಕ್ರಮಗಳ ಉದ್ಘಾಟನಾ ಆವೃತ್ತಿ ಬೆಂಗಳೂರಿನ ಸ್ಟುಡಿಯೋ 234ರಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಲೆಗಳ ಉತ್ಸವದ ನಿರ್ದೇಶಕಿ ಡಾ.ರಾಘಶ್ರೀ ಎಸ್. ಭಾರದ್ವಾಜ್ ಹಾಗೂ ಸಂಸ್ಥಾಪಕ ನಾಗೇಂದ್ರ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಪರಿಕಲ್ಪನೆ ಹಾಗೂ ರೂಪುರೇಷೆಯನ್ನು ಡಾ.ರಾಘಶ್ರೀ ಎಸ್. ಭಾರದ್ವಾಜ್ ಅವರು ರೂಪಿಸಿದ್ದರು.
‘ದಿ ಸ್ಟುಡಿಯೋ ಮಾರ್ಗಂ’ ಮತ್ತು ‘ಆರೋಹಿ’ ಕಾರ್ಯಕ್ರಮಗಳು ಶಾಸ್ತ್ರೀಯ ಕಲಾವಿದರಿಗೆ ತಮ್ಮ ಕಲಾ ಪ್ರದರ್ಶನದ ಜೊತೆಗೆ ತಮ್ಮ ವೃತ್ತಿಜೀವನದ ಪಯಣ, ಅನುಭವಗಳು, ಸವಾಲುಗಳು ಹಾಗೂ ಕಲಾಸಾಧನೆಯ ಹಿಂದಿನ ಪ್ರೇರಣೆಗಳನ್ನು ಹಂಚಿಕೊಳ್ಳಲು ವಿಶೇಷ ವೇದಿಕೆಯನ್ನು ಒದಗಿಸಿವೆ. ಈ ಮೂಲಕ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅರ್ಥಪೂರ್ಣ ಸಂವಾದವನ್ನು ಬೆಳೆಸುವುದರೊಂದಿಗೆ ಭಾರತೀಯ ಶಾಸ್ತ್ರೀಯ ಪರಂಪರೆಯ ವೈಭವವನ್ನು ಪರಿಚಯಿಸುವ ಉದ್ದೇಶ ಹೊಂದಿದೆ.
ಕಾರ್ಯಕ್ರಮದ ಪ್ರಥಮ ಆವೃತ್ತಿಗೆ ಕಲಾವಿದರು, ಗುರುಗಳು, ಪೋಷಕರು, ರಸಿಕರು ಹಾಗೂ ಕಲಾಪ್ರೇಮಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರ್ಯಕ್ರಮವು ಭರ್ಜರಿ ಯಶಸ್ಸು ಕಂಡಿತು.
ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಶ್ರೀಮತಿ ಶಿಲ್ಪಾ, ಕುಮಾರಿ ರಚನಾ, ಕುಮಾರಿ ಸೃಷ್ಟಿ ಹಾಗೂ ಕುಮಾರಿ ಸೌಮ್ಯ ಅವರ ತಂಡ ಮಹತ್ವದ ಪಾತ್ರ ವಹಿಸಿತು. ಕಾರ್ಯಕ್ರಮವನ್ನು ಕುಮಾರಿ ಸಪ್ನಾ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
ದೇಶದ ವಿವಿಧ ಭಾಗಗಳಲ್ಲಿರುವ ಶಾಸ್ತ್ರೀಯ ಕಲಾವಿದರು ಮುಂದಿನ ಆವೃತ್ತಿಗಳಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವಂತೆ ಕಲೆಗಳ ಉತ್ಸವ ಸಂಸ್ಥೆ ಮುಕ್ತ ಆಹ್ವಾನ ನೀಡಿದೆ. ವಿವಿಧ ಹಿನ್ನೆಲೆಯ ಪ್ರತಿಭಾವಂತ ಕಲಾವಿದರನ್ನು ಒಂದೇ ವೇದಿಕೆಗೆ ಕರೆತಂದು ಅವರ ಕಲೆ ಹಾಗೂ ಜೀವನ ಪಯಣವನ್ನು ಪರಿಚಯಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ.
ಈ ಯಶಸ್ವಿ ಆರಂಭದೊಂದಿಗೆ, ಪ್ರದರ್ಶನ ಕಲೆಗಳ ಪೋಷಣೆ, ಸಂಭ್ರಮ ಮತ್ತು ಪ್ರೋತ್ಸಾಹಕ್ಕಾಗಿ ಅರ್ಥಪೂರ್ಣ ವೇದಿಕೆಗಳನ್ನು ನಿರ್ಮಿಸುವ ತನ್ನ ಧ್ಯೇಯವನ್ನು ಮುಂದುವರಿಸುವ ವಿಶ್ವಾಸವನ್ನು ಕಲೆಗಳ ಉತ್ಸವ ವ್ಯಕ್ತಪಡಿಸಿದೆ.
What's Your Reaction?