ಕ್ಯಾಸಂಬಳ್ಳಿ: ದೇವರ, ಮೂಢನಂಬಿಕೆ ಹೆಸರಲ್ಲಿ ವಂಚಿಸುತ್ತಿದ್ದ ಜಾಲ ಪತ್ತೆ; 7 ಮಂದಿ ಖೆಡ್ಡಾಕ್ಕೆ, 6 ಮಹಿಳೆಯರ ರಕ್ಷಣೆ

ಕ್ಯಾಸಂಬಳ್ಳಿ: ದೇವರ, ಮೂಢನಂಬಿಕೆ ಹೆಸರಲ್ಲಿ ವಂಚಿಸುತ್ತಿದ್ದ ಜಾಲ ಪತ್ತೆ; 7 ಮಂದಿ ಖೆಡ್ಡಾಕ್ಕೆ, 6 ಮಹಿಳೆಯರ ರಕ್ಷಣೆ

       ಕೆ.ಜಿ.ಎಫ್: ದೇವರ ಹೆಸರು ಹಾಗೂ ಮೂಢನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ಕ್ಯಾಸಂಬಳ್ಳಿ ಪೊಲೀಸರು, ಪ್ರಮುಖ ಆರೋಪಿ ಸೇರಿ ಒಟ್ಟು ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಐವಾರಹಳ್ಳಿ ಗ್ರಾಮದ ಬಳಿ ಜುಲೈ 14 ರಂದು ಈ ಕಾರ್ಯಾಚರಣೆ ನಡೆದಿದೆ.
ಅಮಾನವೀಯ ಕೃತ್ಯಗಳ ‘ಬೇತಾಳ ಮಹಾಶಕ್ತಿ ಪೀಠ’
ಐವಾರಹಳ್ಳಿ ಗ್ರಾಮದ ಬಳಿ ಚಂದ್ರ ಅಲಿಯಾಸ್ ಚಂದ್ರಬಾಬು ಎಂಬಾತ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ತನ್ನ ಸಹಚರರೊಂದಿಗೆ ಸೇರಿಕೊಂಡು ‘ಬೇತಾಳ ಮಹಾಶಕ್ತಿ ಪೀಠ’ ಎಂಬ ಕೇಂದ್ರವನ್ನು ಸ್ಥಾಪಿಸಿದ್ದನು. ದೇವರ ಹೆಸರಿನಲ್ಲಿ ದೆವ್ವ ಬಿಡಿಸುವುದು, ಕೆಟ್ಟ ಗಾಳಿ ಓಡಿಸುವುದು ಹಾಗೂ ರೋಗ ವಾಸಿ ಮಾಡುವ ನೆಪದಲ್ಲಿ ಅಮಾಯಕ ಮಹಿಳೆಯರನ್ನು ಅಕ್ರಮ ಬಂಧನದಲ್ಲಿಡಲಾಗುತ್ತಿತ್ತು. ಚಿಕಿತ್ಸೆಯ ಹೆಸರಿನಲ್ಲಿ ಮಹಿಳೆಯರಿಗೆ ಚಾಟಿಯಿಂದ ಹೊಡೆಯುವುದು, ಬೇವಿನ ಕಡ್ಡಿಯಿಂದ ಥಳಿಸುವುದು ಮತ್ತು ತಲೆಕೂದಲು ಹಿಡಿದು ಎಳೆದಾಡುವಂತಹ ಅಮಾನವೀಯ ಹಿಂಸೆಗಳನ್ನು ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದಿದ್ದರೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ಈ ಜಾಲವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಪಡೆದುಕೊಂಡಿತ್ತು.
ಪೊಲೀಸರ ಮಿಂಚಿನ ದಾಳಿ ಮತ್ತು ಬಂಧನ
ಈ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶಿವಾಂಶು ರಜಪೂತ್ ಅವರ ಸೂಚನೆ ಮೇರೆಗೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಡಿ.ವೈ.ಎಸ್.ಪಿ ವಿ. ಲಕ್ಷ್ಮಯ್ಯ ಅವರ ಮಾರ್ಗದರ್ಶನದಲ್ಲಿ ಬೇತಮಂಗಲ ವೃತ್ತದ ಸಿ.ಪಿ.ಐ ಎಸ್.ಆರ್. ಜಗದೀಶ್, ಕ್ಯಾಸಂಬಳ್ಳಿ ಪಿ.ಎಸ್.ಐ ಸಂಗಮೇಶ್ ಕೊಲ್ಹಾರ್ ಹಾಗೂ ಬೇತಮಂಗಲ ಪಿ.ಎಸ್.ಐ ತ್ಯಾಗರಾಜ್.ಎಂ ಒಳಗೊಂಡ ತಂಡವು ಸಿಬ್ಬಂದಿಯೊಂದಿಗೆ ಐವಾರಹಳ್ಳಿಯ ಬೇತಾಳ ಕೇಂದ್ರದ ಮೇಲೆ ಮಿಂಚಿನ ದಾಳಿ ನಡೆಸಿತು.
ಬಂಧಿತ ಆರೋಪಿಗಳು:
ಚಂದ್ರ @ ಚಂದ್ರಬಾಬು (ಮುಖ್ಯ ಆರೋಪಿ)
ಚಿನ್ನ, ಬಾಬು, ಶಂಕರಪ್ಪ, ಮುನಿವೆಂಕಟರೆಡ್ಡಿ, ಭಾಸ್ಕರ್ ಮತ್ತು ಸಂತೋಷ್ (ಸಹಚರರು)
ಆರೋಪಿಗಳ ವಿರುದ್ಧ 'ಕರ್ನಾಟಕ ಅಮಾನವೀಯ ಅನಿಷ್ಟ ಪದ್ಧತಿಗಳು ಮತ್ತು ಮಾಟಮಂತ್ರ ತಡೆ ಕಾಯ್ದೆ' ಹಾಗೂ 'ಭಾರತೀಯ ನ್ಯಾಯ ಸಂಹಿತೆ (BNS)-2023' ಅಡಿಯಲ್ಲಿ ಪ್ರಕರಣ ದಾಖಲಿಸಿ, ಅವರನ್ನು ವಶಕ್ಕೆ ಪಡೆಯಲಾಗಿದೆ.
ಆರು ಮಹಿಳೆಯರ ರಕ್ಷಣೆ
ಕಾರ್ಯಾಚರಣೆಯ ವೇಳೆ ಈ ಕೇಂದ್ರದಲ್ಲಿ ಅಕ್ರಮ ಬಂಧನದಲ್ಲಿದ್ದ ಸರಸಮ್ಮ, ಅಮ್ಮಾಜಿ, ರಾಣಿಯಮ್ಮ, ದುರ್ಗಾ, ಜಯಮ್ಮ ಮತ್ತು ಕಾಂಚನವಂಶಿ ಎಂಬ ಆರು ಮಹಿಳೆಯರನ್ನು ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ತದನಂತರ ಕೌನ್ಸೆಲಿಂಗ್ ನಡೆಸಿ ಅವರನ್ನು ಸುರಕ್ಷಿತವಾಗಿ ಅವರ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತಂಡಕ್ಕೆ ಪ್ರಶಂಸೆ:
ಸಾರ್ವಜನಿಕರನ್ನು ಮೂಢನಂಬಿಕೆಯ ಜಾಲದಿಂದ ಮುಕ್ತಗೊಳಿಸಿ, ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿದ ಡಿವೈಎಸ್ಪಿ ವಿ. ಲಕ್ಷ್ಮಯ್ಯ, ಸಿಪಿಐ ಎಸ್.ಆರ್. ಜಗದೀಶ್ ಹಾಗೂ ಇಡೀ ಪೊಲೀಸ್ ತಂಡದ ಸಾರ್ವಜನಿಕ ಹಿತರಕ್ಷಣೆಯ ಈ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.