ಕೆಜಿಎಫ್ ಜಿಲ್ಲಾ ಪೊಲೀಸ್ ಸಾಧನೆ: ₹78 ಲಕ್ಷ ಮೌಲ್ಯದ ಚಿನ್ನಾಭರಣ ವಶ, 14 ರೌಡಿಗಳ ಗಡಿಪಾರು
ಕೆಜಿಎಫ್: ನಗರದಲ್ಲಿ ಹಗಲು ಮತ್ತು ರಾತ್ರಿ ವೇಳೆ ಕನ್ನಗಳವು ನಡೆಸುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಂದಾಜು 78.68 ಲಕ್ಷ ರೂ. ಮೌಲ್ಯದ 562 ಗ್ರಾಂ ಚಿನ್ನಾಭರಣ ಹಾಗೂ 80,000 ರೂ. ಮೌಲ್ಯದ 400 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಿವಾಂಶು ರಾಜಪೂತ್ ತಿಳಿಸಿದರು.
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅವರು ಈ ಮಹತ್ವದ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡರು.
ರೌಡಿ ಮುಕ್ತ ಕೆಜಿಎಫ್‌ಗೆ ಪಣ
ನಗರವನ್ನು ಅಪರಾಧ ಮುಕ್ತ ಹಾಗೂ ರೌಡಿ ಮುಕ್ತ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಸ್‌ಪಿ ತಿಳಿಸಿದರು.
ಈಗಾಗಲೇ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ 14 ರೌಡಿ ಆಸಾಮಿಗಳನ್ನು ಗಡಿಪಾರು ಮಾಡಲಾಗಿದೆ.
ಈ ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಪ್ರಸ್ತುತ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿದೆ.
ಮಾದಕ ವಸ್ತುಗಳ ವಿರುದ್ಧ ಸಮರ ಮತ್ತು ಜಾಗೃತಿ
ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗಾಂಜಾ ಮಾರಾಟ ಜಾಲದ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಂಜಾ ಮಾರಾಟ ಮಾಡುವ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.
'ಡ್ರಗ್ಸ್ ಮುಕ್ತ ಕೆಜಿಎಫ್' ಜಾಥಾ:
ಮಾದಕ ವಸ್ತುಗಳ ವಿರುದ್ಧ ಸಾರ್ವಜನಿಕರಲ್ಲಿ ಹಾಗೂ ಯುವಕರಲ್ಲಿ ಅರಿವು ಮೂಡಿಸಲು ಇತ್ತೀಚೆಗಷ್ಟೇ ನಗರದಲ್ಲಿ 'ಅಲ್ಟ್ರಾ ಮ್ಯಾರಥಾನ್' ಓಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ "ಡ್ರಗ್ಸ್ ಮುಕ್ತ ಕೆಜಿಎಫ್" ಹೆಸರಿನಲ್ಲಿ ಬೃಹತ್ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್‌ಪಿ ಶಿವಾಂಶು ರಾಜಪೂತ್ ಪ್ರಕಟಿಸಿದರು.
'ಕಸ ಮುಕ್ತ ಕೆಜಿಎಫ್'ಗೆ ಎಸ್‌ಪಿ ಕರೆ
ಸುಂದರ ಕೆಜಿಎಫ್ ನಿರ್ಮಾಣಕ್ಕಾಗಿ ಕೇವಲ ಅಪರಾಧ ಮುಕ್ತ ಮಾತ್ರವಲ್ಲದೆ, ನಗರವನ್ನು ಕಸ ಮುಕ್ತವನ್ನಾಗಿಯೂ ಮಾಡಬೇಕಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. "ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಡಬೇಕು. ಈ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸ್ವಚ್ಛತೆಯನ್ನು ಕಾಯ್ದುಕೊಂಡರೆ ಮಾತ್ರ ಸುಂದರ ನಗರ ನಿರ್ಮಾಣ ಸಾಧ್ಯ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸೋಣ" ಎಂದು ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಇನ್ಸ್ಪೆಕ್ಟರ್ ಮಹೇಶ್ ಮಾಲಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.