ಪಾಪಜ್ಜಿ ಮಾವಿನ ಮರ.

ಪಾಪಜ್ಜಿ ಮಾವಿನ ಮರ.

ಯುಗಾದಿ ಬಂತೆಂದರೆ ಕೊಟ್ಟೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಬಲಗಡೆ ಪಾಪಜ್ಜಿಯ ಹೊಲವಿದ್ದು ಪಾಪಜ್ಜಿ ತನ್ನ ಜೀವಿತಾವದಿಯಲ್ಲಿ ಕಲ್ಲು, ಮುಳ್ಳು, ಗಿಡ ಗಂಟೆಗಳು ಕಡಿದು ಸರ್ಕಾರಿ ಭೂಮಿಯನ್ನು ಕೂಲಿ ನಾಲಿ ಮಾಡಿ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯವರ್ತಿಗಳಿಗೆ ದುಡ್ಡು ಸುರಿದು ಮೋಸ ಹೋಗಿ ಚಪ್ಪಲಿಯೇ ಇಲ್ಲದೇ ಈಚಲಬೊಮ್ಮನಹಳ್ಳಿಯಿಂದ ಕೂಡ್ಲಿಗಿ ಪಟ್ಟಣಕ್ಕೆ ಬರಿಗಾಲಿನಲ್ಲಿಯೇ ತಿರುಗಿ ಅಧಿಕಾರಿಗಳನ್ನು ಕಾಡಿ ಬೇಡಿ ತನ್ನ ಕುಟುಂಬಕ್ಕೋಸ್ಕರ ಮೂರಕ್ರೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಬೆಳೆ ಬೆಳೆದು ಬದುಕು ಸಾಗಿಸಿದ ಗಟ್ಟಿಗಿತ್ತಿ. ಬದುಕಿನುದ್ದಕ್ಕೂ ಜಮೀನಿಗೂ ಮನೆಗೂ ಬರಿಗಾಲಿನಲ್ಲಿಯೇ ನಡೆದು ಆಳುಗಳನ್ನಿಡದೆ ತಾನೇ ಕಲ್ಲು ಮುಳ್ಳು ಆರಿಸಿ ಸಮತಟ್ಟಾಗಿ ಮಾಡಿ ಜಮೀನು ಪಕ್ಕದಲ್ಲಿಯೇ ಹಳ್ಳ ಇದ್ದುದರಿಂದ ನೀರು ಜಾಸ್ತಿ ಬಂದು ಹಳ್ಳ ಜಮೀನನ್ನು ಕೊಚ್ಚಿಕೊಂಡು ಹೋಗಬಾರದೆಂಬ ದೂರದೃಷ್ಠಿಯಿಂದ ಹಳ್ಳದ ದಂಡೆಯಲ್ಲಿ ಮಾವಿನ ಗಿಡವೊಂದನ್ನು ನೆಟ್ಟು ಪೋಷಣೆ ಮಾಡಿದಳು ಪಾಪಜ್ಜಿಯ ಪೋಷಣೆಯಿಂದಲೇ ಮಾವಿನ ಮರ ಹತ್ತಾರು ವರ್ಷಗಳಲ್ಲಿ ಹೆಮ್ಮರವಾಗಿ ಹಬ್ಬಿತು. ಪಾಪಜ್ಜಿಗೆ ವಯಸ್ಸಾಗಿ ಗೂನು ಬೆನ್ನು ಆವರಿಸಿತು ಇಷ್ಟಾದರೂ ಪಾಪಜ್ಜಿ ಹೊಲ ಮನೆಗೆ ನಡೆದುಕೊಂಡು ಹೋಗುವುದನ್ನು ಬಿಡಲೇ ಇಲ್ಲ ಮಾವಿನ ಮರವನ್ನು ಬಹಳ ಪ್ರೀತಿಯಿಂದ ಸಲಹಿ ಬೆಳೆಸಿದಳು ಮರ ಫಲ ನೀಡಲು ಶುರು ಮಾಡಿತು ಪಾಪಜ್ಜಿ ಮಾವಿನ ಮರವನ್ನು ಕಳ್ಳ ಕಾಕರಿಂದ ಹಗಲು ರಾತ್ರಿ ಕಾವಲಿದ್ದು ಸಂರಕ್ಷಿಸಿದಳು. ಯಾರಾದರೂ ಮಾವಿನ ಮರವನ್ನು ಹಾಳು ಮಾಡಲು ನೋಡಿದರೆ ದೂರದಿಂದಲೇ ಗೂನು ಬೆನ್ನಿದ್ದರು ಗೋಜಲಕ್ಕಿಯಂತೆ ನಡೆದು "ಯಾವನಲೋ ಅವನು ಕಳ್ಳ ಬಾಡ್ಯ ಮಾವುನ್ಕಾಯಿ ಕದಿತಿರೋದು ಬೆಳ್ಳುಳ್ಳಿ ಬೇರು ಎರಡು ಹೊರಗಡೆ ಬರಸ್ತೀನಿ ಇರು" ಎಂಬ ಒಂದು ಅವಾಜಿಗೆ ಹುಡುಗರು ಓಟ ಕೀಳತ್ತಿದ್ದರು ತಾನು ನೆಟ್ಟ ಗಿಡ ಹೆಮ್ಮರವಾಗಿ ಇಡೀ ಊರ ಹಬ್ಬ ಹರಿದಿನಗಳಿಗೆ, ಯುಗಾದಿಯ ತಳಿರು ತೋರಣಕ್ಕೆ ಆಸರೆಯಾಯಿತೆಂದು ಮೇಲಾಗಿ ಪಾಪಜ್ಜಿಯ ಮಾವಿನ ಮರವಂತೆಲೇ ಕರೆಯುತ್ತದ್ದುದು ಪಾಪಜ್ಜಿಗೆ ಜೀವನ ಸಾರ್ಥಕವಾಯಿತೆಂದೆನಿಸಿತು.


     ಯುಗಾದಿ  ಬಂತೆಂದರೆ ಸಾಕು ದ್ಯಾಮಣ್ಣ, ಭೀಮ,ಕೋಟಿ,ಶಿವಕೋಟಿ,ಶಿವ್ವು ಇತ್ಯಾದಿ ದನ ಕಾಯುವ ಗೆಳೆಯರು ಮನೆಗೆ ತಳಿರು ತೋರಣ ಕಟ್ಟಲು ಮಾವಿನ ಎಲೆ ಮತ್ತು ಬೇವಿನ ತಪ್ಪಲು ಸಂಗ್ರಹಿಸಲು ಬೆಳ್ಳಂಬೆಳಗ್ಗೆ ಎದ್ದು ಸುಣ್ಣ ತಂಬಾಕು, ಗುಟಕಾ ಬಾಯಲ್ಲಿ ಅಗಿದು ಉಗುಳತ್ತಾ ಪಾಪಜ್ಜಿಯು ಜಮೀನಿಗೆ ಬರುವುದರೊಳಗಾಗಿ ಮಾವಿನ ಎಲೆಗಳ ಜೊತೆಗೆ ಮರದಲ್ಲಿರುವ ಕಾಸ್ ಮಾವಿನಕಾಯಿಗಳನ್ನು ಎಸ್ಕೇಪ್ ಮಾಡಬಹುದೆಂಬ ಉದ್ದೇಶದಿಂದ ದೊಡ್ಡ ದೊಡ್ಡ ಹೆಜ್ಜೆಯನ್ನಾಕುತ್ತಾ ದ್ಯಾಮಣ್ಣ " ಜಲ್ದೀ ಜಲ್ದೀ ನಡಿರಲೇ ಹುಡುಗ್ರ ಆ ಹಾಳಾದ್ ಮುದುಕಿ ಬಂದ್ರ ಚಣಾಲ್ ಬಿಚ್ಚಂಗ್ ಹೊಡಿತಾಳಲೇ ಲೇ" ಎಂದಾಗ ಶಿವಕೋಟಿ " ಆ ಮುದುಕಿ ಏನ್ ಮಾಡ್ತಾಳೆ ಬಾರಲೇ ಹುಡುಗ ಆ ಮುದಿಕಿ ರೋಡ್ ಕ್ರಾಸ್ ಮಾಡೋದ್ರೊಳಗೆ ನಾನು ಶಿವ್ವು ಮಂಗನಂಗ ಮರ ಹತ್ತಿ ಮಾವಿನ ಗೊನಿ ಮುರಕಂಡು ಒಂದ್ ಗೋಣಿಚೀಲ ಮಾವ್ನಕಾಯಿ ದುಂಡುಗ್ ಮಾಡ್ತೀವಿ" ಎಂದು ಮೋಟು ಬೀಡಿಯನ್ನು ಸೇದಿ ಎಸೆದು ಪಾಪಜ್ಜಿಯ ಮಾವಿನ ಮರದ ಹತ್ತಿರ ತೆರಳುವಾಗ ಕೋಟಿ "ಲೇ ಆ ಮಾವ್ನ್ ಮರದಾಗ ದೆವ್ವ ಇರ್ತಾವಂತಲೇ ಸ್ವಲುಪು ಬೆಳಕರದಾಗ ಹೋಗೋಣಂತೆ ಇರು ಎಂದಾಗ ಭೀಮ " ಲೇ ಪುಕ್ಕುಲ ಸೂಳಮಗನೇ ನಿನ್ನವ್ವೌನ ಯಾವ ದೆವ್ವಲೇ ನಮ್ಮನ್ನ ನೋಡಿದ್ರೆ ಎಲ್ಲಾ ದೆವ್ವ ಪಿಶಾಚಿಗಳು ಓಡಿ ಹೊಕ್ಕಾವು ಮುಕುಳಾಕ ಕೈ ಇಟ್ಗಂಡು ಬಾರಲೇ ಮಂಗ" ಎಂದು ಮರದ ಸಮೀಪ ತಲುಪಿದರು.


     ದ್ಯಾಮಣ್ಣ ತಲೆಗೆ ಟವೆಲ್ಲು ಸುತ್ತಿಕೊಂಡು ಇಬ್ಬರು ಮನುಷ್ಯರು ತಬ್ಬಿಕೊಂಡರಷ್ಟೇ ತೆಕ್ಕೆಗೆ ದಕ್ಕಬಲ್ಲ ಮರವನ್ನು ಒಂದೊಂದೆ ಪಾದಗಳನ್ನು ಮರದ ಬುಗುಟಿಯ ಮೇಲಿಟ್ಟು ಮರವನ್ನತ್ತುವ ಸಮಯದಲ್ಲಿ ಮರದ ಬುಡದಲ್ಲಿಯೇ ತಾಡಪಲ್ಲನ್ನು ಹೊದ್ದುಕೊಂಡು ಕುಳಿತುಕೊಂಡಿದ್ದ ಪಾಪಜ್ಜಿ ಎದ್ದು ಚಿಮಣಿಯ ಲಾಟೀನ್ನಿನ ದೀವಿಗೆ ಹಿಡಿದು "ಯಾರಪ್ಪ ಅದು ಮರ ಹತ್ತುತ್ತಿರೋದು ಹೇಳೋರು, ಕೇಳೋರು ನಿಮಗೆ ಯಾರು ಇಲ್ಲೇನು" ಎಂದಾಗ ಕತ್ತಲೆಯ ಚಿಮಣಿಯ ಬೆಳಕಿನಲ್ಲಿ ಗೂನು ಬೆನ್ನಿನ ಪಾಪಜ್ಜಿ ಥೇಟ್ ದೆವ್ವದ ರೀತಿ ಕಂಡು ಕೋಟಿ "ಲೇ ದೆವ್ವ ಬಂದಾತೀ ನಡೀರಲೇ,,,,," ಎಂದು ರೋಡಿನ ಬಳಿ ಓಟ ಕಿತ್ತರು ಮರದಿಂದ ಅರ್ಧಕ್ಕೆ ಹಾರಿ ಬಿದ್ದ ದ್ಯಾಮಣ್ಣ ಹೆದರಿ ಚಡ್ಡಿಯಲ್ಲಿ ಉಚ್ಚೆ ಒಯ್ದುಕೊಂಡು 'ಯಪ್ಪಾ ಕೊಟ್ಲಪ್ಪ ನನ್ನ ಕಾಪಾಡಪ್ಪ ದೇವರೆ" ಎಂದು ಬೇಡಿಕೊಂಡಾಗ ದ್ಯಾಮಣ್ಣನ ಗುರುತು ಹಿಡಿದ ಪಾಪಜ್ಜಿ "ಲೋ ಹುಡುಗ ನೀನು ರಾಮಣ್ಣನ ಮಗ ದ್ಯಾಮಣ್ಣ ಅಲ್ಲೇನು, ಎದ್ದಾಳಪ ಮ್ಯಾಕ ಏನಾದ್ರು ಪೆಟ್ಟಾತೇನು" ಎಂದು ತಾನೇ ಎದ್ದೇಳಿಸಿದಳು ಎದ್ದ ದ್ಯಾಮಣ್ಣ "ಲೇ ಪುಕ್ಕುಲ್ರಾ ಪಾಪಜ್ಜಿ ಬರ್ರಲೇ ಹೆದರಿಕ್ಯಂಡು ಹೊಂಟೀರಲ್ಲಲೇ,,," ಎಂದು ನಕ್ಕಾಗ ಓಡಿ ಬಂದ ಭೀಮ, ಕೋಟಿ,ಶಿವಕೋಟಿ,ಶಿವ್ವು "ಲೇ ಯಕರಾ ಪಾಪಜ್ಜಿ ಸತ್ತು ಎರಡು ವರ್ಷ ಆತ್ಲೇ ಪಾಪಜ್ಜಿ ದೆವ್ವ ಆಗ್ಯಾಳ ಏನಾಗೇತ್ಲೇ ನಿನಗೆ" ಎಂದು ಮನೆಗೆ ಹೊರಡಲು ಸಿದ್ದರಾದಾಗ ಒಂದು ಮೂಟೆ ಮಾವಿನ ಕಾಯಿ ಮತ್ತು ಮಾವಿನ ಎಲೆಗಳ ಗೊಂಚಲು ಇತ್ತು ಅದನ್ನು ಎತ್ತಿಕೊಂಡು ಪಾಪಜ್ಜಿಯ ಮಾವಿನ ಮರದ ಕಡೆ ತಿರುಗಿಯು ನೋಡದೆ ಮನೆ ಕಡೆ ಹೊರಟರು.

ಕೆ.ಶ್ರೀಧರ್(ಕೆ.ಸಿರಿ)