ಭಾರತದ ಸಂವಿಧಾನ ರಚನೆ ಮತ್ತು ಅಂಬೇಡ್ಕರ್

ಭಾರತದ ಸಂವಿಧಾನ ರಚನೆ ಮತ್ತು ಅಂಬೇಡ್ಕರ್

1920 ರಲ್ಲಿ ಮೋತಿಲಾಲ್ ನೆಹರು ಹಾಗೂ ಮತ್ತಿತರ ಮುಖಂಡರು ಭಾರತಕ್ಕೆ ಒಂದು ಪ್ರತ್ಯೇಕ ಸಂವಿಧಾನ ಬೇಕು ಮತ್ತು ಅದನ್ನು ಭಾರತೀಯರೇ ರಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಅವರ ನೇತೃತ್ವದಲ್ಲಿ ಭಾರತಕ್ಕೆ ಒಂದು ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಇದು "ನೆಹರು ವರದಿ" ಎಂದೇ ಜನಪ್ರಿಯವಾಯಿತು. ಈ ವರದಿಯು ಮೂಲಭೂತ ಹಕ್ಕುಗಳು, ಸಂಸದೀಯ ವ್ಯವಸ್ಥೆಯ ಬಗ್ಗೆ, ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕು, ಭಾಷಾವಾರು ಪ್ರಾಂತ್ಯಗಳ ರಚನೆ, ಮತ್ತು ಸ್ವತಂತ್ರ ನ್ಯಾಯಾಂಗದ ರಚನೆಗಳನ್ನು ಶಿಫಾರಸು ಮಾಡಲಾಗಿತ್ತು. ಆದರೆ ಬ್ರಿಟಿಷ್ ಸರ್ಕಾರ ಮೋತಿಲಾಲ್ ನೆಹರು ಅವರ ವರದಿಯನ್ನು ನಿರಾಕರಿಸಿತು.

ಇದಾದ ನಂತರ 1933 ರಲ್ಲಿ ಜವಾಹರಲಾಲ್ ನೆಹರು ಅವರು ಮತ್ತೆ ಭಾರತಕ್ಕೆ ಒಂದು ಸಂವಿಧಾನ ರಚನೆ ಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು ಮತ್ತು ಅದನ್ನು ರಚಿಸಲು ಭಾರತೀಯರೇ ಚುನಾಯಿಸಿದ ಸದಸ್ಯರನ್ನು ಒಳಗೊಂಡಂತ ಒಂದು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ 1934ರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಸಂವಿಧಾನ ಸಮಿತಿಯನ್ನು ಚುನಾಯಿಸುವಂತೆ ಒತ್ತಾಯಿಸಿ ಒಂದು ಗೊತ್ತುವಳಿಯನ್ನು ಅಂಗೀಕರಿಸಿತು. ಆದರೆ ಬ್ರಿಟಿಷ್ ಸರ್ಕಾರ ಈ ಬೇಡಿಕೆಯನ್ನು ಒಪ್ಪಿದರೂ ಕೂಡ ಎರಡನೇ ಮಹಾಯುದ್ಧದ ನೆಪದಲ್ಲಿ ಇದನ್ನು ಅನುಷ್ಠಾನಗೊಳಿಸಲಿಲ್ಲ.

ಎರಡನೆಯ ಮಹಾಯುದ್ಧ ಮುಗಿದ ನಂತರ 1945 ರಲ್ಲಿ ಇಂಗ್ಲೆಂಡ್ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಲೇಬರ್ ಪಕ್ಷ ಅಧಿಕಾರಕ್ಕೆ ಬಂತು. ಕ್ಲೆಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನ ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು. ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389( ಮುಂದೆ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು)ಮುಖಂಡರನ್ನು ಒಳಗೊಂಡಂತಹ ಒಂದು ಸಂವಿಧಾನ ಸಭೆಯನ್ನ ರಚಿಸಲಾಯಿತು. ಇದರಲ್ಲಿ  ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಸ್ಟರು, ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತ ಉಳ್ಳವರು, ಬಿನ್ನಪಂಥಗಳಿಗೆ ಸೇರಿದವರು, ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು, ಶ್ರೀಮಂತರು, ಮಧ್ಯಮ ವರ್ಗದವರು, ಹಿಂದುಳಿದ ವರ್ಗದವರು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿ ಇದ್ದರು. ಸಂವಿಧಾನ ಸಭೆಯ ಸದಸ್ಯರು ಡಾ. ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದರು. ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಅಅಅಅಅಅಅಭಾರತ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದಿಂದ ನಿರೂಪಿಸಿದವರು ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ. 479 ಪುಟಗಳ ಹೊತ್ತಿಗೆಯನ್ನು ಬರೆಯಲು ಪ್ರೇಮ್ ಬಿಹಾರಿ ಅವರಿಗೆ ತಗುಲಿದ್ದು ಆರು ತಿಂಗಳ ಅವಧಿ ಹಾಗೂ 254 ಪೆನ್ ನಿಬ್ ಗಳು. ದೆಹಲಿಯ ಸೆಂಟ್ ಸ್ಟೀಫನ್ ಸನ್ ಕಾಲೇಜಿನ ಪದವೀಧರರಾದ ಪ್ರೇಮ್ ಬಿಹಾರಿ ಅವರಿಗೆ ಸಂವಿಧಾನವನ್ನು ಬರೆಯುವ ಜವಾಬ್ದಾರಿ ವಹಿಸಿದಾಗ ರೋಮಾಂಚಿತರಾಗಿ, ಈ ಕೆಲಸಕ್ಕೆ ಯಾವುದೇ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ಗೌರವ ಧನ ಸ್ವೀಕರಿಸುವಂತೆ ಜವಾಹರಲಾಲ್ ನೆಹರು ಅವರು ಆಗ್ರಹಿಸಿದಾಗ ಅವರು ಹಣಕ್ಕೆ ಬದಲಾಗಿ ಸಂವಿಧಾನದ ಪ್ರತಿಪುಟದ ಅಂತ್ಯದಲ್ಲಿ ತಮ್ಮ ಹೆಸರನ್ನು ಹಾಗೂ ಕೊನೆಯ ಪುಟದಲ್ಲಿ ತಮ್ಮ ಹೆಸರಿನ ಜೊತೆಗೆ ತಮ್ಮ ತಾತನ ಹೆಸರು ಬರೆಯಲು ಅನುಮತಿ ಕೋರಿದರಂತೆ. ಅದಕ್ಕೆ ನೆಹರು ಸಮ್ಮತಿಸಿದರು ಎನ್ನುತ್ತವೆ ಇತಿಹಾಸದ ಪುಸ್ತಕಗಳು. ಸಂವಿಧಾನಕ್ಕೆ ಸುಂದರ ಕಲೆಯ ಸ್ಪರ್ಶ ನೀಡಿದವರು ನಂದಲಾಲ್ ಬೋಸ್ ಅವರು. ರವೀಂದ್ರನಾಥ ಟ್ಯಾಗೋರ್ ಅವರಿಂದ ಪ್ರೇರಣೆ ಪಡೆದಿದ್ದ ನಂದಲಾಲ್ ಅವರು ಶಾಂತಿನಿಕೇತನದ ಪ್ರಾಂಶುಪಾಲರಾಗಿದ್ದರು. ದೇಶದ ಮಹಾನ್ ಕಲಾವಿದರಲ್ಲಿ ಒಬ್ಬರಾದ ನಂದಲಾಲ್ ಅವರು ತಮ್ಮ ಶಿಷ್ಯರೊಡಗೂಡಿ ಸಂವಿಧಾನಕ್ಕೆ ಕಲೆಯ ಚಿತ್ತಾರ ಮಾಡಿರುವುದಲ್ಲದೆ, ಭಾರತ ರತ್ನವು ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗಳ ಚಿಹ್ನೆಯನ್ನು ರೂಪಿಸಿದರು.

ಕೆಲವು ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಬೆಳವಣಿಗೆಗಳ ಕಾರಣ ಮುಸ್ಲಿಂ ಲೀಗ್ ಸದಸ್ಯರು ಸಂವಿಧಾನ ಸಭೆಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಉಳಿದ 272 ಸದಸ್ಯರು 1946 ಡಿಸೆಂಬರ್ ಆರರಂದು ಮೊದಲನೇ ಸಭೆ ಸೇರಿ ಸಂವಿಧಾನ ರಚನೆ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ರೂಪುಗೊಂಡ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದಿಟ್ಟು ಚರ್ಚೆಗೆ ಅವಕಾಶಗಳನ್ನು ಕಲ್ಪಿಸಲಾಯಿತು. ಜನತೆ ಈ ಕರಡು ಸಂವಿಧಾನವನ್ನು ಚರ್ಚಿಸಿ 7635 ತಿದ್ದುಪಡಿಗಳನ್ನು ಸೂಚಿಸಿದರು. ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಒಪ್ಪಿ 1949 ನವೆಂಬರ್ 26ರಂದು ಅಂತಿಮ ಕರಡನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಯಿತು. ಆ ದಿನದ ನೆನಪಿನಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳ 26ನೇ ದಿನವನ್ನು "ಕಾನೂನು ದಿನ"ಎಂದು ಆಚರಿಸಲಾಗುತ್ತಿದೆ. ಈಗ ಕಳೆದ ಎರಡು ವರ್ಷಗಳಿಂದ ಈ ದಿನವನ್ನು "ಸಂವಿಧಾನ ದಿನ"ವನ್ನಾಗಿ ಪುನರ್ ಘೋಷಿಸಲಾಗಿದೆ. ಹೀಗೆ 2 ವರ್ಷ 11 ತಿಂಗಳು 17 ದಿವಸಗಳ ಪರಿಶ್ರಮದ ಫಲವಾಗಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ರಚನೆ ಮಾಡಲಾಯಿತು.

ಸಂವಿಧಾನದ ರಚನಾ ಸಭೆಯಲ್ಲಿ ಕೆಲವು ಸದಸ್ಯರು ಹೆಚ್ಚು ಕೊಡುಗೆ ನೀಡಿದ್ದಾರೆ ಅದರಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಿನಕ್ಕೆ 18 ಗಂಟೆಗಳಿಗೂ ಹೆಚ್ಚು ಕೆಲಸ ನಿರ್ವಹಿಸಬೇಕಾಯಿತು ಭಾರತದ ಸಂವಿಧಾನದ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಬಗ್ಗೆ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ತುಂಬಾ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅಧ್ಯಕ್ಷನಾಗಿ ನಾನು ಪ್ರತಿದಿನದ ಚಟುವಟಿಕೆಗಳನ್ನ ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಷ್ಟು ಶ್ರದ್ಧೆ ಮತ್ತು ಉಸ್ತುಕತೆಯಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ರಚನಾ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯುತ್ತಮ ದೊಡ್ಡ ಕೆಲಸ ಎಂದು ಹೇಳಿದ್ದಾರೆ.

1947 ಆಗಸ್ಟ್ 15 ರಂದು ಬ್ರಿಟಿಷರಿಂದ ಸ್ವತಂತ್ರವಾದ ಭಾರತವು, ಹಿಂದೆ 1930ರ ಜನವರಿ 26ರಂದು ಪೂರ್ಣ ಸ್ವರಾಜ್ಯ ಬೇಕೆಂಬ ಹೋರಾಟ ಪ್ರಾರಂಭವಾದ ಕಾರಣ ಅದರ ನೆನಪಿಗಾಗಿ 1950 ಜನವರಿ 26ರಂದು ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು ಸಂವಿಧಾನದ ಕರಡು ಪ್ರತಿಯನ್ನು 26 ನವಂಬರ್ 1949 ರಂದು ಅಂಗೀಕರಿಸಲಾಯಿತು. ಕೈಬರಹದಲ್ಲಿದ್ದ ಸಂವಿಧಾನದ ಇಂಗ್ಲಿಷ್ ಮತ್ತು ಹಿಂದಿಯ ತಲಾ ಒಂದು ಪ್ರತಿಗೆ ಸಂವಿಧಾನ ಸಭೆಯ 284 ಜನ ಸದಸ್ಯರು 24 ಜನವರಿ 1950 ರಂದು ಸಹಿ ಮಾಡಿದರು. ಈ 284 ಜನರಲ್ಲಿ 15 ಮಹಿಳೆಯರು ಇದ್ದರು ದಾಕ್ಷಾಯಿಣಿ ವೇಲಾಯುಧನ್, ಬೇಗಂ ಐಜಾಜ್ ರಸೂಲ್, ದುರ್ಗಾಬಾಯಿ ದೇಶಮುಖ್, ಹನ್ಸ್ ಮೆಹ್ತಾ, ಅಮೃತ್ ಕೌರ್, ಅಮ್ಮು ಸ್ವಾಮಿನಾಥನ್ ಮತ್ತು ಆನಿ ಮುಸ್ಕರೇನಸ್,  ವಿಜಯಲಕ್ಷ್ಮಿ ಪಂಡಿತ್, ಸುಚೇತಾ ಕೃಪಲಾನಿ, ರೇಣುಕಾರಾಯ್, ಪೂರ್ಣಿಮಾ ಬ್ಯಾನರ್ಜಿ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ ಮತ್ತು ಸರೋಜಿನಿ ನಾಯ್ಡು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಈ ಮಹಿಳೆಯರು. ಸ್ವತಃ ಬಾಲ್ಯ ವಿವಾಹ, ವೈದವ್ಯ, ಹಿಂಸೆ, ಆಸ್ತಿ ಕಬ್ಬಳಿಕೆ, ಜಾತಿ ದಬ್ಬಾಳಿಕೆಗಳಿಗೆ ಗುರಿಯಾಗಿದ್ದರು. ಸಂವಿಧಾನ ಜಾರಿಗೆ ಬಂದಿದ್ದು 26 ಜನವರಿ 1950 ರಂದು ಅಂದು "ಗಣರಾಜ್ಯೋತ್ಸವ" ದಿನವೆಂದು ಘೋಷಿಸಲಾಯಿತು.
ಇಂದು ಅಂಬೇಡ್ಕರ್ ಅವರ 133ನೇ ಜನ್ಮದಿನ ಅವರು ಕೊಟ್ಟ ಕೊಡುಗೆ ಮರೆಯಲಾದೀತೆ. ಅವರ ನೆನಪು ಸದಾ ಉಸಿರಾಗಿರಲಿ.


ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -೫೬೦೦೫೬
ಮೊಬೈಲ್ ನಂ: 9739758558