ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ|ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು
ಕಲಬುರಗಿ:ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತರನ್ನು ಮಹ್ಮದ್ ಹುಸೇನ್ (60), ಫಾತಿಮಾ ಅಬ್ದುಲ್ ಸಾಬ್ (40), ರಸೂಲ್ ಬೀ (40), ಮಹೆಬೂಬ್ ಸಂಗಾವಿ (37) ಹಾಗೂ ಕ್ರೂಸರ್ ಚಾಲಕ ತೋಲು ಪಾಷಾ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮಾಹಿತಿಯ ಪ್ರಕಾರ, ಮಹ್ಮದ್ ಅಬ್ದುಲ್ ಸಾಬ್ ಎಂಬ ಯುವಕ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಹಿನ್ನೆಲೆ, ಕುಟುಂಬಸ್ಥರು ಅವರನ್ನು ಚಿಕಿತ್ಸೆಗಾಗಿ ಯಾದಗಿರಿ ನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಊರಿಗೆ ಹಿಂದಿರುಗುವಾಗ, ರಾತ್ರಿ ಸುಮಾರು 11:40ರ ವೇಳೆಗೆ ಲಾಡ್ಲಾಪುರ ಸಮೀಪ ಎದುರಿಗೆ ಬರುತ್ತಿದ್ದ ತಮಿಳುನಾಡು ಮೂಲದ ಲಾರಿ ಹಾಗೂ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಅದ್ಧೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಸಿ.ಎಸ್. ಪಾಟೀಲ, ವಾಡಿ ಠಾಣೆಯ ಪಿಎಸ್ಐ ಕೆ. ತಿರುಮಲೇಶ ಹಾಗೂ ರೇಣುಕಾ ಉಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ವಾಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಪ್ರಕರಣ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
What's Your Reaction?