ನ್ಯಾಯಾಲಯದ ತಡಯಾಜ್ಞೆ ಉಲ್ಲಂಘಿಸಿ ನೀಲಗಿರಿ ಮರಗಳ ಕಟಾವು ಆರೋಪ: ಪೊಲೀಸರ ವಿರುದ್ಧವು ಅಸಮಾಧಾನ 

ನ್ಯಾಯಾಲಯದ ತಡಯಾಜ್ಞೆ ಉಲ್ಲಂಘಿಸಿ ನೀಲಗಿರಿ ಮರಗಳ ಕಟಾವು ಆರೋಪ: ಪೊಲೀಸರ ವಿರುದ್ಧವು ಅಸಮಾಧಾನ 

      ಬೇತಮಂಗಲ: ಕೆಜಿಎಫ್ ತಾಲ್ಲೂಕಿನ ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಸಂದ್ರ ಮಿಟ್ಟೂರು ಗ್ರಾಮದ ಸರ್ವೇ ನಂ. 181ಕ್ಕೆ ಸಂಬಂಧಿಸಿದ ಜಮೀನಿನಲ್ಲಿ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಪ್ರವೇಶಿಸಿ ನೀಲಗಿರಿ ಮರಗಳನ್ನು ಕಟಾವು ಮಾಡಲಾಗಿದೆ ಎಂದು ಗ್ರಾಮದ ನಿವಾಸಿ ಮಂಜುಳಾ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂ. 181ರಲ್ಲಿ ಒಟ್ಟು 4 ಎಕರೆ 29 ಗುಂಟೆ ಜಮೀನಿದ್ದು, ನಮ್ಮ ಪೂರ್ವಿಕರ ಕಾಲದಿಂದಲೂ ಈ ಜಮೀನಿಗೆ ಯಾವುದೇ ಅಧಿಕೃತ ವಿಭಾಗಗಳು ನಡೆದಿಲ್ಲ. ಮತ್ತು ನಾವು ಸ್ವಗ್ರಾಮವನ್ನು ಬಿಟ್ಟು ಹೊರಗೆ ಜೀವನವನ್ನು ನಡೆಸುತ್ತಿದ್ದೇವೆ ಆದರೆ ಇದೇ ಗ್ರಾಮದ ವೆಂಕಟೇಶಪ್ಪ ಎಂಬಾತ ನಮಗೆ ತಿಳಿಯದೆ ಅಕ್ರಮವಾಗಿ ಖಾತೆ ಮಾಡಿಕೊಂಡು 26 ಗುಂಟೆ ಜಮೀನನ್ನು ಕಬಳಿಸಿದ್ದಾನೆ ಎಂದು ಆರೋಪಿಸಿದರು. 

ಈ ಜಮೀನಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಒ.ಎಸ್. ನಂ. 306/2026 ದಾವೆ ದಾಖಲಾಗಿದ್ದು, ನ್ಯಾಯಾಲಯವು ಒಂದು ತಿಂಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ ತಡೆಯಾಜ್ಞೆ ಜಾರಿಯಲ್ಲಿದ್ದರೂ, ತಾವು ಸ್ಥಳದಲ್ಲಿಲ್ಲದ ವೇಳೆ ವೆಂಕಟೇಶಪ್ಪ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ನೀಲಗಿರಿ ಮರಗಳನ್ನು ಕಟಾವು ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾನೆ ಎಂದು ದೂರಿದರು.

ಪೊಲೀಸರ ಬೇಜವಾಬ್ದಾರಿ: ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದರೂ, ಸಮರ್ಪಕ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆ ನ್ಯಾಯ ಒದಗಿಸುವ ಬದಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

 ಜಿಲ್ಲಾ ವರಿಷ್ಟಾಧಿಕಾರಿಗಳಿಗೆ ಮನವಿ: ನಮ್ಮ ಕುಟುಂಬದಲ್ಲಿ ಮಹಿಳೆಯರು ಇದ್ದು, ಮಕ್ಕಳ ವಿದ್ಯಾಭ್ಯಾಸ ಹಾಗೂ ದೈನಂದಿನ ಕೆಲಸಗಳನ್ನು ಬದಿಗಿಟ್ಟು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಮಾನ್ಯ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣಕ್ಕೆ ಮಧ್ಯಪ್ರವೇಶಿಸಿ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಐಸಂದ್ರ ಗ್ರಾಮದ ಮಂಜುಳಾ ಸೌಂದರ್ಯ ರಕ್ಷಿತಾ, ಚಂದ್ರಮ್ಮ, ದೀಕ್ಷಿಹ, ಮಹೇಶ್, ಶಿವಕುಮಾರ್ ಸೇರಿದಂತೆ ಕುಟುಂಬಸ್ಥರು ಹಾಗೂ ಉಪಸ್ಥಿತರಿದ್ದರು.