ಉಡುಪಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ರೈತ ವಿರೋಧಿ ಮೂರು ಕೃಷಿ ಕಾಯ್ದೆ ವಿರೋಧಿಸಿ, ಕೃಷಿಯನ್ನು ಉಳಿಸಿ ಪ್ರಜಾತಂತ್ರ ರಕ್ಷಿಸಿ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಹಾಗೂ ಋಣ ಮುಕ್ತ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಸಂಯುಕ್ತ ಕರ್ನಾಟಕ ಕಿಸಾನ್ ಮೋರ್ಚಾ ಸಂಘಟನೆಗಳು ದೇಶವ್ಯಾಪಿ ರಾಜಭವನ ಚಲೋ ಹೋರಾಟದ ಕರೆಯ ಮೇರೆಗೆ ಉಡುಪಿಯಲ್ಲೂ ಶನಿವಾರ ಅಜ್ಜರಕಾಡು ಹುತಾತ್ಮ ಚೌಕ ಬಳಿ ರೈತ, ಕೃಷಿ ಕೂಲಿ ಕಾರ್ಮಿಕ, ದಲಿತ, ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಮುಷ್ಕರದ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ದೆಹಲಿಯ ಗಡಿಭಾಗದಲ್ಲಿ ಕಳೆದ 7 ತಿಂಗಳಿಂದ ರೈತರು ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ರೈತರು ಸಾವಿಗೀಡಾಗಿದ್ದಾರೆ. ಆದರೂ ಕೃಷಿ ಕಾಯ್ದೆ ಹಿಂತೆಗೆದುಕೊಳ್ಳದೆ ತನ್ನ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಲಾಗುತ್ತಿದೆ. ಈ ಸಂದರ್ರ್ಭದಲ್ಲಿ 46 ವರ್ಷದ ಹಿಂದೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸುವಾಗಲೇ ಇಂದಿನ ಅಘೋಷಿತ ತುರ್ತು ಪರಿಸ್ಥಿತಿ ಖಂಡಿಸಬೇಕು ಎಂದು ಕರೆ ನೀಡಿದರು.
ಕನಿಷ್ಟ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಮತ್ತು ಋಣಮುಕ್ತ ಕಾಯ್ದೆ ಜಾರಿಯಾಗಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಸಲಾಗುತ್ತಿರುವ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ರೈತ, ಕಾರ್ಮಿಕ ಮುಖಂಡ ಕೆ. ಶಂಕರ್, ಸಿಐಟಿಯು ಜಿಲ್ಲಾ ಮುಖಂಡ ಎಚ್. ನರಸಿಂಹ, ದಲಿತ ಹಕ್ಕುಗಳ ಸಮಿತಿಯ ಸಂಜೀವ ಬಳ್ಕೂರು, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ವೆಂಕಟೇಶ್ ಕೋಣಿ ಮಾತನಾಡಿದರು.
ವಿದ್ಯುತ್ ದರ, ತೈಲ ಬೆಲೆ ಹಾಗೂ ದಿನಬಳಕೆ ಅಹಾರ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು.
ಮುಖಂಡರಾದ ಸುರೇಶ ಕಲ್ಲಾಗರ, ಮಹಾಬಲ ವಡೇರಹೋಬಳಿ, ಶಶಿಧರ ಗೊಲ್ಲ, ಕವಿರಾಜ್ ಎಸ್., ಉಮೇಶ ಕುಂದರ್, ಬಲ್ಕೀಸ್, ಸದಾಶಿವ ಬ್ರಹ್ಮಾವರ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು