Wednesday, August 10, 2022
Home ಸಮಾಚಾರ ರಾಜ್ಯ ವಾರ್ತೆ ಕ್ಷಾತ್ರಶಕ್ತಿಯಿಂದಲೇ ಸ್ವಾತಂತ್ರ್ಯ

ಕ್ಷಾತ್ರಶಕ್ತಿಯಿಂದಲೇ ಸ್ವಾತಂತ್ರ್ಯ

ಸುದ್ದಿಕಿರಣ ವರದಿ
ಶನಿವಾರ, ಮೇ 28

ಕ್ಷಾತ್ರಶಕ್ತಿಯಿಂದಲೇ ಸ್ವಾತಂತ್ರ್ಯ
ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದು ಕ್ಷಾತ್ರ ಶಕ್ತಿಯಿಂದಲೇ ಹೊರತು ಅಹಿಂಸೆಯಿಂದಲ್ಲ ಎಂದು ಮೈಸೂರು- ಕೊಡಗು ಸಂಸದ ಪ್ರತಾಪಸಿಂಹ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದರು.

ಸಾವರ್ಕರ್ ಸ್ಪೂರ್ತಿ
1857ರಲ್ಲಿ ಸಿಪಾಯಿ ದಂಗೆ ಹೆಸರಿನಲ್ಲಿ ಆರಂಭಗೊಂಡ ಸ್ವಾತಂತ್ರ್ಯ ಸಂಗ್ರಾಮ ಕ್ರಾಂತಿಯಿಂದಲೇ ಶುರುವಾಯಿತು.

ವಿನಾಯಕ ದಾಮೋದರ ಸಾವರ್ಕರ್ ಮೊದಲಾದ ಕ್ರಾಂತಿವೀರರು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ. ಅದ್ದರಿಂದಲೇ ವೀರ್ ಸಾವರ್ಕರ್ ಜನ್ಮದಿನದಂದೇ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಭಾರತೀಯರಿಂದಲೇ ಸ್ವಾತಂತ್ರ್ಯ
ವಿಶ್ವದ 63 ದೇಶಗಳು ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದು, ಅದರಲ್ಲಿ ಅಂಡಮಾನ್ ನಿಕೋಬಾರ್ ಸನಿಹದ ಆಜಾದ್ ಮತ್ತು ಸ್ವರಾಜ್ ದ್ಚೀಪಗಳನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸುವ ಮೂಲಕ ಭಾರತ ಸ್ವತಂತ್ರಗೊಳ್ಳುವ ಮುನ್ನವೇ ಭಾರತೀಯರು ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದರು ಎಂದು ಪ್ರತಾಪ್ ಉಲ್ಲೇಖಿಸಿದರು.

ರಾಜರುಗಳ ಅವಗಣನೆ ಸಲ್ಲ
ಭಾರತೀಯ ಇತಿಹಾಸವನ್ನು ಹೇಳುವಾಗ ಮೊಗಲರ ಆಳ್ವಿಕೆ ಬಗ್ಗೆ ಮಾತ್ರ ಉಲ್ಲೇಖಿಸಲಾಗುತ್ತಿದೆ. ಆದರೆ, ಮೊಗಲರ ಆಳ್ವಿಕೆಗೂ ಮುನ್ನ ಭಾರತವನ್ನು ಆಳಿದ ಮಾತ್ರವಲ್ಲ ಸಾಗರದಾಚೆಗೂ ಸಾಮ್ರಾಜ್ಯ ವಿಸ್ತರಿಸಿದ ಸಾಧನೆ ನಮ್ಮ ರಾಜರುಗಳಿದ್ದು ಎಂದರು.

ಇತಿಹಾಸ ತಿಳಿಸುವ ಕೆಲಸವಾಗಲಿ
ಭಾರತೀಯ ನೈಜ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಸ್ವಾತಂತ್ರ್ಯ ಹೋರಾಟ ಸಾಗಿಬಂದ ಹಾದಿ ಮತ್ತು ಹೋರಾಟಗಾರರ ಪರಿಚಯ ಯುವಜನತೆಗಾಗಬೇಕು.

ಆ ಕಾರಣಕ್ಕಾಗಿಯೇ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕುವೆಂಪು ಪ್ರತಿಪಾದಿತ ಭಾರತ ಜನನಿಯ ತನುಜಾತೆ ಕನ್ನಡಾಂಬೆಗೆ ಗೌರವ ಸಲ್ಲಿಸುವ ಕಾರ್ಯವಾಗುತ್ತಿದೆ ಎಂದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮರಾವ್, ಜಿ.ಪಂ. ಸಿಇಓ ಪ್ರಸನ್ನ ಎಚ್., ಎಸ್.ಪಿ. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಯುವಜನ ಸಬಲೀಕರಣ ಇಲಾಖೆ ಉಪನಿರ್ದೇಶಕ ಡಾl ರೋಶನ್ ಶೆಟ್ಟಿ ವಂದಿಸಿದರು. ಶಿಕ್ಷಣ ಇಲಾಖೆಯ ಡಾl ಅಶೋಕ ಕಾಮತ್ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು.

ಅದಕ್ಕೂ ಮುನ್ನ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಭಾರತ ಮಾತೆ ಹಾಗೂ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಭುಜಂಗ ಪಾರ್ಕಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಶಿಲಾಫಲಕ ಅನಾವರಣಗೊಳಿಸಲಾಯಿತು.

ಬಳಿಕ ಮೆರವಣಿಗೆಗೆ ಚಾಲನೆ ನೀಡಿ, ಕ್ರೀಡಾಂಗಣ ವರೆಗೆ ಮೆರವಣಿಗೆ ಸಾಗಿಬಂತು.

ಯಶವಂತ ಬನ್ನಂಜೆ ತಂಡದವರಿಂದ ದೇಶಭಕ್ತಿ ಗೀತೆ, ಶಿಕ್ಷಣ ಇಲಾಖೆಯಿಂದ ಒನಕೆ ಓಬವ್ವ ಕಿರುಪ್ರಹಸನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿದ ಸ್ವಾತಂತ್ರ್ಯ ಹೋರಾಟದ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ಸುಮಾರು 5 ಸಾವಿರ ಮಂದಿ ನೆರೆದಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!