ಹಳ್ಳಿಯ ಜನರ ಬದುಕಿನ ವಾಸ್ತವಗಳನ್ನು ಬಿತ್ತರಿಸುವ "ಕರಿಮಣ್ಣಿನ ಗೊಂಬೆಗಳು"

ಹಳ್ಳಿಯ ಜನರ ಬದುಕಿನ ವಾಸ್ತವಗಳನ್ನು ಬಿತ್ತರಿಸುವ "ಕರಿಮಣ್ಣಿನ ಗೊಂಬೆಗಳು"

ಹಳ್ಳಿಯ ಜನರ ಬದುಕಿನ ವಾಸ್ತವಗಳನ್ನು ಬಿತ್ತರಿಸುವ "ಕರಿಮಣ್ಣಿನ ಗೊಂಬೆಗಳು"

ಡಾ. ಕರೀಗೌಡ ಬೀಚನಹಳ್ಳಿ ಅವರು ಕನ್ನಡದ ಖ್ಯಾತ ಕಥೆಗಾರರು. ಇವರು ಬರೆದಿರುವ "ಕರಿಮಣ್ಣಿನ ಗೊಂಬೆಗಳು" ಕಥಾ ಸಂಕಲನದಲ್ಲಿ ಒಂಭತ್ತು ಕಥೆಗಳಿವೆ. ಇಲ್ಲಿನ ಕಥೆಗಳು ಹಸಿವು, ಬಡತನ, ಸ್ವಾರ್ಥ, ಮತ್ಸರ, ಪ್ರೇಮ, ಕಾಮ ಮುಂತಾದ ಸಾರ್ವಕಾಲಿಕ ವಸ್ತು ವಿಷಯಗಳನ್ನು ಒಳಗೊಂಡಿವೆ. ಕಥೆಗಾರರಾದ ಡಾ. ಕರೀಗೌಡ ಬೀಚನಹಳ್ಳಿ ಅವರ ಮುಖ್ಯ ಕಾಳಜಿ ಗ್ರಾಮೀಣ ಬದುಕು ಎಂಬುದನ್ನು ಇಲ್ಲಿನ ಕಥೆಗಳು ತೋರಿಸಿಕೊಡುತ್ತವೆ.

"ಒಂದು ಅಪೂರ್ವ ಸಂಸಾರ" ಮುಸ್ಲಿಂ ಧಾರ್ಮಿಕರ ಕಡುಬಡತನದ ಕಥೆ.  ಸಾಬರ ಭಾಷೆಯೇ ಬಾರದ, ಕನ್ನಡದಲ್ಲಿ ಮಾತಾಡುವ, ತಮ್ಮ ಹಿರೀಕರಿಗೆ ಪಿತೃ ಪಕ್ಷಕ್ಕೆ ಬೇಕಾದ ಪದಾರ್ಥಗಳನ್ನು ಹೊಂಚಿಕೊಳ್ಳಲು ಪಡಿಪಾಟಲು ಬೀಳುವ ಚಿತ್ರಣವನ್ನು ಈ ಕಥೆ ತಿಳಿಸುತ್ತದೆ. ಅತಂತ್ರರಾಗಿದ್ದ, ಗೊತ್ತು ಗುರಿ ಇಲ್ಲದ ಯಾವುದೋ ಊರಿನ ಸಾಬರ ಕುಟುಂಬವನ್ನು ಗುರುತು ಪರಿಚಯವೇ ಇಲ್ಲದೆ ಒಕ್ಕಲಿಗನೊಬ್ಬ ತನ್ನ ಹಳ್ಳಿಯಲ್ಲಿ ನೆಲೆಯೂರಿಸುವ ಸೌಹಾರ್ದತೆಯ ಕಥೆ ಇದಾಗಿದೆ. ಇಂತಹ ಅಂತರ್ ರ್ಧರ್ಮಿಯ ಸೌಹಾರ್ದತೆಯ ಸ್ವರೂಪ ಇನ್ನಷ್ಟು ಗಾಡ ಮತ್ತು ಸ್ಪಷ್ಟವಾಗಿ ಅವರ "ಸಂಗಾತಿಗಳು" ಕಥೆಯಲ್ಲಿ ನಾವು ಕಾಣಬಹುದು. ಚೆನ್ನಯ್ಯ ಮತ್ತು ನಂಜವ್ವ ತಮ್ಮ ಮಗ ರಾಜಣ್ಣ ಮುಂದಿನ ವಿದ್ಯಾಭ್ಯಾಸದ ಚಿಂತೆಯಲ್ಲಿರುವಾಗ, ಬೆಂಗಳೂರಿನ ಅಬ್ದುಲ್ ಅಜಿದ್ ಸಾಬರು ಒದಗಿ ಬರುತ್ತಾರೆ. ಇವರ ಪತ್ರಕ್ಕೆ ಪ್ರತಿ ಸ್ಪಂದಿಸಿ ಅಜಿದ್ ಪತ್ನಿ ಮತ್ತು ಮಗಳ ಸಮೇತ ಬಂದು ಚೆನ್ನಯ್ಯನ ಹಳ್ಳಿ ಮನೆಯಲ್ಲಿ ತಂಗುತ್ತಾರೆ. ಅವರಿಬ್ಬರ ಸಂಸಾರಗಳ ಸೌಹಾರ್ದ ಸಂಬಂಧ ಅನನ್ಯವಾಗಿ ಇಲ್ಲಿ ಚಿತ್ರಣಗೊಂಡಿದೆ. ಅಜಿದು ಬೆಂಗಳೂರಿಗೆ ವರ್ಗವಾಗಿ ಹೋಗುವ ಮೊದಲು ಹಳ್ಳಿಯ ಶಾಲೆಯಲ್ಲಿ ರಾಜಣ್ಣನಿಗೆ ಪಾಠ ಮಾಡಿದ ಮಾಸ್ತರಾಗಿದ್ದರೂ ಅದು ಗುರು ಶಿಷ್ಯ ಸಂಬಂಧಕ್ಕೆ ಮೀರಿದ ಕೌಟುಂಬಿಕ ಬೆಸುಗೆಯಾಗಿ ಬೆಳೆಯುತ್ತದೆ. ಚೆನ್ನಯ್ಯನನ್ನು ಮೊದಲ ಸಲ ಭೇಟಿಯಾದಾಗ ಅಜೀದ್ ಮಾಸ್ತರಿಗೆ ತನ್ನ ಅಣ್ಣನ ನೆನಪಾಗುತ್ತದೆ. ರಾಜಣ್ಣನ ಮುಂದಿನ ಓದಿಗೆ ಅಜಿದ್ ಕುಟುಂಬ ಅವನನ್ನು ತನ್ನ ಜೊತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುವುದರೊಂದಿಗೆ ಈ ಕಥೆ ಕೊನೆಗೊಳ್ಳುತ್ತದೆ. 
"ಆಸಕ್ತಿ" ಎಂಬ ಕಥೆಯಲ್ಲಿ ನಗರದಿಂದ ಅಪ್ಪನ ಸಾವಿಗೆ ಬರುವ ವಿದ್ಯಾವಂತ ಕಥಾನಾಯಕ, ಅಪ್ಪ ತನಗೆ ಎಂದೋ ಒಂದು ದಿನ ಹೇಳಿದ ಮಾತನ್ನು ಪಾಲಿಸುತ್ತಾನೆ. ತನಗೆ ಜನ್ಮ ನೀಡಿದ ಅವ್ವ ಅಪ್ಪನ ಜೊತೆ ಕೂಡಿಕೆಯಾಗುವ ಮುನ್ನ ಆಕೆಯ ಗತಿಸಿದ ಪತಿಗೆ ಹುಟ್ಟಿದ ಮಗನನ್ನು ಸ್ವಂತ ಮಗನಂತೆ ಬೆಳೆಸುವ ಅಪ್ಪ ಇಲ್ಲಿದ್ದಾನೆ.  ಕಥಾನಾಯಕ ಅಪ್ಪನ ತಿಥಿ ಮುಗಿಸಿ ಆಸ್ತಿಪಾಲು ಮಾಡಿ ಕೊಡುವ ಪ್ರಸಂಗ ಉದಾತ್ತವಾಗಿ ಚಿತ್ರತವಾಗಿದೆ. ತನ್ನ ಸ್ವಂತ ಅಣ್ಣನ ಅವ್ವನ ಸವತಿ ಮಾತ್ಸರ್ಯ ಮತ್ತು ಹಿಡಿಶಾಪದ ನಡುವೆಯೂ ಅವನು ಅಪ್ಪನಿಂದ ದೂರವಾಗಿದ್ದ ದೊಡ್ಡವ್ವನ ಮಗನಿಗೂ ಒಂದು ಭಾಗ ಕೊಟ್ಟು ಸಾಮಾಜಿಕ ಮತ್ತು ಕೌಟುಂಬಿಕ ನ್ಯಾಯವನ್ನು ಸ್ಥಾಪಿಸುತ್ತಾನೆ. ಇದು ಕೇವಲ ಸುಧಾರಣಾ ವಾದ ಸಿದ್ದಾಂತವನ್ನು ಕಾರ್ಯಗತಗೊಳಿಸುವ ನಿಲುವಲ್ಲ ಸಹಜ ಪ್ರೀತಿಯ ಸಮ್ಮಿಲನ ಮತ್ತು ಪಾರಂಪರಿಕ ಮನಸುಗಳ ಪರಿವರ್ತನೆ ಎಂದು ಹೇಳಬಹುದು. 
"ದನಿ"ಎಂಬ ಕಥೆಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕೆಂಚವ್ವ ಮತ್ತು ನಂಜಕ್ಕರ ಬದುಕಿನ ಚಿತ್ರಣವನ್ನು ಕಥೆಗಾರರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಕೆಂಚವ್ವ ತನ್ನ ಮಕ್ಕಳನ್ನು ನೋಡಿಕೊಳ್ಳಲು ಹಿರಿಯ ಮಗಳಾದ ನಾಗಿಯನ್ನು ಶಾಲೆಗೆ ಹೋಗದಿರಲು ಅಡ್ಡಿ ಪಡಿಸುತ್ತಾಳೆ. ಕೆಂಚವ್ವನ ಗಂಡ ಮನೆ ಬಿಟ್ಟು ಹೋಗಿರುವುದರಿಂದ ಹಸಿವು ಮತ್ತು ಬಡತನ ಕೆಂಚವ್ವನ್ನ ಪಾಲಿಗೆ ಇರುತ್ತದೆ. ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಕೂಲಿಗೆ ಹೋಗಿ ದುಡಿಯಬೇಕಾದ ಅನಿವಾರ್ಯತೆ ಇರುತ್ತದೆ. ಈ ಕಡೆ ಸಣ್ಣ ಮಕ್ಕಳನ್ನು ನೋಡಿಕೊಳ್ಳಲು ನಾಗಿ ಮನೆ ಹತ್ತಿರ ಇರಬೇಕಾದ ಪರಿಸ್ಥಿತಿ. ಇದರಿಂದ ತಾಯಿ ಕೆಂಚವ್ವ ದುಡಿಯಲು ಹೋಗಲು ಸಾಧ್ಯವಾಗುತ್ತದೆ.  ಆದರೆ ನಾಗಿಗೆ ಓದಬೇಕೆಂಬ ಮತ್ತು ಶಾಲೆಗೆ ಹೋಗಬೇಕೆಂಬ ಆಸೆ  ಹೆಚ್ಚಾಗಿರುತ್ತದೆ. ನಂಜಕ್ಕ ಕೆಂಚವ್ವನ ಜೊತೆ ಮಾತನಾಡುತ್ತಾ "ಬಾ ಬಾ ಅಳಬೇಡ ಯಾಕಳ್ತೀ, ನನ್ನ ನಿನ್ನ ಹಣೆಲಿ ದೇವ್ರು ಒಂದೇ ಬರ್ದಿರ್ಬೇಕಣ ಸಾಯುವವರೆಗೂ ಕೂಲಿ ಮಾಡಿ ಸಾಯಿರಿ ಮುಂಡೆರ ಅಂತ" ಎಂದು ಎದೆಯೊಳಗಿನ ಬಿಸಿ ಉಸಿರಿನ ಜೊತೆ ಸಂಕಟಗಳು ಸ್ಫೋಟಗೊಂಡಾಗ ಗಂಡಂದಿರ ಅಸಹಾಯಕತೆಯನ್ನು ತೋರಿಸುತ್ತದೆ. ಕೆಂಚವ್ವನ್ನ ಬದುಕು ಚಿಕ್ಕಟ್ಟಿಗೆ ಸಿಲುಕುತ್ತದೆ. ನಾಗಿಯನ್ನು ಶಾಲೆಯಲ್ಲಿ ತೋರಣ (ಬಾಣಬಗ್ಗಿಸುವುದು) ಶಿಕ್ಷೆ ನೀಡಿದ ಮಾಸ್ತರಿಗೆ  ಛೀಮಾರಿ ಮಾಡಿ ಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ನಾಗಿ ಅವಮಾನಗಳನ್ನು ಲೆಕ್ಕಿಸದೆ ತನ್ನವ್ವನ ಸಿಟ್ಟನ್ನು ಧಿಕ್ಕರಿಸಿ "ನಾನಿನ್ನು  ಸ್ಕೂಲ್ಗೆ ಹೋಗೆ ಹೋಗ್ತೀನಿ ಹೋಗು" ಎಂದು ಓಡಿ ಹೋಗುತ್ತಾಳೆ ಈ ಘಟನೆ ಕಥೆಗೆ ಅನಿರೀಕ್ಷಿತ ತಿರುವನ್ನು ನೀಡುತ್ತದೆ.
"ಕಳಕಳಿ" ಕಥೆಯಲ್ಲಿ ಪರೀಕ್ಷೆ ಬರೆಯಲು ಪೆನ್ನು ಇಲ್ಲದ ಹುಡುಗನ ಅಪ್ಪ ಹೇಳುವ ಮಾತು "ಹನ್ನೆರಡಾಣೆ! ತರ್ತೀನಿ ತಡಿ, ಈಗ ವಿಷ ತಗೋಳ್ತೀನಿ ಅಂದ್ರೂನು ನನ್ನತ್ರ  ಒಂದು ಕಾಸಿಲ್ಲ" ಎಂದು ಬಿಡುತ್ತಾನೆ. ಆದರೆ ಅವ್ವ ದೇವರಿಗೆ ಹರಕೆ ಬಿಟ್ಟಿದ್ದ ಹುಂಜವನ್ನೇ ಮಾರಿ ಮಗನಿಗೆ ಪೆನ್ನು ಕೊಡಿಸುವ ದಾರಿ ಹುಡುಕುತ್ತಾಳೆ. ಹೀಗೆ ಶಾಲಾ ಶಿಕ್ಷಣದ ಎಡರು ತೊಡರುಗಳು, ಶಾಲೆಯ ಕಟ್ಟಡದ ಸ್ಥಿತಿ, ಮಾಸ್ತರುಗಳ ಮಾದರಿಗಳು ಈ ಕಥೆಯಲ್ಲಿ ಅನಾವರಣಗೊಳ್ಳುತ್ತವೆ. 
"ಒಡಲ ತವಕ"  ಕಥೆಯಲ್ಲಿ ಹೋರಿ ಸಿದ್ದೇಗೌಡನ ಬದುಕಿನ ಚಿತ್ರಣವನ್ನು ಕಥೆಗಾರರು ನಮ್ಮ ಮುಂದೆ ಇಟ್ಟಿದ್ದಾರೆ. ಸಿದ್ದೇಗೌಡನಿಗೆ ಇರುವ ಒಂದು ಎಕರೆ ಕಲ್ಲು ಹೊಲದಲ್ಲಿ ದುಡಿಮೆ ಇಲ್ಲ, ಹೆಂಡತಿಗೆ ಗೂರಲು, ದಮ್ಮು, ಅಸ್ತಮಾ ಕಾಯಿಲೆಗಳಿಗೆ ಒಳಗಾಗಿ ಸತ್ತು ಹೋಗುತ್ತಾಳೆ. ಸಿದ್ದೇಗೌಡರು ಸಾಕಿದ್ದ  ಬಿತ್ತನೆ ಹೋರಿಯಿಂದ ಸಂಸಾರದ ಖರ್ಚು ಬಾಬ್ತುಗಳಿಗೆಲ್ಲ ಬರುವ ಸಂಪಾದನೆ ಮುಖ್ಯವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಹೋರಿ ಮೇವನ್ನು ಬಿಟ್ಟು ಸತ್ತು ಹೋಗುತ್ತದೆ. ಇದರಿಂದ ತೊಂದರೆಗೆ ಸಿಲುಕಿದ ಸಿದ್ದೇಗೌಡ ತನ್ನ ಮನೆಯನ್ನು ದೊಡ್ಡಟ್ಟಿ ಗೌಡರಿಗೆ ಭೋಗ್ಯ ಹಾಕಿ ಹಣ ಪಡೆದು ಹೆಂಡತಿಯ ತಿಥಿಯನ್ನು ಮುಗಿಸುತ್ತಾನೆ. ಬೆಳೆದ ಮಗಳು ಭಾಗ್ಯಗಳನ್ನು ಮದುವೆ ಮಾಡುವ ಸಂದರ್ಭದಲ್ಲಿ ಭೋಗ್ಯಹಾಕಿದ ಮನೆಯನ್ನು ಕ್ರಯಕ್ಕೆ ದೊಡ್ಡಟ್ಟಿ ಗೌಡರಿಗೆ ಮಾಡಿಕೊಟ್ಟು ಮತ್ತಷ್ಟು ಹಣ ಪಡೆದು ತನ್ನ ಮಗಳ ಮದುವೆಯನ್ನು ಕೆಳಹಟ್ಟಿ ನಿಂಗೇಗೌಡನ ಮಗ ರಾಜನಿಗೆ ಕೊಟ್ಟು ಮದುವೆ ಮಾಡುತ್ತಾನೆ. ದೊಡ್ಡೋಟಿ ಗೌಡರ ಒತ್ತಾಯಕ್ಕೆ ಊರಿನಲ್ಲಿರುವ ಮನೆಯನ್ನು ಬಿಟ್ಟು ಹೊಲದ ಹತ್ತಿರ ಒಂದು ಗುಡಿಸಲನ್ನು ಹಾಕಿಕೊಂಡು ತನ್ನ ಇಬ್ಬರು ಗಂಡು ಮಕ್ಕಳ ಜೊತೆಗೆ ಉಳಿದುಕೊಂಡಿರುತ್ತಾನೆ. ಯುಗಾದಿ ಮಾರನೆಯ ದಿನ ವಸ್ತೊತಡಕು, ಕುಡಿದು ಬಂದ ರಾಜ ತನ್ನ ಹೆಂಡತಿ ಭಾಗ್ಯವಳಿಗೆ ಬೇಗ ಊಟ ಬಡಿಸಲಿಲ್ಲ ಎಂದು, ಮತ್ತಿನಲ್ಲಿ ಅವಳ ಪಕ್ಕೆಗೆ ಒದ್ದು ಸಾಯಿಸುತ್ತಾನೆ.  ಇದರಿಂದ ಜರ್ಜರಿತನಾದ ಸಿದ್ಧೇಗೌಡ ಹೊಲದ ಗುಡಿಸಿಲಿನಲ್ಲಿ ತನ್ನ ಅಂತಿಮ ದಿನಗಳನ್ನು ತನ್ನ ಇಬ್ಬರು ಗಂಡು ಮಕ್ಕಳ ಜೊತೆ ಕಳೆಯುತ್ತಾನೆ.  ಆರ್ಥಿಕವಾಗಿ ಸಂಕಷ್ಟಗಳು ಒದಗಿ ಉಂಟಾಗುವ ಸಂಕಷ್ಟಗಳನ್ನು ಕಥೆ ನಮಗೆ ತಿಳಿಸುತ್ತದೆ.
"ಅರಣ್ಯ" ಕಥೆ ನಿಂಗಕ್ಕನ ಮಗಳು ಚೆನ್ನಿಯನ್ನು ಪಟೇಲರ ಅಣ್ಣನ ಮಗ ಬೈರಾ ಪ್ರೀತಿಸಿ ಮೋಸ ಮಾಡಿ ಅವಳು ಗರ್ಭಿಣಿಯಾಗುವಂತೆ ಮಾಡಿ ಮೋಸ ಮಾಡಿದಾಗ ಅವಮಾನಕ್ಕೆ ಹೆದರಿ ಕೆರೆಯಲ್ಲಿ  ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಈಕೆ ಸತ್ತ 15 ದಿನಗಳಲ್ಲಿ ಊರಿನಲ್ಲಿ ಇದೇ ವಿಷಯಕ್ಕೆ ಎರಡು ಪಂಗಡಗಳು ಉಂಟಾಗುತ್ತದೆ. ಈ ಎರಡೂ ಪಂಗಡದವರು ಬಡಿದಾಡಿ ರಾಜಕಾರಣ ಆರಂಭವಾಗುತ್ತದೆ  ಇದರಿಂದಲೇ ಹುಚ್ಚೇಗೌಡರು ಗೆದ್ದು ಊರು ಬಿಟ್ಟು ನಗರ ಸೇರುತ್ತಾರೆ. ಪೊಲೀಸರಿಗೆ ಚೆನ್ನಿ ಸಾವು ಕೊಲೆ ಎಂದು ಮೂಗರ್ಜಿ ಕೊಟ್ಟರೂ, ಪಟೇಲರ ಮನೆಯ ಹಣದಿಂದ ಮೂಗರ್ಜಿಯೂ ತಣ್ಣಗಾಗಿ ಪೊಲೀಸರು ಚೌಕಾಬಾರದ ಆಟದಲ್ಲಿ ಹನುಮಂತ ರಾಯನ ಗುಡಿಯಲ್ಲಿ ತಣ್ಣಗೆ ನಿಶ್ಚಿಂತರಾಗಿ ಕೂತುಕೊಳ್ಳುವುದನ್ನು ನಾವು ನೋಡಬಹುದು. ಇಲ್ಲಿ  ವ್ಯವಸ್ಥೆಯಲ್ಲಿನ ರಾಜಕಾರಣ ಮತ್ತು ಭ್ರಷ್ಟತೆಯನ್ನು ನಾವು ಕಾಣಬಹುದು.
"ಸಂಬಂಧ" ಎನ್ನುವ ಕಥೆಯಲ್ಲಿ ಕೆಲವು ಹಳ್ಳಿಗಳಲ್ಲಿ ಹಿಂದೆ ಬಡ್ಡಿ, ಲೇವಾದೇವಿಯನ್ನು ನೀಡುತ್ತಿದ್ದದ್ದು ಆಗ ಶಾಲಾ ಮಾಸ್ತರುಗಳಾಗಿದ್ದರು.  ಶಾಲೆಯಲ್ಲಿ ಪಾಠ ಮಾಡುತ್ತಾ ಕಿಟಕಿಯ ಕಡೆ ನೋಡುತ್ತಾ, ಸಾಲ ಪಡೆದವರು ದಾರಿಯಲ್ಲಿ ಕಂಡರೆ ಸಾಕು ಅವರ ಮಕ್ಕಳನ್ನು ಅಟ್ಟುತ್ತಿದ್ದರು. ಆಗಿನ ಮಾಸ್ತರುಗಳು ನೀಡುತ್ತಿದ್ದ ಶಿಕ್ಷೆ, ಶಾಲೆಯಲ್ಲಿ ಮಾನಿಟರ್ ಕೆಲಸ ಮಾಡುವ ಹುಡುಗ ಗಲಾಟೆ ಮಾಡುವವರ ಹೆಸರು ದಾಖಲಿಸುವ ಸಮಯದಲ್ಲಿ ಹೊರಗೆ ತಿಂಡಿ ಕೊಡಿಸುವವರ ಹೆಸರನ್ನು ದಾಖಲಿಸದೆ ಹೋಗುವುದನ್ನು ಕಥೆಯಲ್ಲಿ ಕಾಣಬಹುದು ವ್ಯವಸ್ಥೆಯ ಲೋಪಗಳು ಈ ಸಣ್ಣ ವಯಸ್ಸಿನಲ್ಲೇ ಹುಟ್ಟಿಕೊಳ್ಳುವ ದಿಕ್ಕನ್ನು ತೋರಿಸುತ್ತದೆ. 
"ಕರಿಮಣ್ಣಿನ ಗೊಂಬೆಗಳು" ಇಂದಿಗೂ ಮೌಡ್ಯದೊಳಗೆ ಭಾರತ ನಲಗುತಿದೆ. ಕಾಡಣ್ಣ ರೇಷ್ಮೆ ಬೆಳೆಯಲ್ಲಿ ರೇಷ್ಮೆ ಹುಳುಗಳು ಕಾಯಿಲೆ ಬಂದು ಸತ್ತುಹೋಗಿದ್ದನ್ನು ಆತನ ಹೆಂಡತಿ ಮಾಟದಿಂದ ಇದು ಹೀಗಾಗಿದೆ ಎಂದು ಅವನ ತಲೆಗೆ ತುಂಬಿ, ಪೂಜಾರಯ್ಯನ ಹತ್ತಿರ ಮಾಟ ಮಂತ್ರಕ್ಕೆ ಶಾಸ್ತಿಯನ್ನು ಮಾಡಿಸುವಂತೆ ಮಾತಾಡುತ್ತಾಳೆ. ಇದರಿಂದ ಪೂಜಾರಯ್ಯ ಕಾಡಣ್ಣನಿಗೆ ಮಾಡುವ ಮೋಸವನ್ನು ಕಾಡನ ಮಕ್ಕಳಾದ ಗಂಗಣ್ಣ ಮತ್ತು ಅವನ ತಮ್ಮಂದಿರು ಬಯಲು ಮಾಡುವ ಚಿತ್ರಣವನ್ನು ಇಲ್ಲಿ ಕಾಣಬಹುದು.
 ಒಟ್ಟಾರೆಯಾಗಿ ಇಲ್ಲಿನ ಕಥೆಗಳಲ್ಲಿ ಸ್ತ್ರೀಯರ ಸಂಕಟಗಳು,  ಬದುಕಿನಲ್ಲಿ ಬರುವ ಆರ್ಥಿಕ ಸಂಕಷ್ಟಗಳು ಉಂಟಾಗಿ ತೊಂದರೆಗಳಿಗೆ ಸಿಲುಕಿ ಬಡತನದ ಬೇಗೆಯಲ್ಲಿ ಬೇಯುವ ಚಿತ್ರಣಗಳು ನಿಜಕ್ಕೂ ಮನಮಿಡಿಯುವಂತೆ ಇಲ್ಲಿನ ಕಥೆಗಳು ಇವೆ. ಇದಕ್ಕೆ ಪರ್ಯಾಯ ವಿಧಾನಗಳನ್ನು ಅನುಸರಿಸದೆ ಹೋಗಿರುವುದು ಮತ್ತು ಅನಕ್ಷರಸ್ಥೆಯ ಪಿಡುಗು ಕೂಡ ಒಂದು ಎಂಬುದನ್ನು ಪರೋಕ್ಷವಾಗಿ ಕಥೆಗಳು ನಮಗೆ ತಿಳಿಸಿಕೊಡುತ್ತವೆ.  ಡಾ. ಕರೀಗೌಡ ಬೀಚನಹಳ್ಳಿ ಅವರು ಇಲ್ಲಿನ ಕಥೆಗಳಲ್ಲಿ ಅತಿವಾಸ್ತವ ದೋಷಕ್ಕೆ ಬಲಿಯಾಗದೆ ಹಳ್ಳಿಗರ ಬದುಕನ್ನು ವಾಸ್ತವವಾಗಿ ಕಟ್ಟಿಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಲ್ಲಿನ ಕಥೆಗಳು ಓದಿಸಿಕೊಂಡು ಹೋಗುವ ಜೊತೆಗೆ ಬದುಕಿನ ಆಯಾಮಗಳನ್ನು ತಿಳಿಸುತ್ತವೆ.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -೫೬೦೦೫೬
ಮೊಬೈಲ್ ನಂ: 9739758558