Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರ ಮರೆಯದಿರಿ

ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರ ಮರೆಯದಿರಿ

ಬೆಂಗಳೂರು: ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರ ಮರೆಯುವಂತಾಗಬಾರದು ಎಂಬ ಎಚ್ಚರ ಅಗತ್ಯ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಸುಮಾರು ಎರಡು ಶತಮಾನಗಳ ಹಿಂದೆ ಹರ್ಮನ್ ಮೊಗ್ಲಿಂಗ್ ಆರಂಭಿಸಿದ ಮಂಗಳೂರು ಸಮಾಚಾರ ಕನ್ನಡದ ಮೊತ್ತ ಮೊದಲ ಪತ್ರಿಕೆ. ಹೀಗೆ ಕರ್ನಾಟಕದಲ್ಲಿ ಆರಂಭಗೊಂಡ ಪತ್ರಿಕೋದ್ಯಮ ಇಂದು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದಿಂದಾಗಿ ಪತ್ರಿಕೋದ್ಯಮದ ಸ್ವರೂಪವೇ ಇಂದು ಬದಲಾಗಿದೆ. ಅದಾಗ್ಯೂ ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠತೆಯ ನೆಲೆಗಟ್ಟಿನಲ್ಲಿ ವರದಿ ಮೂಡಿಬಂದಾಗ ಮಾತ್ರ ಮಾಧ್ಯಮದ ನಿಜ ಧ್ಯೇಯ ಸಾಧಿಸಿದಂತಾಗುತ್ತದೆ ಎಂದರು.

ಪತ್ರಕರ್ತರ ಹಿತರಕ್ಷಣೆಗೆ ಬದ್ಧ
ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಕ್ರಿಯಾಶೀಲರಾಗಿ ದುಡಿದಿದ್ದಾರೆ. ಅನೇಕರು ಅಸುನೀಗಿದ್ದಾರೆ.ಕೋವಿಡ್ನಿಂದ ಮೃತಪಟ್ಟ 31 ಮಂದಿ ಪತ್ರಕರ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ನೆರವು ನೀಡಲಾಗಿದೆ.

ರಾಜ್ಯ ಸರ್ಕಾರ ಪತ್ರಕರ್ತರ ಕಾರ್ಯವನ್ನು ಮನಗಂಡು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಉಚಿತವಾಗಿ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಪತ್ರಕರ್ತರ ಕ್ಷೇಮನಿಧಿಗೆ 5 ಕೋ. ರೂ.ಗಳ ನೆರವನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ನೆರವು, 56 ಕೋ. ರೂ. ಜಾಹೀರಾತು ಬಾಕಿ ಬಿಡುಗಡೆ, ಹೆಲ್ತ್ ಕಾರ್ಡ್ ಸೌಲಭ್ಯ ನೀಡಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಿದರು.

ತಮಿಳುನಾಡು ಮಾದರಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಬೇಕು. ಗ್ರಾಮೀಣ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ಮತ್ತು ಬಸ್ ಪಾಸ್ ಸೌಲಭ್ಯ ಒದಗಿಸಬೇಕು. ಕನ್ನಡದ ಮೊಟ್ಟ ಮೊದಲ ಪತ್ರಿಕೆ ಹೊರ ತಂದ ಹರ್ಮನ್ ಮೊಗ್ಲಿಂಗ್ ನೆನಪಿಗಾಗಿ ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತಗಡೂರು ಒತ್ತಾಯಿಸಿದರು.

ಪತ್ರಕರ್ತರ ಬೇಡಿಕೆಯನ್ನು ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಪತ್ರಕರ್ತರು ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮುಖ್ಯಮಂತ್ರಿ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮಾಧ್ಯಮ ಸಲಹೆಗಾರ ಎನ್. ಭೃಂಗೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ. ಎಸ್. ಹರ್ಷ, ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಟ್ಟಡ ಸಮಿತಿ ಅಧ್ಯಕ್ಷ ಮದನಗೌಡ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಂ, ಲೋಕೇಶ್, ಪುಂಡಲೀಕ ಬಾಳೋಜಿ, ಮಲ್ಲಿಕಾರ್ಜುನ, ಸಂಜೀವ ರಾವ್ ಕುಲಕರ್ಣಿ, ಡಾ. ಉಮೇಶ್ವರ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಕೆಂಚೇಗೌಡ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!