Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಕೈಗಾರಿಕೆಗಳಿಂದ ಗ್ರಾ.ಪಂ.ಗಳಿಗೆ ತೆರಿಗೆ: ಶೀಘ್ರ ನಿರ್ಧಾರ

ಕೈಗಾರಿಕೆಗಳಿಂದ ಗ್ರಾ.ಪಂ.ಗಳಿಗೆ ತೆರಿಗೆ: ಶೀಘ್ರ ನಿರ್ಧಾರ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಪಡುಬಿದ್ರಿ, ಜು. 5: ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಗಳಿಗೆ ಎಷ್ಟು ಪ್ರಮಾಣದ ತೆರಿಗೆ ವಸೂಲು ಮಾಡಬೇಕು ಎಂಬ ಬಗೆಗಿನ ಗೊಂದಲವನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ನಂದಿಕೂರು ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಅವರು, ಕೆಐಡಿಬಿ ಉದ್ಯಮಿಗಳ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾ. ಪಂ.ಗಳಿಗೆ ತೆರಿಗೆ ಕುರಿತಂತೆ ತೆರಿಗೆ ಇಲಾಖೆ, ಕೈಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆ ಕುರಿತಂತೆ ಈಗಾಗಲೇ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ಈ ಭಾಗಗಳಿಗೆ ಹೊಂದಿಕೆಯಾಗಬಲ್ಲ ಕೈಗಾರಿಕೆ ಸ್ಥಾಪನೆ ಕುರಿತಂತೆ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ. ವರದಿ ಕೈಸೇರಿದ ತಕ್ಷಣ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕೆಂಬುದು ಸರ್ಕಾರದ ಆಶಯ ಎಂದರು.

ನಂದಿಕೂರು ಕೈಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು.

ಯುಪಿಸಿಎಲ್ ಗೆ ಎಚ್ಚರಿಕೆ
ಉಡುಪಿ ಪವರ್ ಕಾರ್ಪೊರೇಶನ್ ಲಿ. (ಯುಪಿಸಿಎಲ್) ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಂಪೆನಿಗೆ ಎಚ್ಚರಿಕೆ ನೀಡಲಾಗುವುದು. ತಪ್ಪಿದಲ್ಲಿ ಉಗ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ತಕ್ಷಣ ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು. ಅಗತ್ಯ ಬಿದ್ದಲ್ಲಿ ಇಲ್ಲಿಗೂ ಭೇಟಿ ನೀಡಲಾಗುವುದು. ಒಟ್ಟಾರೆ ಯುಪಿಸಿಎಲ್ ನಿಂದ ಜನತೆಗಾಗುವ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶೆಟ್ಟರ್ ಭರವಸೆ ನೀಡಿದರು.
ಶಾಸಕರಾದ ಲಾಲಾಜಿ ಆರ್. ಮೆಂಡನ್ ಮತ್ತು ರಘುಪತಿ ಭಟ್, ಪಲಿಮಾರು ಗ್ರಾ. ಪಂ. ಅಧ್ಯಕ್ಷೆ ಗಾಯತ್ರಿ ಪ್ರಭು, ನಂದಿಕೂರು ಕೆ.ಐ.ಎ.ಡಿ.ಬಿ ಉದ್ಯಮಿಗಳ ಸಂಘದ ಉಪಾಧ್ಯಕ್ಷೆ ಭಾರತಿ ಶೆಟ್ಟಿ, ಸೃಷ್ಟಿ ವೆಂಚರ್ಸ್ ಆಡಳಿತ ನಿರ್ದೇಶಕ ಭೂಪತಿ ಶೆಟ್ಟಿ, ಸಣ್ಣ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!