Monday, July 4, 2022
Home ಲೋಕಾಭಿರಾಮ ಆಯುರ್ವೇದದ ಪ್ರಸ್ತುತತೆ

ಆಯುರ್ವೇದದ ಪ್ರಸ್ತುತತೆ

ಇಂದು ರಾಷ್ಟ್ರೀಯ ಆಯುರ್ವೇದ ದಿನ. ಈ ಹಿನ್ನೆಲೆಯಲ್ಲಿ ಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಅಗದತಂತ್ರ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ. ಚೈತ್ರಾ ಎಸ್. ಹೆಬ್ಬಾರ್ ಪ್ರಸಕ್ತ ದಿನಗಳಲ್ಲಿ ಭಾರತಜನ್ಯ ಆಯುರ್ವೇದ ಚಿಕಿತ್ಸೆಯ ಅಗತ್ಯತೆ ಬಗ್ಗೆ ಪ್ರತಿಪಾದಿಸಿದ್ದಾರೆ.

ಸೂಕ್ಷ್ಮ ರೋಗಾಣುಗಳು ವಿಶ್ವವನ್ನೇ ಭೀತಿಗೊಳಪಡಿಸಿರುವ ಹೊತ್ತಿನಲ್ಲಿ ಆಯುರ್ವೇದ ಭರವಸೆಯ ದೀಪ ಬೆಳಗಿಸಿದ್ದು, ಸಮಾಜಕ್ಕೆ ಅಪ್ಯಾಯಮಾನವಾಗುತ್ತಿದೆ. 5ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಈ ಶುಭಾವಸರದಲ್ಲಿ ಇಡೀ ವಿಶ್ವವೇ ಆರೋಗ್ಯದಿಂದಿರಲಿ ಎಂದು ಹಾರೈಸುತ್ತಾ ಆಯುರ್ವೇದ ಪ್ರಸ್ತುತತೆಯನ್ನು ಬಿಂಬಿಸಲು ಈ ಲೇಖನ.
ಭವ್ಯ ಭಾರತದ, ಪ್ರಾಚೀನ ಸಂಸ್ಕೃತಿ- ನಾಗರಿಕತೆಯನ್ನು ಪರಿಚಯಿಸುವ ಚತುರ್ವೇದಗಳು ಅಧ್ಯಾತ್ಮ ಆರೋಗ್ಯಾದಿ ಅಸಂಖ್ಯ ವಿಷಯಗಳನ್ನು ಪ್ರಪಂಚಕ್ಕೆ ತೆರೆದಿಡುವ ಜ್ಞಾನಸಾಗರಗಳು.
ವೇದಗಳು ಮುಖ್ಯವಾಗಿ ದಾನ, ಸ್ವಸ್ತ್ಯಯನ, ಬಲಿ, ಹೋಮ, ಮಂಗಲ, ನಿಯಮ, ಪ್ರಾಯಶ್ಚಿತ್ತ, ಉಪವಾಸ, ಮಂತ್ರ, ದಿವ್ಯೌಷಧ ಇತ್ಯಾದಿಗಳಿಂದ ರೋಗ ನಿವಾರಿಸುವ ವಿಧಿಗಳನ್ನು ವಿವರಿಸುತ್ತವೆ. ಈ ಚಿಕಿತ್ಸಾ ಕ್ರಮಗಳಿಗೆ ಆಯುಷ್ಯ ವೃದ್ದಿ ಮಾಡುವ ಸಾಮರ್ಥ್ಯವಿದ್ದು, ಈ ಕ್ರಮಗಳ ಜ್ಞಾನ ನೀಡುವ ವೇದಗಳ ಅಂಗಕ್ಕೆ ಆಯುಃ ಮತ್ತು ವೇದ ಎಂಬ ಸಂಯುಕ್ತ ಪದ ಬಳಸಿ ಆಯುರ್ವೇದ ಎಂದು ಋಷಿಗಳು ಕರೆದರು.
ಹಾಗಾಗಿ ಆಯುರ್ವೇದವನ್ನು ಋಗ್ವೇದದ ಉಪಾಂಗ ಎಂದು ಕೆಲವರು ಹೇಳಿದರೆ, ಅಥರ್ವ ವೇದದ ಉಪಾಂಗ ಎಂದು ಸುಶ್ರುತ ಸಂಹಿತೆ ತಿಳಿಸುತ್ತದೆ. ದೇವಭಾಷೆಯಾದ ಗೀರ್ವಾಣ ಅಥವಾ ಸಂಸ್ಕೃತದಲ್ಲಿ ಆಯುರ್ವೇದ ಸೇರಿದಂತೆ ಎಲ್ಲಾ ವೇದಗಳು, ಸಂಬಂಧಿಸಿದ ಶಾಸ್ತ್ರಗಳೂ ವರ್ಣಿತವಾಗಿವೆ. ಅದರಿಂದ ತಿಳಿಯುವ ವಿಷಯವೇನೆಂದರೆ ಪ್ರಾಣಿ ಸಮೂಹ ನಿರೋಗಿಗಳಾಗಿಯೂ ದೃಢ ಕಾಯರಾಗಿಯೂ ಬುದ್ಧಿಶಕ್ತಿಯಿಂದ ದೀರ್ಘಾಯುಗಳಾಗಿಯೂ ಬಾಳಲು ವಿಧಿವಿಧಾನಗಳನ್ನು ಹೇಳುವ ಆಯುರ್ವೇದ ಒಂದು ಪ್ರಾಚೀನ ವೈದ್ಯ ಪದ್ಧತಿ.
ಇಲ್ಲಿ ಒಂದು ವಿಷಯದ ಬಗ್ಗೆ ನಿಮಗೆಲ್ಲಾ ತಿಳಿಸಲೇ ಬೇಕು. ಆಯುರ್ವೇದ ಹೇಗೆ ಪುರಾತನವೋ, ರೋಗಗಳೂ ಪುರಾತನವೇ ಆಗಿರುವುದರಿಂದ ಆಯುರ್ವೇದದ ಉದಯವಾಯಿತು. ಆಯುಃ ಎಂದರೆ ಜನ್ಮದಿಂದ ಮರಣದ ವರೆಗಿನ ಕಾಲಮಾನ. ಜನ್ಮದಲ್ಲಿ ಪ್ರವರ್ತಿಸಿದ ಚೈತನ್ಯ ಮರಣದಲ್ಲಿ ನಿರ್ಗಮಿಸುತ್ತದೆ. ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವುಗಳ ಸಂಯೋಗವೇ ಆಯುಃ.
ಭೋಗಾಯತನಂ ಶರೀರಂ ಎಂಬ ಉಕ್ತಿಯಂತೆ, ಪಂಚಭೂತಾತ್ಮಕವಾದ ಶರೀರ ಮತ್ತು ಇಂದ್ರಿಯಗಳು, ಆತ್ಮಕ್ಕೆ ಸುಖ-ದುಃಖಗಳನ್ನು ಅನುಭವಿಸಲು ಸಾಧನಗಳಾಗಿವೆ. ಶರೀರವೆಂದರೆ ಕ್ಷೀಣಿಸುವುದು ಅಥವಾ ಕೊಳೆಯುವುದು ಎಂದರ್ಥ. ಜೀವಿತಾವಧಿಯಲ್ಲಿ ವಯಸ್ಸಿಗನುಸಾರವಾಗಿ ಮೊದಲು ವೃದ್ಧಿಸಿ ನಂತರ ಕ್ಷೀಣಿಸುವ ಶರೀರ ಮರಣದ ನಂತರವಂತೂ ಕೊಳೆಯಲಾರಂಭಿಸುತ್ತದೆ!
ಆಯುಷ್ಯವನ್ನು ದೀರ್ಘ, ಮಧ್ಯಮ ಹಾಗೂ ಅಲ್ಪ ಎಂದು ಪ್ರಮಾಣಕ್ಕನುಸಾರವಾಗಿ ಆಯುರ್ವೇದ ವಿಭಜಿಸುತ್ತದೆ. ಆಯುಷ್ಯವಿದ್ದರೆ ಆರೋಗ್ಯವಿರಬೇಕೆಂದಿಲ್ಲ. ಸುಖ, ಆರೋಗ್ಯದ ಲಕ್ಷಣವಾದರೆ; ದುಃಖ, ಅನಾರೋಗ್ಯ ಅಥವಾ ರೋಗದ ಲಕ್ಷಣ. ಆಯುಷ್ಯ- ಆರೋಗ್ಯಗಳ ಒಟ್ಟು ಸಮ್ಮಿಲನವೇ ಆಯುರ್ವೇದದ ಉದ್ದೇಶ. ಸರ್ವೇಜನಾ ಸುಖಿಃನೋ ಭವಂತು ಎಂಬ ಶಾಸ್ತ್ರೋಕ್ತಿಯ ಹಿನ್ನೆಲೆ ಇರುವ ಆಯುರ್ವೇದದ ಪರಮೋದ್ದೇಶ ಸಕಲ ಜೀವಿಗಳ ಸ್ವಾಸ್ಥ್ಯ ರಕ್ಷಣೆ.
ಒಂದು ಕಾಲದಲ್ಲಿ ಪಾರಂಪರಿಕವಾಗಿ, ಮೌಖಿಕವಾಗಿ ಗುರುಗಳಿಂದ ಯೋಗ್ಯ ಶಿಷ್ಯರಿಗೆ ಉಪದೇಶಿಸಲ್ಪಡುತ್ತಿದ್ದ ಈ ಶಾಸ್ತ್ರದ ಜ್ಞಾನ, ಆ ನಂತರ ಬರವಣಿಗೆಗಳ ಮೂಲಕವೂ ಪ್ರವಹಿಸಲಾರಂಭಿಸಿತು. ಪ್ರಸಕ್ತ ದಿನಗಳಲ್ಲಿ ತಂತ್ರಜ್ಞಾನವೂ ಸೇರ್ಪಡೆಯಾಗಿ ಯೋಗ್ಯಾಯೋಗ್ಯತೆಗಳನ್ನು ಬದಿಗಿರಿಸಿ, ಸರ್ವರೂ ಆಯುರ್ವೇದದ ಜ್ಞಾನ ಪಡೆಯುತ್ತಿದ್ದಾರೆ.
ವಿದೇಶಿಯರಿಗೂ ಕೂಡ ಈಗ ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ತವಕ, ಆತುರ. ಎಲ್ಲೆಲ್ಲಿಂದಲೋ ಪ್ರಯತ್ನಿಸಿ, ಅಂತೂ ಇಂತೂ ಆಯುರ್ವೇದ ವೈದ್ಯರ ಸಂಪರ್ಕ ಗಳಿಸಿ, ಅವರ ವೃತ್ತಿತಾಣಗಳಿಗೂ ಬಂದು, ಅಲ್ಪ ಸ್ವಲ್ಪ ತಿಳಿದುಕೊಂಡು, ಆಯುರ್ವೇದೀಯ ಪಂಚಕರ್ಮಾದಿ ಕ್ರಿಯೆಗಳನ್ನು ಸ್ವತಃ ಅನುಭವಿಸಿ, ಪರೀಕ್ಷಿಸಿ ಧನ್ಯತಾ ಭಾವದಿಂದ ತಮ್ಮ ತಮ್ಮ ತವರಿಗೆ ಮರಳಿದವರು ಅದೆಷ್ಟೋ ಮಂದಿ
ಆಯುರ್ವೇದದ ಮಹತ್ವವನ್ನರಿತ ವಿದೇಶೀಯರು, ತಮ್ಮ ದೇಶದಲ್ಲೂ ಜನರಿಗೆ ಅನುಕೂಲವಾಗಬಹುದೆಂದು ನುರಿತ ಆಯುರ್ವೇದ ವೈದ್ಯರನ್ನು ಕರೆಸಿ ಪ್ರಯೋಜನ ಪಡೆದಿದ್ದಾರೆ. ಹಾಗೆ ಕೆಲವು ಆಯುರ್ವೇದ ವೈದ್ಯರಿಗೆ, ತಮ್ಮ ವಿದ್ಯೆ ಇಷ್ಟೊಂದು ಘನವಾಗಿದೆ ಎಂದು ಅರಿವಾದದ್ದೇ ಈ ವಿದೇಶಿಯರಿಂದ ಎಂದರೆ ತಪ್ಪಾಗಲಾರದು.
ದೇವಾಶ್ರಯ, ಋಷಿಯಾಶ್ರಯ, ರಾಜಾಶ್ರಯದಲ್ಲಿದ್ದ ಆಯುರ್ವೇದದ ವೈಭವ, ಮೊಘಲರು ಮತ್ತು ಬ್ರಿಟೀಷರ ಕಾಲದಲ್ಲಿ ಅವಗಣನೆಗೊಳಗಾಗಿ ಕಡೆಗಣಿಸಲ್ಪಟ್ಟಿತು. ಹೀಗೆ ನೂರಾರು ವರ್ಷಗಳಿಂದ ಸ್ವಂತ ನೆಲದಲ್ಲಿಯೇ ಮಲತಾಯಿ ಧೋರಣೆಗೊಳಗಾಗಿದ್ದ ಆಯುರ್ವೇದವೇ ಮೊದಲಾದ ಭಾರತೀಯ ಚಿಕಿತ್ಸಾ ಪದ್ಧತಿಗಳ ಪುನರುತ್ಥಾನಕ್ಕಾಗಿ ಭಾರತ ಸರಕಾರ ಆಯುಷ್ ಸಚಿವಾಲಯದ ಅಗತ್ಯವನ್ನು ಮನಗಂಡಿತು.
ಅಂತೆಯೇ ಆಯುರ್ವೇದವನ್ನು ಎತ್ತರಕ್ಕೇರಿಸಲು ಅನೇಕ ಯೋಜನೆಗಳನ್ನು ತರಲು ದನ್ ತೇರಾಸ್ (ದೀಪಾವಳಿಯ ಮುಂಚಿನ ಆಶ್ವಯುಜ ಕೃಷ್ಣ ತ್ರಯೋದಶಿ) ದಿನವನ್ನು 2016ರಿಂದ ರಾಷ್ಟ್ರೀಯ ಆಯುರ್ವೇದ ದಿನ ಎಂದು ಘೋಷಿಸಲಾಯಿತು.
ಈ ದಿನದಂದು ಸುರಾಸುರರು ನಡೆಸಿದ ಸಮುದ್ರಮಂಥನದಲ್ಲಿ ಮಹಾವಿಷ್ಣುವಿನ ಅವತಾರ, ಆಯುರ್ವೇದದ ಹರಿಕಾರ, ಆದಿವೈದ್ಯ ಧನ್ವಂತರಿಯ ಉಗಮವಾಯಿತೆಂದು ನಂಬಿಕೆ ಇದೆ. ಚತುರ್ಭುಜನಾದ ದೇವ ಶಂಖ, ಚಕ್ರ, ಅಮೃತ ಕಲಶ ಮತ್ತು ಜಿಗಣೆಯನ್ನು ಹಿಡಿದಿರುವನೆಂಬ ವರ್ಣನೆ ಪುರಾಣೋಕ್ತವಾಗಿದೆ. ಆತನನ್ನು ಸ್ತುತಿಸಿದರೆ ನಾಶವಾಗದ ರೋಗವೇ ಇಲ್ಲ ಎನ್ನುವುದು ಅನೇಕ ರೋಗಿಗಳ ಅನುಭವದ ಮಾತು.
ಒಂದಷ್ಟು ಮೂಲಿಕೆಗಳ ಪರಿಚಯ, ಪಂಚಕರ್ಮಗಳ ಅಲ್ಪ ತಿಳುವಳಿಕೆ, ನಾಲ್ಕಾರು ಚೂರ್ಣ-ಅರಿಷ್ಟಗಳ ಹೆಸರಿನ ನೆನಪು, ಶಾಸ್ತ್ರಜ್ಞಾನವಿಲ್ಲದೇ ಔಷಧಿಗಳ ತಯಾರಿ ಮಾಡುವವ ಆಯುರ್ವೇದ ವೈದ್ಯನಾಗಲು ಸಾಧ್ಯವಿಲ್ಲ. ಆಯುರ್ವೇದವನ್ನು ಜಾಗತಿಕ ವೈದ್ಯಲೋಕದಲ್ಲಿ ಉಳಿಸಿ, ಬೆಳೆಸಿ ವಿಶ್ವವ್ಯಾಪಿಯಾಗಿಸುವಲ್ಲಿ ಶ್ರಮಿಸಿದ ಅನೇಕ ವೈದ್ಯರು, ಆಯುರ್ವೇದ ಶಿಕ್ಷಣ ಸಂಸ್ಥೆಗಳು, ಸಂಶೋಧನ ಸಂಸ್ಥೆಗಳು ಉಲ್ಲೇಖಾರ್ಹ.
ಕಾಯಿಕ, ವಾಚಿಕ, ಮಾನಸಿಕ ರೋಗಗಳ ಮುಕ್ತಿಗಾಗಿ ಜನ ಆಯುರ್ವೇದದತ್ತ ನೋಡುತ್ತಿದ್ದಾರೆ. ಸಹಸ್ರಾರು ವರ್ಷಗಳ ಹಿಂದೆ ಇದ್ದಂಥ ಜ್ಞಾನ ದೀವಿಗೆಯನ್ನು ಪುನಃ ಪುನಃ ಹೊತ್ತಿಸುತ್ತಿದ್ದಾರೆ. ಆಧುನಿಕ ಕಾಲಕ್ಕನುಸಾರವಾಗಿ ಪ್ರಚಾರ- ಸಂಶೋಧನಾತ್ಮಕ ಪುನರುಜ್ಜೀವನದೊಂದಿಗೆ ಆಯುರ್ವೇದವನ್ನು, ಅದರ ಪೂರ್ವ ಹಿನ್ನಲೆ, ಪ್ರಾಚೀನ ತತ್ವ, ಉದ್ದೇಶವನ್ನು ಅರಿತು ವೈದ್ಯನಾದವನು ಉಪಯೋಗಿಸಿದರೆ, ಶಾಸ್ತ್ರದಲ್ಲಿರುವ ಕ್ರಮ- ಸಲಹೆಗಳನ್ನು ಶ್ರದ್ಧೆಯಿಂದ ಶಿರಸಾವಹಿಸಿ ರೋಗಿ ಅನುಸರಿಸಿದರೆ, ಕ್ಷೇತ್ರವರ್ಧನೆಗೆ ರಾಜಾಶ್ರಯವೂ ಸೇರಿದರೆ ಆರೋಗ್ಯದ ಹಿತ- ಸುಖವನ್ನು ಜಗತ್ತು ಅನುಭವಿಸುವುದರಲ್ಲಿ ಸಂಶಯವೇ ಇಲ್ಲ.

ಡಾ. ಚೈತ್ರಾ ಎಸ್. ಹೆಬ್ಬಾರ್
ಮುಖ್ಯಸ್ಥರು, ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರ
ಮತ್ತು ಅಗದತಂತ್ರ ಸ್ನಾತಕೋತ್ತರ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಉಡು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!