ಬಡಗಬೆಟ್ಟು ಸೊಸೈಟಿ: 15 ಶೇ. ಡಿವಿಡೆಂಡ್ ಘೋಷಣೆ
ಉಡುಪಿ, ನ. 28 (ಸುದ್ದಿಕಿರಣ ವರದಿ): ಶತಮಾನೋತ್ಸವ ಪೂರೈಸಿ ಮುನ್ನಡೆಯುತ್ತಿರುವ ಇಲ್ಲಿನ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ತನ್ನ ಸದಸ್ಯರಿಗೆ ಶೇ. 15 ಪಾಲು ಮುನಾಫೆ (ಡಿವಿಡೆಂಡ್) ಘೋಷಿಸಿದೆ.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆಯಲ್ಲಿ ಭಾನುವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ವಚ್ಯುವಲ್ ಮಹಾಸಭೆ ನಡೆಯಿತು.
ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಕಾಂಚನ್, ಸಾಮಾಜಿಕ ಕಾಳಜಿ ಹೊಂದಿ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಜ್ಯದಲ್ಲಿಯೇ ಮಾದರಿ ಸಹಕಾರಿ ಸಂಘವಾಗಿ ರೂಪುಗೊಂಡಿದೆ ಎಂದರು.
9.12 ಕೋ. ಲಾಭ
ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು.
ವರದಿ ಸಾಲಿನ ಅಂತ್ಯಕ್ಕೆ ಸಂಘ ಒಟ್ಟು 17,501 ಸದಸ್ಯರಿಂದ 4.35 ಕೋಟಿ ರೂ. ಪಾಲು ಬಂಡವಾಳ ಹಾಗೂ 350.33 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 255.46 ಕೋ. ರೂ. ಹೊರ ಬಾಕಿ ಸಾಲ ಇದೆ. ವರದಿ ಸಾಲಿನಲ್ಲಿ ಸಂಘ 9.12 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ, ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ. ಕಾಮತ್, ವಿನಯ ಕುಮಾರ್ ಟಿ. ಎ., ಜಯಾನಂದ ಸಿ. ಮೈಂದನ್, ಪದ್ಮನಾಭ ಕೆ. ನಾಯಕ್, ರಘುರಾಮ ಎಸ್. ಶೆಟ್ಟಿ, ಜಾರ್ಜ್ ಸಾಮ್ಯುವೆಲ್, ಸದಾಶಿವ ನಾಯ್ಕ್, ಜಯಾ ಶೆಟ್ಟಿ ಮತ್ತು ಗಾಯತ್ರ್ರಿ ಎಸ್ ಭಟ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಎಸ್. ಇದ್ದರು.
ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್ ವಂದಿಸಿದರು.
ಈ ಸಂದರ್ಭದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಸಿ. ಬಂಗೇರ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜನಾರ್ದನ ಕೊಡವೂರು ಹಾಗೂ ಸಂಘದಲ್ಲಿ 19 ವರ್ಷ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಹಿರಿಯ ಗುಮಾಸ್ತರಾಗಿ ನಿವೃತ್ತರಾದ ಆನಂದ ಬಿ. ಅವರನ್ನು ಗೌರವಿಸಲಾಯಿತು