ಕೆಜಿಎಫ್‌ನಲ್ಲಿ ಡ್ರ್ಯಾಗನ್ ಫ್ರೂಟ್ ಬೆಲೆ ಪಾತಾಳಕ್ಕೆ! ರೈತರು ಕಂಗಾಲು
ಕೆಜಿಎಫ್: ಡ್ರ್ಯಾಗನ್ ಫ್ರೂಟ್ 2018ರಲ್ಲಿ ಮೊಟ್ಟ ಮೊದಲ ಬಾರಿಗೆ ಕೆಜಿಎಫ್ ನಗರಕ್ಕೆ ಪ್ರವೇಶಿಸಿತ್ತು. ಅಂದು ಬಹು ಬೇಡಿಕೆಯ ಹಣ್ಣು ಕೂಡ ಇದಾಗಿತ್ತು. ಹೊರ ಭಾಗದಿಂದ ಕೆಜಿಎಫ್ ಗೆ ಪೂರೈಕೆಯಾಗುತ್ತಿದ್ದ ಹಣ್ಣಿನ ದರ ಕೆ.ಜಿಗೆ 250-300 ರೂಪಾಯಿ ಇರುತ್ತಿತ್ತು. ಆದರೆ, ಜನಸಾಮಾನ್ಯರ ಮನೆಮಾತಾಗಿದ್ದ 'ಗುಲಾಬಿ ಸುಂದರಿ' ಡ್ರ್ಯಾಗನ್ ಫ್ರೂಟ್ ಹಣ್ಣಿನ ಬೆಲೆ ಇದೀಗ ಪಾತಾಳಕ್ಕೆ ಕುಸಿದಿದೆ. ಅಷ್ಟೇ ಅಲ್ಲದೇ, ಬೇಡಿಕೆಯೂ ಕುಗ್ಗುತ್ತಿದೆ.
ಈ ಹಿಂದೆ ಅಪರೂಪಕ್ಕೆಂಬಂತೆ ರೈತರ ಹೊಲಗಳಲ್ಲಿ ಕಾಣಸಿಗುತ್ತಿದ್ದ ಡ್ರ್ಯಾಗನ್ ಫ್ರೂಟ್ ಈಗಂತೂ ಗ್ರಾಮೀಣ ಭಾಗದ ಪ್ರಮುಖ ಬೆಳೆಯಾಗಿ ಪರಿವರ್ತನೆಯಾಗುತ್ತಿದೆ. ಆದರೆ, ಹಣ್ಣಿಗೆ ಮಾರುಕಟ್ಟೆಗಳಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಹೆಚ್ಚು ಬಂಡವಾಳ ಹಾಕಿದ್ದ ರೈತರಿಗೆ ಖರ್ಚಾದ ಹಣವೂ ಕೈ ಸೇರದ ಪರಿಸ್ಥಿತಿ ಎದುರಾಗಿದೆ. ಕಡಿಮೆ ದರವಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಹೀಗಾಗಿ, ಸರಾಸರಿ ಬೆಲೆ ನಿಗದಿಪಡಿಸಬೇಕು ಎಂಬುದು ಸರ್ಕಾರಕ್ಕೆ ಜಿಲ್ಲೆಯ ರೈತರ ಒಕ್ಕೊರಲ ಮನವಿಯಾಗಿದೆ.
ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ
ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿರುವ ಕುರೂರು ಗ್ರಾಮದ ವಿರಾಟ್ ಗೋಪಿ ಅವರು ಮಾತನಾಡಿ,
ಕೆಜಿಎಫ್ ನಲ್ಲಿ ಡ್ರ್ಯಾಗನ್ ಫ್ರೂಟ್ ತಂದ ಮೊದಲ ರೈತ ನಾನು. ಈ ಮೊದಲು ಪ್ರತಿ ಕೆ.ಜಿಗೆ 150 ರೂ. ದರ ಇತ್ತು. ಈ ಹಿಂದೆ ನಮಗೆ ಒಂದು ಎಕರೆಗೆ ನಾಲ್ಕು ಲಕ್ಷ ರೂಪಾಯಿ ನಿವ್ವಳ ಲಾಭ ಸಿಗುತ್ತಿತ್ತು. ರೈತರು ಹೆಚ್ಚು ಡ್ರ್ಯಾಗನ್ ಫ್ರೂಟ್ ಹಾಕಿದ್ದರಿಂದ ಇಳುವರಿ ಚೆನ್ನಾಗಿದೆ. ಹಾಗಾಗಿ ಹಣ್ಣಿನ ದರ ಕುಸಿದಿದೆ. ಪ್ರಸ್ತುತ ಒಂದು ಕೆ.ಜಿಗೆ 40ರಿಂದ 70 ರೂಪಾಯಿ ವರೆಗೆ ದರವಿದೆ. ಡ್ರ್ಯಾಗನ್ ಬೆಳೆದ ರೈತನಿಗೆ ಆರಂಭದಲ್ಲಿ 90-100 ರೂಪಾಯಿ ಸಿಗುತ್ತಿತ್ತು. ಇದೀಗ 80-90ಕ್ಕೆ ಬಂದಿದೆ. ರಾಜ್ಯ ಸರ್ಕಾರ ರೈತರನ್ನು ಉಳಿಸಬೇಕು. ಸರಾಸರಿ ಬೆಲೆ ನಿಗದಿಪಡಿಸಬೇಕು. ತೋಟಗಾರಿಕಾ ಇಲಾಖೆ ಗಮನಹರಿಸಬೇಕು. ಆರಂಭದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಒಂದು ಎಕರೆಗೆ 4 ಲಕ್ಷ ರೂ. ಖರ್ಚು ಬರುತ್ತದೆ" ಎಂದು ತಿಳಿಸಿದರು.
ಹಣ್ಣಿನ ದರ ಕುಸಿತವಾಗಿರುವಾಗ ಗ್ರಾಹಕರೊಬ್ಬರು ಖರೀದಿಗೆ ಮುಂದಾಗಿರುವುದು
ಒಂದು ಹಣ್ಣಿಗೆ 100 ರೂಪಾಯಿ ಇತ್ತು :ಡ್ರ್ಯಾಗನ್ ವ್ಯಾಪಾರಿ ಮಂಡಿ ವ್ಯಾಪಾರಿ ಮೊಹಮ್ಮದ್ ಅಲಿ ಅವರು ಮಾತನಾಡಿ, "ನಮ್ಮ ರಾಜ್ಯದಲ್ಲಿ ಈ ಹಣ್ಣು ಬೆಳೆಯುತ್ತಿರಲಿಲ್ಲ. ಒಂದು ಹಣ್ಣಿಗೆ ಈ ಹಿಂದೆ ಒಂದು ನೂರು ರೂಪಾಯಿ ಇತ್ತು. ಇದೀಗ ನಮ್ಮ ರಾಜ್ಯದ ಹಳ್ಳಿಗಳಲ್ಲಿ ರೈತರು ಹೆಚ್ಚಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿರುವ ಕಾರಣ 20ರಿಂದ 50 ಹಾಗೂ 100 ರೂಪಾಯಿ ತನಕ ದರ ಇದೆ. ಚಿಕ್ಕ ಹಣ್ಣುಗಳಿಗೆ ಕೆ.ಜಿಗೆ 20 ರೂಪಾಯಿ ಇದೆ. ಮೊದಲೆಲ್ಲ ನಾವು ಕೆ.ಜಿಗೆ 100-150 ದರದಲ್ಲಿ ಮಾರಾಟ ಮಾಡಿದ್ದೇವೆ. ಈ ಹಣ್ಣು ಮಳೆಗಾಲದಲ್ಲಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತದೆ. ಈ ಹಿಂದೆ ಹಣ್ಣು ಪ್ಯಾಕಿಂಗ್ ಆಗಿ ಹೊರಗಡೆಯಿಂದ ಬರುತ್ತಿತ್ತು. ಆ ಹಣ್ಣುಗಳಿಗೆ ಕೆ.ಜಿಗೆ 250-300 ರೂಪಾಯಿ ಇತ್ತು. ಪ್ರಸ್ತುತ 100 ರೂಪಾಯಿಗೆ ಮೂರು ಕೆ.ಜಿಯಂತೆ ಮಾರಾಟ ಮಾಡುತ್ತಿದ್ದೇವೆ" ಎಂದು ಹೇಳಿದರು.