ಪುಸ್ತಕ ಸಂಸ್ಕೃತಿ ಉಳಿವಿಗಾಗಿ ಹೋರಾಡಬೇಕಾಗಿದೆ,ನಿಡಸಾಲೆ ಪುಟ್ಟಸ್ವಾಮಯ್ಯ
ಬೆಂಗಳೂರಿನ ಮಲ್ಲತಳ್ಳಿಯ ಗಾನಪಲ್ಲವಿ ಆಡಿಟೋರಿಯಂ ನಲ್ಲಿ ಕವಿ ಉದಂತ ಶಿವಕುಮಾರ ಅವರ "ಜೀವನ ಯಾನ" ಕವನ ಸಂಕಲನವನ್ನು ನಿಡಸಾಲೆ ಪುಟ್ಟಸ್ವಾಮಯ್ಯನವರು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ ಒಂದು ವರ್ಷದಲ್ಲಿ ಸುಮಾರು ಏಳರಿಂದ ಎಂಟು ಸಾವಿರ ಕನ್ನಡ ಕೃತಿಗಳು ಪ್ರಕಟಣೆಯಾಗುತ್ತಿವೆ. ಆದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕಗಳ ಖರೀದಿಯನ್ನು ಸ್ಥಗಿತಗೊಳಿಸಿದೆ. ಗ್ರಂಥಾಲಯ ಶೇಕಡ 6ರಷ್ಟು ಕರವನ್ನು ಸಾರ್ವಜನಿಕರಿಂದ ವಸೂಲು ಮಾಡುತ್ತಿದ್ದರೂ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಪುಸ್ತಕಗಳನ್ನು ಖರೀದಿ ಮಾಡುತ್ತಿಲ್ಲ. ಸಗಟು ಪುಸ್ತಕ ಖರೀದಿ ನಿಂತು ಹೋಗಿದೆ, ರಾಜಾರಾಮ್ ಮೋಹನ್ ರಾಯ್ ಪೌಂಡೇಶನ್ ಯೋಜನೆ ನಿಂತುಹೋಗಿದೆ, ಹರಿಜನ ಗಿರಿಜನ ಗ್ರಂಥಾಲಯಗಳ ಪುಸ್ತಕ ಖರೀದಿ ನಿಂತುಹೋಗಿದೆ ಇಂತಹ ಸಮಯದಲ್ಲಿ ಲೇಖಕರು ಪ್ರಕಾಶಕರು ಒಗ್ಗೂಡಿ ಪುಸ್ತಕ ಸಂಸ್ಕೃತಿ ಉಳಿವಿಗಾಗಿ ಹೋರಾಡಬೇಕಾಗಿದೆ. ಗ್ರಂಥಾಲಯ ಇಲಾಖೆಯನ್ನು ಸರ್ಕಾರ ಅನುಪಯುಕ್ತ ಇಲಾಖೆ ಎಂದು ಪರಿಗಣಿಸಿದಂತಿದೆ. ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಖರೀದಿಸಿ ಪುಸ್ತಕ ಸಂಸ್ಕೃತಿಯನ್ನು ಉಳಿಸಬೇಕೆಂದು ಈ ಮೂಲಕ ನಾನು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕೋಶಾಧ್ಯಕ್ಷರು ಹಾಗೂ ಲೇಖಕರಾದ ಡಾ.ಹೆಚ್.ತುಕಾರಾಂ ಅವರು ಮಾತನಾಡುತ್ತಾ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಪುಸ್ತಕಗಳನ್ನು ಕೊಂಡುಕೊಳ್ಳಬೇಕು ಹಾಗೂ ಎಲ್ಲಾ ಲೇಖಕರಿಗೂ ಮತ್ತು ಪ್ರಕಾಶಕರಿಗೂ ನ್ಯಾಯ ದೊರಕಿಸುವಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಈ ಮೂಲಕ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಇಲಾಖೆಯು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಲೇಖಕರಾದ ದಮ್ಮಪ್ರಿಯ ಎಂ. ಗಿರಿಯಪ್ಪನವರು ಮಾತನಾಡುತ್ತಾ ಸಾಹಿತ್ಯ ಅಸಹಾಯಕರಿಗೆ ಧ್ವನಿಯಾಗಬೇಕು, ಸಮಾಜದಲ್ಲಿನ ಅಸಮಾನತೆಯನ್ನು ಖಂಡಿಸಬೇಕು, ಮೌಢ್ಯಗಳನ್ನು ತೊಲಗಿಸಬೇಕು, ವೈಜ್ಞಾನಿಕ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಬೇಕು. ಸಮಾನತೆ, ಸಹಕಾರ ಮನೋಭಾವ ಬಿತ್ತಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ಎನ್. ವಿಜಯ್ ಮತ್ತು ಕವಿ ಉದಂತ ಶಿವಕುಮಾರ್ ಅವರು ಉಪಸಿತರಿದ್ದರು.