ಪ್ರಪಂಚಕ್ಕೆ ಸಮಾನತೆಯ ಸಂದೇಶ ಸಾರಿದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್: ಶಾಸಕಿ ರೂಪಕಲಾ ಶಶಿಧರ್

ಪ್ರಪಂಚಕ್ಕೆ ಸಮಾನತೆಯ ಸಂದೇಶ ಸಾರಿದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್: ಶಾಸಕಿ ರೂಪಕಲಾ ಶಶಿಧರ್

   ಕೆಜಿಎಫ್, ಆ. 5: ಭಾರತದಲ್ಲಿ ಬಡವರು, ದಲಿತರು, ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ನ್ಯಾಯ ದೊರೆಯುವಂತೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.
ನಗರಸಭೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಸಂವಿಧಾನವನ್ನು ರೂಪಿಸಿದ ಮಹಾನ್ ಶಿಲ್ಪಿಗೆ ನಾವು ಸಲ್ಲಿಸುವ ಗೌರವ ಎಷ್ಟೇ ಇದ್ದರೂ ಕಡಿಮೆಯೇ ಎಂದರು.
ಕೆಜಿಎಫ್‌ಗೆ ಡಾ. ಅಂಬೇಡ್ಕರ್ ಅವರು ಆಗಮಿಸಿದ್ದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಶಾಸಕಿ, ಅವರ ಸ್ಮರಣಾರ್ಥ ನಗರದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮ್ಯೂಸಿಯಂ, ಉದ್ಯಾನವನ ಹಾಗೂ ಸಾರ್ವಜನಿಕ ಗ್ರಂಥಾಲಯ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಇದರಿಂದ ಮುಂದಿನ ಪೀಳಿಗೆಗೆ ಅವರ ಆದರ್ಶ, ತತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದ ಅವರು, ಕೆಜಿಎಫ್‌ನಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವಂತೆ ಕೈಗಾರಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯನ್ನು ಯಾವುದೇ ಕಾರಣಕ್ಕೂ ಕೆಜಿಎಫ್‌ನಿಂದ ಸ್ಥಳಾಂತರಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕಿ, ಇದರ ಜೊತೆಗೆ ಇನ್ನಷ್ಟು ಸರ್ಕಾರಿ ಕಚೇರಿಗಳನ್ನು ಕೆಜಿಎಫ್ ತಾಲೂಕಿಗೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಾಜಪೂತ್, ನಗರಸಭೆ ಪೌರಾಯುಕ್ತ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ, ನಗರಸಭೆ ಅಧ್ಯಕ್ಷ ಶ್ರೀನಿವಾಸನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಯಂ, ಮುಖಂಡ ಎ. ಮು. ಲಕ್ಷ್ಮೀನಾರಾಯಣ, ಮಾಜಿ ನಗರಸಭೆ ಅಧ್ಯಕ್ಷ ವಲ್ಲಾಳ ಮುನಿಸ್ವಾಮಿ, ಇಂದಿರಾಗಾಂಧಿ, ದಯಾನಂದ, ಸೇವ್ ಕೆಜಿಎಫ್ ಸಮಿತಿ ಅಧ್ಯಕ್ಷ ಜ್ಯೋತಿಬಾಸು ಸೇರಿದಂತೆ ಹಲವು ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.