ಶ್ರೀ ವಿನಾಯಕ ಯುವಕರ ಬಳಗದಿಂದ ವಿಜೃಂಭಣೆಯ ಗೌರಿ–ಗಣೇಶ ಮೂರ್ತಿ ವಿಸರ್ಜನೆ

ಶ್ರೀ ವಿನಾಯಕ ಯುವಕರ ಬಳಗದಿಂದ ವಿಜೃಂಭಣೆಯ ಗೌರಿ–ಗಣೇಶ ಮೂರ್ತಿ ವಿಸರ್ಜನೆ

        ಬೇತಮಂಗಲ: ಇಲ್ಲಿಗೆ ಸಮೀಪದ ಮಹದೇವಪುರ ಗ್ರಾಮದ ಶ್ರೀ ವಿನಾಯಕ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿಸರ್ಜನೆ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಗೌರಿ–ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

 ಮೆರವಣಿಗೆಯಲ್ಲಿ ಯುವಕರು ಕೇಸರಿ ಶಾಲು ಧರಿಸಿ, ತಮಟೆ ವಾದ್ಯಗಳೊಂದಿಗೆ ಸಂಭ್ರಮಿಸಿದರು. ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನಿಗೆ ಜಯಘೋಷಗಳನ್ನು ಮೊಳಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರು, ರಾಮಕೃಷ್ಣಪ್ಪ ಅವರು ಭಾರತೀಯ ಸೇನೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕವೂ ಗ್ರಾಮಕ್ಕೆ ಆಗಮಿಸಿ ಯುವಕರಿಗೆ ಪ್ರೋತ್ಸಾಹ ನೀಡುವ ಮೂಲಕ ಹಬ್ಬದ ಆಚರಣೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಶ್ರೀ ವಿನಾಯಕ ಯುವಕರ ಬಳಗದ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಸಂದರ್ಭದಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಭಕ್ತಿಭಾವದಿಂದ ನಿಗದಿತ ಸ್ಥಳಕ್ಕೆ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹದೇವಪುರ  ಗ್ರಾಮಸ್ಥರು ಹಾಗೂ ಯುವಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.