ಯೋಗ ಆರೋಗ್ಯ ಸಂಜೀವಿನಿ
ಒಂದನೇ ಕರ್ನಾಟಕ ಬೆಟಾಲಿಯನ್, ಪತಂಜಲಿ ಯೋಗ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ರಾಜಾಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಸಿ ಸಿ ಘಟಕವು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿತು. 2026ನೇ ವರ್ಷ ಆರೋಗ್ಯಕರ ವಯೋವೃದ್ದಿಗಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.2014ರಂದು ವಿಶ್ವಸಂಸ್ಥೆಯಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಯೋಗದ ಮಹತ್ವದ ಪ್ರಸ್ತಾಪ ಮಂಡಿಸಿದರು. ನಂತರ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವೆಂದು ವಿಶ್ವ ಸಂಸ್ಥೆ ಪ್ರಕಟಿಸಿತು. ಅಂದಿನಿಂದ ಇಂದಿನವರೆಗೆ ವಿಶ್ವದೆಲ್ಲೆಡೆ ಯೋಗಾಭ್ಯಾಸದ ಪ್ರಾಮುಖ್ಯತೆಯನ್ನು ಪ್ರಸರಿಸಲಾಗುತ್ತಿದೆ.
ಭಾರತದ ಪ್ರಾಚೀನ ಪರಂಪರೆಯ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿಯ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯ ಭಾಗ್ಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಗ್ಗೆ ಎನ್ ಸಿ ಸಿ ಅಧಿಕಾರಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಜಾಕ್ಷಿ ಹಳ್ಳಿಯವರ ಅವರು ಯುವ ಜನತೆಗೆ ಮಾಹಿತಿ ನೀಡಿದರು.
ಯೋಗ ಪಟು ಸತೀಶ್ ಕೆ ಹಾಗೂ ಸರಸ್ವತಿ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಯೋಗಾಸನಗಳನ್ನು ಪರಿಚಯಿಸಿಕೊಟ್ಟರು. ಎನ್ ಸಿಸಿ ಕೆಡೆಟ್ಸ್ ಗಳು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಳೇ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.ಇದೇ ಸಂದರ್ಭದಲ್ಲಿ ಎನ್ಸಿಸಿ ಕೆಡೆಟ್ಸ್ ಗಳು ಜಾತ ನಡೆಸುವ ಮೂಲಕ ಸಾರ್ವಜನಿಕರಿಗೆ ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.