9.50 ಕೋಟಿ ವೆಚ್ಚದ ಬೃಹತ್ ಸೇತುವೆ ನಿರ್ಮಾಣಕ್ಕೆ ಶಾಸಕಿ ರೂಪಕಲಾ ಭೂಮಿಪೂಜೆ

9.50 ಕೋಟಿ ವೆಚ್ಚದ ಬೃಹತ್ ಸೇತುವೆ ನಿರ್ಮಾಣಕ್ಕೆ ಶಾಸಕಿ ರೂಪಕಲಾ ಭೂಮಿಪೂಜೆ

ಕ್ಷೇತ್ರದ 5ನೇ ಸೇತುವೆ ನಿರ್ಮಾಣಕ್ಕೆ ಚಾಲನೆ; ಸಂಚಾರಕ್ಕೆ ಮತ್ತಷ್ಟು ಅನುಕೂಲ

ಬೇತಮಂಗಲ: ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತಿರೆಡ್ಡಿಹಳ್ಳಿ ಗ್ರಾಮದ ಸಮೀಪ ಸುಮಾರು 9.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಬೃಹತ್ ಸೇತುವೆ ಕಾಮಗಾರಿಗೆ ಇಂದು ಶಾಸಕಿ ರೂಪಕಲಾ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾತಿರೆಡ್ಡಿಹಳ್ಳಿ ಮಾರ್ಗವು ನಾಲ್ಕು ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಹಾಗೂ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಪೂರ್ವಿಕರು ನಿರ್ಮಿಸಿದ್ದ ಹಳೆಯ ಸೇತುವೆ ಕಿರಿದಾಗಿದ್ದು, ಮಳೆಗಾಲದಲ್ಲಿ ಕೆರೆಯ ಕೋಡಿ ಹರಿದಾಗ ಹಾಗೂ ಭಾರೀ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಆಲುಗಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ಸಾರ್ವಜನಿಕರು ಹಾಗೂ ರೈತರು ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು ಎಂದು ತಿಳಿಸಿದರು.

ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ನತ್ತ, ಬಡಮಾಕನಹಳ್ಳಿ, ಮಲ್ಲಹಳ್ಳಿ ಹಾಗೂ ಕೃಷ್ಣವರಂ ಸೇರಿದಂತೆ ನಾಲ್ಕು ಕಡೆ ಸೇತುವೆಗಳು ನಿರ್ಮಾಣವಾಗಿದ್ದು, ರಾಮಸಾಗರ ಸಮೀಪ ನಿರ್ಮಾಣವಾಗುತ್ತಿರುವ ಈ ಸೇತುವೆ ಕ್ಷೇತ್ರದ ಐದನೇ ಪ್ರಮುಖ ಸೇತುವೆಯಾಗಿದೆ. ಗಾತ್ರ ಹಾಗೂ ಉಪಯೋಗದ ದೃಷ್ಟಿಯಿಂದ ಇದು ಅತ್ಯಂತ ದೊಡ್ಡ ಸೇತುವೆಯಾಗಲಿದೆ ಎಂದು ತಿಳಿಸಿದರು.

ಸೇತುವೆಯ ವಿವರ: ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 9.50 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ 3.45 ಮೀಟರ್ ಅಗಲವಿರುವ ಸೇತುವೆಯನ್ನು 12 ಮೀಟರ್ ಅಗಲಕ್ಕೆ ವಿಸ್ತರಿಸಿ ಆಧುನಿಕ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಇದು ಇಡೀ ಕೋಲಾರ ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಸೇತುವೆಗಳಲ್ಲಿ ಒಂದಾಗಲಿದೆ ಎಂದು ಹೇಳಿದರು.

ರೈತರಿಂದ ಸಹಕಾರ: ಸೇತುವೆ ನಿರ್ಮಾಣಕ್ಕೆ ಜಾಗದ ಕೊರತೆ ಎದುರಾದ ಸಂದರ್ಭದಲ್ಲಿ ಹಳೆಯ ಸೇತುವೆಯ ಎರಡೂ ಬದಿಯ ರೈತರು ಸ್ವಯಂಪ್ರೇರಿತರಾಗಿ ತಮ್ಮ ಜಮೀನಿನ ಭಾಗವನ್ನು ಬಿಟ್ಟುಕೊಟ್ಟು ಸಹಕಾರ ನೀಡಿರುವುದು ಶ್ಲಾಘನೀಯ. ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ಸಹಕರಿಸಿದ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸೇತುವೆ ಮುಂದಿನ ಪೀಳಿಗೆಗೂ ಸಾರ್ವಜನಿಕರು ಹಾಗೂ ರೈತರಿಗೆ ಉಪಯೋಗವಾಗುವ  100 ವರ್ಷಗಳ ಶಾಶ್ವತ ಆಸ್ತಿಯಾಗಿ ಉಳಿಯಲಿದೆ ಎಂದು ಶಾಸಕಿ ರೂಪಕಲಾ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮಾಜಿ ಜಿಪಂ ಸದಸ್ಯ ಅಮು ಲಕ್ಷ್ಮೀನಾರಾಯಣ್, ಮಾಜಿ ಗ್ರಾಪಂ ಅಧ್ಯಕ್ಷರಾದ ಚಂದ್ರಪ್ಪ, ವಿನೂ ಕಾರ್ತಿಕ್, ಸ್ಕೂಲ್ ವೆಂಕಟೇಶಪ್ಪ, ಅಪ್ಪಾಜಿ ಗೌಡ, ಮಾಜಿ ಗ್ರಾಪಂ ಸದಸ್ಯರಾದ ಸುರೇಂದ್ರ ಗೌಡ ಶ್ರೀದೇವಿ ಸಂಪತ್ ಎಪಿಎಂಸಿ ಸದಸ್ಯರಾದ ಯುವರಾಣಿ ವೆಂಕಟಾಚಲಪತಿ ಮುರಳಿಕೃಷ್ಣ, ಮುಖಂಡರಾದ ಮುರಳಿ ನಾಯಕ್, ಕೇಶವ್ ರೆಡ್ಡಿ, ಬಾಲರೆಡ್ಡಿ, ಸೇರಿದಂತೆ ಸಾರ್ವಜನಿಕರು, ರೈತರು ಉಪಸ್ಥಿತರಿದ್ದರು. 

ಕೋಟ್ 01:ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ 9.50 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವ ಶಾಸಕಿ ರೂಪಕಲಾ ಅವರಿಗೆ ರೈತರ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳು 

ಬಿ.ನಾಗರಾಜ್ 
ಬೇತಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು 

ಕೋಟ್ 02: ಈ ಸೇತುವೆಯಿಂದ ಗ್ರಾಮೀಣ ಭಾಗದ ಜನರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕೃಷಿ ಉತ್ಪನ್ನಗಳ ಸಾಗಣೆಯೂ ಸುಲಭವಾಗಲಿದೆ ಆದ್ದರಿಂದ ಶಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ 

ಬಾಲರೆಡ್ಡಿ 
ಮಿಂಡಹಳ್ಳಿ ಯುವ ರೈತ