ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ: ಮಾನವೀಯತೆ ಮೆರೆದ ‘ಜೈಭೀಮ್ ಶ್ರೀನಿವಾಸ್’
ಬೇತಮಂಗಲ: ಶಿಕ್ಷಣ ಪ್ರತಿಯೊಬ್ಬ ಮಗುವಿನ ಹಕ್ಕು ಆರ್ಥಿಕ ಸಂಕಷ್ಟದಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಡಾ. ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ವತಿಯಿಂದ ಕಣ್ಣೂರು ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಎವೈವಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಜೈಭೀಮ್ ಶ್ರೀನಿವಾಸ್ ತಿಳಿಸಿದರು.
ಇಲ್ಲಿಗೆ ಸಮೀಪದ ಕಂಗಾಂಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು, ಸಂಘಟನೆ ಎಂದರೆ ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಲ್ಲ. ಸಮಾಜದ ಅಗತ್ಯಗಳಿಗೆ ಸ್ಪಂದಿಸಿ ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಮಾಜಿಕ ಸೇವಾ ಕಾರ್ಯಗಳನ್ನೂ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ನೆರವಾಗುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಜೈಭೀಮ್ ಶ್ರೀನಿವಾಸ್ ಹೇಳಿದರು.
ಶಿಕ್ಷಣಕ್ಕೆ ಆಸರೆಯಾದ ಯುವ ವೇದಿಕೆ: ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಸದಾ ಕಾರ್ಯಪ್ರವೃತ್ತವಾಗಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ಎಂಬ ಸಂದೇಶದಂತೆ ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ವ್ಯಕ್ತಪಡಿಸಿದರು.
ಗ್ರಾಮಸ್ಥರಿಂದ ಕೃತಜ್ಞತೆ: ವಿದ್ಯಾರ್ಥಿಗಳಿಗೆ ನೆರವು ಹಸ್ತ ಚಾಚಿದ ಡಾ. ಅಂಬೇಡ್ಕರ್ ಯುವ ವೇದಿಕೆಯ ರಾಜ್ಯಧ್ಯಕ್ಷ ಜೈಭೀಮ್ ಶ್ರೀನಿವಾಸ್ ಹಾಗೂ ಅವರ ಸಂಗಡಿಗರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಕಾರ್ಯಕ್ರಮಗಳನ್ನು ಕೈಗೊಳ್ಳಲಿ ಎಂದು ಕಣ್ಣೂರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಕೃತಜ್ಞತೆ ಸಲ್ಲಿಸಿದರು.
50 ಹಳ್ಳಿಗಳ ಗುರಿ: ಕೆಜಿಎಫ್ ತಾಲ್ಲೂಕಿನ ಒಟ್ಟು 50 ಗ್ರಾಮಗಳ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಬೃಹತ್ ಗುರಿಯನ್ನು ನಮ್ಮ ಸಂಘಟನೆ ಹೊಂದಿದೆ ಎಂದು ಜೈಭೀಮ್ ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಎವೈವಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಜೈಭೀಮ್ ಶ್ರೀನಿವಾಸ್, ರಾಜ್ಯ ಯುವ ಘಟಕ ಅಧ್ಯಕ್ಷ ಕೃಷ್ಣ ಮೂರ್ತಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಜು, ಹೋಬಳಿ ಅಧ್ಯಕ್ಷ ಪ್ರವೀಣ್, ಜಿಲ್ಲಾ ಯುವ ಮುಖಂಡರುಚರಣ್, ಗ್ರಾಮದ ಮುಖಂಡರಾದ ಅಂಬರೀಷ್, ನವೀನ್, ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿದ್ದರು.