Friday, January 28, 2022
Home ಮನರಂಜನೆ ಅ. 28ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ

ಅ. 28ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ

ಅ. 28ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ
(ಸುದ್ದಿಕಿರಣ ವರದಿ)

ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಅ. 28ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಹಿರಿಮೆ ಗರಿಮೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಸೂಚನೆ ನೀಡಿದರು.

ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಸೂಚನೆ ನೀಡಿದರು.

ಕಾಟಾಚಾರದ ಕಾರ್ಯಕ್ರಮವಾಗದಿರಲಿ
ಎಲ್ಲಾ ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದ ಅವರು, ಅದನ್ನು ಸರಕಾರಿ ಕಾರ್ಯಕ್ರಮ ಎಂಬಂತೆ ಕಾಟಾಚಾರಕ್ಕಾಗಿ ನಡೆಸದೇ ಎಲ್ಲಾ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭೂತಪೂರ್ವವಾಗಿ ಆಯೋಜಿಸಿ. ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕವೂ ವೀಕ್ಷಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ. ಕಾರ್ಯಕ್ರಮದ ಸಂಪೂರ್ಣ ವೀಡಿಯೊ ಚಿತ್ರೀಕರಣ, ಡ್ರೋಣ್ ಚಿತ್ರೀಕರಣ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಸಂಖ್ಯೆಯ ವಿವರ ಇತ್ಯಾದಿ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣ ಮಾಡುವಂತೆ ಸೂಚಿಸಿದರು.

ಭಾಷಣ ಬೇಡ; ಸಂಕಲ್ಪ ಮಾಡಿ
ಕಾರ್ಯಕ್ರಮಕ್ಕೂ ಮುನ್ನ ಯಾವುದೇ ಭಾಷಣ ಬೇಡ. 10.45ಕ್ಕೆ ನಿಗದಿತ ಜಾಗದಲ್ಲಿ ಸಮಾವೇಶಗೊಂಡು 11 ಗಂಟೆಗೆ ಸರಿಯಾಗಿ ಹಾಡಲು ಆರಂಭಿಸಬೇಕು. ಈ ಮೂರೂ ಗೀತೆಗಳ ಜೊತೆಗೆ ಕನ್ನಡ ನಾಡು, ನುಡಿಯ ಮಹತ್ವ ಇರುವ ಇತರ ಗೀತೆಗಳನ್ನೂ ಹಾಡಬಹುದಾಗಿದ್ದು, ಕೊನೆಯಲ್ಲಿ ಕನ್ನಡದ ಬಳಕೆ ಕುರಿತು ಸಂಕಲ್ಪ ಮಾಡಬೇಕು ಎಂದು ಸಚಿವ ಸುನಿಲ್ ತಿಳಿಸಿದರು.

ವಿಮಾನ ನಿಲ್ದಾಣ ಮುಂಭಾಗ, ಮೆಟ್ರೋ, ಆಟೋ ರಿಕ್ಷಾ ಸಂಘಗಳಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮಾಲ್ ಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ, ರಾಜ್ಯದ ಗಡಿನಾಡ ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗದಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸುವಂತೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!