Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಲ್ಕೊರೆತ ಪರಿಹಾರ: 100 ಕೋ. ರೂ.ಗೆ ಕೇಂದ್ರಕ್ಕೆ ಪ್ರಸ್ತಾವನೆ

ಕಡಲ್ಕೊರೆತ ಪರಿಹಾರ: 100 ಕೋ. ರೂ.ಗೆ ಕೇಂದ್ರಕ್ಕೆ ಪ್ರಸ್ತಾವನೆ

ಉಡುಪಿ: ಜಿಲ್ಲೆಯಲ್ಲಿ ಸಮುದ್ರ ಕೊರೆತದಿಂದ ಉಂಟಾದ ಹಾನಿಗೆ 100 ಕೋ. ರೂ. ವಿಶೇಷ ಪರಿಹಾರ ನೀಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಸೋಮವಾರ ಜಿ. ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತ ಹಾಗೂ ಪ್ರಾಕೃತಿಕ ವಿಕೋಪದಿಂದ 9,115 ಮೀ. ಉದ್ದದ ಸಮುದ್ರ ಕೊರೆತ ಸಂಭವಿಸಿ ಅಂದಾಜು 90 ಕೋ. ರೂ.ಗಿಂತ ಅಧಿಕ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ಪೂರ್ಣ ಪ್ರಮಾಣದ ಒಂದು ಎಸ್.ಡಿ.ಆರ್.ಎಫ್. ತಂಡ ಜಿಲ್ಲೆಗೆ ಮಂಜೂರು ಮಾಡಲಾಗುವುದು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಹಾನಿಯಾದವರಿಗೆ ಗರಿಷ್ಟ 2 ದಿನದಲ್ಲಿ ಪರಿಹಾರ ಹಾಗೂ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದರು.

ವಾತ್ಸಲ್ಯ ತ್ವರಿತಗೊಳಿಸಿ
ಕೋವಿಡ್ 3ನೇ ಅಲೆ ತಡೆ ನಿಟ್ಟಿನಲ್ಲಿ ಜಿಲ್ಲೆಯ 2.40 ಲಕ್ಷ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ಕಾರ್ಯಕ್ರಮ ವಾತ್ಸಲ್ಯ ಆ. 15ರೊಳಗೆ ಪೂರ್ಣಗೊಳಿಸಬೇಕು. ಪ್ರತೀ ಗ್ರಾಮದ ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಅಪೌಷ್ಠಿಕತೆ ಇರುವ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್, ಉಚಿತ ಔಷಧಿ ವಿತರಿಸಬೇಕು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು.

ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದಲ್ಲಿ ಆ ಮಕ್ಕಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ವಾತ್ಸಲ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯವಿದೆ ಎಂದು ಗುರುತಿಸಲ್ಪಡುವ ಎಲ್ಲಾ ಮಕ್ಕಳಿಗೂ ಎಪಿಲ್, ಬಿಪಿಎಲ್ ಬೇಧವಿಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರಯಲು ಅನುಕೂಲವಾಗುವಂತೆ ಆಯುಷ್ಮಾನ್ ಯೋಜನೆಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಸಚಿವ ಬೊಮ್ಮಾಯಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಶಿಕ್ಷಕರಿಗೂ ಕೋವಿಡ್ ಲಸಿಕೆ ನೀಡುವಂತೆ ಸೂಚಿಸಿದರು.

ಅಗತ್ಯ ಲಸಿಕೆ ಪೂರೈಕೆ
ಜಿಲ್ಲೆಗೆ ಪ್ರತಿದಿನ 10 ಸಾವಿರ ಕೋವಿಡ್ ಲಸಿಕೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ದೊರೆಯುವ ಲಸಿಕೆಯನ್ನು ಅದೇ ದಿನ ಬಳಸಬೇಕು. ಆ ಮೂಲಕ ಜಿಲ್ಲೆಯಲ್ಲಿ ತಿಂಗಳಿಗೆ 2.5 ಲಕ್ಷ ಲಸಿಕೆ ನೀಡಿ, 4 ತಿಂಗಳ ಅವಧಿಯಲ್ಲಿ ಇಡೀ ಜಿಲ್ಲೆಯಲ್ಲಿ ಲಸಿಕೆ ನೀಡುವ ಪ್ರಮಾಣದ ಸಂಪೂರ್ಣ ಗುರಿ ಸಾಧಿಸಬೇಕು. ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಯಾವುದೇ ಗೊಂದಲಗಳಾಗದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಜುಲೈ ಅಂತ್ಯದೊಳಗೆ ಲಸಿಕೆ ನೀಡುವಂತೆ ಸೂಚಿಸಿದರು.

ಕೋವಿಡ್ 2ನೇ ಅಲೆ ನಿಯಂತ್ರಣದಲ್ಲಿ ಜಿಲ್ಲೆಯ ಎಲ್ಲಾ ವೈದ್ಯರು, ಆರೋಗ್ಯ ಇಲಾಖೆ ಸಹಾಯಕ ಸಿಬ್ಬಂದಿ ಮತ್ತು ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಖಾಸಗಿಯವರೂ ಉತ್ತಮ ಸಹಕಾರ ನೀಡಿದ್ದಾರೆ. ಆಕ್ಸಿಜನ್ ನಿರ್ವಹಣೆ, ರೆಮಿಡಿಸಿವರ್ ಬಳಕೆ ಎಲ್ಲದರಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸಲಾಗಿದೆ. ಅದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಬೊಮ್ಮಾಯಿ ಹೇಳಿದರು.

3ನೇ ಅಲೆ ಎದುರಿಸಲು ಕ್ರಮ
ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 50 ಮಕ್ಕಳ ಐ.ಸಿ.ಯು. ಬೆಡ್ ಗಳನ್ನು ವೆಂಟಿಲೇಟರ್ ಸಹಿತ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಆಕ್ಸಿಜನ್ ಜನರೇಟರ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಅವುಗಳ ಕಾರ್ಯಾರಂಭ ಮಾಡುವ ಮೂಲಕ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಬಿಆರ್.ಎಸ್. ಆಸ್ಪತ್ರೆ ಸರಕಾರದಿಂದಲೇ ನಿರ್ವಹಣೆ
ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್.) ನಡೆಸಲು ಸಾಧ್ಯವಿಲ್ಲ ಎಂದು ಖಾಸಗಿಯವರು ಪತ್ರ ಬರೆದಿದ್ದು, ಈ ಆಸ್ಪತ್ರೆಯನ್ನು ಸರಕಾರವೇ ನಡೆಸುವ ಕುರಿತಂತೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಬೊಮ್ಮಾಯಿ ಹೇಳಿದರು.

ಈಗಾಗಲೇ ಈ ಆಸ್ಪತ್ರೆಯಲ್ಲಿ 70 ಬೆಡ್ ಸಾಮರ್ಥ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕವಾಗಿದ್ದು, ಕೋವಿಡ್ 3ನೇ ಅಲೆ ಎದುರಿಸುವಲ್ಲಿ ಜಿಲ್ಲಾಡಳಿತಕ್ಕೆ ಈ ಆಸ್ಪತ್ರೆ ನೆರವಾಗಲಿದೆ ಎಂದರು

ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸುನಿಲ್ ಕುಮಾರ್ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ. ಪಂ. ಸಿಇಓ ಡಾ. ನವೀನ್ ಭಟ್, ಎಸ್.ಪಿ. ವಿಷ್ಣುವರ್ಧನ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಹೆಚ್ಚುವರಿ ಜಿಲ್ಲಾದಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!