Tuesday, May 17, 2022
Home ಸಮಾಚಾರ ಅಪರಾಧ ಪೆಟ್ರೋಲ್ ಬಾಂಬ್ ಸಂಗ್ರಹ: ಮೂವರ ಸೆರೆ

ಪೆಟ್ರೋಲ್ ಬಾಂಬ್ ಸಂಗ್ರಹ: ಮೂವರ ಸೆರೆ

ಸುದ್ದಿಕಿರಣ ವರದಿ
ಸೋಮವಾರ, ಮೇ 9

ಪೆಟ್ರೋಲ್ ಬಾಂಬ್ ಸಂಗ್ರಹ: ಮೂವರ ಸೆರೆ
ಬೆಂಗಳೂರು: ಗಲಭೆ ಸೃಷ್ಟಿಸುವ ಉದ್ದೇಶದಿಂದ ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಸಂಭಾವ್ಯ ಗಲಭೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಸರಾಯಿ ಪಾಳ್ಯದ ಮುನಾವರ್ ಪಾಷಾ, ಸೈಯದ್ ಅಸ್ಗರ್ ಹುಸೇನ್, ಸಿಕಂಧರ್ ಬಂಧಿತ ಆರೋಪಿಗಳು ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಬಂಧಿತರಿಂದ 1 ನಾಡ ಪಿಸ್ತೂಲು, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗು, ಮಚ್ಚುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೂರ್ವ ವಿಭಾಗದಲ್ಲಿ ರೌಡಿ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು ಬಂಧಿತ ಮುನಾವರ್ ಬಳಿ ಲಾಂಗು, ಪಿಸ್ತೂಲ್ ಇರುವ ಬಗ್ಗೆ ಖಚಿತ ಮಾಹಿತಿಯಿಂದ ಕಾರ್ಯಾಚರಣೆ ನಡೆಸಿ ಪಿಸ್ತೂಲ್ ಜೊತೆಗೆ ಒಂದು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ.

ರೌಡಿ ಶೀಟರ್ ಮೊಹ್ಮದ್ ಅಸೀಬುಲ್ಲಾ ಖಾನ್ ತನ್ನ ಗುಂಪಿನೊಂದಿಗೆ ಗಲಭೆಯುಂಟುಮಾಡಲು ಸಂಚು ಮಾಡಿರುವ ಮಾಹಿತಿ ಲಭಿಸಿತ್ತು. ಆ ಸಂಬಂಧ ತನಿಖೆ ನಡೆಸಿದಾಗ ಪ್ರಕರಣದ ಜಾಡು ಪತ್ತೆಯಾಗಿದೆ.

ಆರೋಪಿ ಸೈಯದ್ ನನ್ನು ಬಂಧಿಸಿದಾಗ 19 ಬಾಟಲ್ ಗಳು ಸಿಕ್ಕಿದ್ದು ಅದರಲ್ಲಿ 10 ಬಾಟಲ್ ಗಳಲ್ಲಿ ಪೆಟ್ರೋಲ್ ಬಾಂಬ್ ಇರುವುದು ಗೊತ್ತಾಗಿದೆ. ಆತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಅಸೀಬುಲ್ಲಾ ಖಾನ್ ಎಂಬಾತ ನನಗೆ ಗಲಭೆ ನಡೆಸಲು ಪೆಟ್ರೋಲ್ ಬಾಂಬ್ ತಯಾರಿಸಲು ಹೇಳಿದ್ದ ಎಂದು ಬಾಯ್ಬಿಟ್ಟಿದ್ದಾನೆ.

ತೀವ್ರ ತನಿಖೆ ನಡೆಸಿದಾಗ ಆರೋಪಿ ಅಸ್ಗರ್ ತಾನೇ ಪೆಟ್ರೋಲ್ ತಂದು ಪೆಟ್ರೋಲ್ ಬಾಂಬ್ ಶೇಖರಿಸಿದ್ದು ಗೊತ್ತಾಯಿತು. ತನಿಖೆ ವೇಳೆ ಫೈಯಾಜುಲ್ಲಾ ಖಾನ್ ಎಂಬಾತ ಆರೋಪಿ ಅಸ್ಗರ್ ಗೆ ಹಣ ಕೊಟ್ಟು ಮಾಡಿಸಿರುವುದು ತಿಳಿದುಬಂದಿದೆ.

ಮತ್ತಷ್ಟು ತನಿಖೆ ನಡೆಸಿದಾಗ ಫೈಯಾಜುಲ್ಲಾ ಖಾನ್ ಅಸೀಬುಲ್ಲಾ ಖಾನ್ ನಡುವೆ ಪರಿಚಯವಿತ್ತು. ಅಸೀಬುಲ್ಲಾ ಖಾನ್ ಈ ಹಿಂದೆ ಬೆದರಿಸಿ ಫೈಯಾಜುಲ್ಲ ಮನೆ ಖಾಲಿ ಮಾಡಿಸಿದ್ದ. ಈ ವೇಳೆ ಫೈಯಾಜುಲ್ಲನಿಗೆ 10 ಲಕ್ಷ ರೂ. ನಷ್ಟ ಉಂಟಾಗಿದ್ದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿ ಅಸ್ಗರ್ ಗೆ ಹೇಳಿ ಪೆಟ್ರೋಲ್ ಬಾಂಬ್ ತರಲು ಹೇಳಿದ್ದ ಎನ್ನಲಾಗಿದೆ.

ಆರೋಪಿ ಫಯಾಜ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಬಾಗಲೂರು, ಮಾಕರ್ೆಟ್, ಬಾಣಸವಾಡಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳಿವೆ.

ಸೈಯದ್ ಅಸ್ಗರ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಗ್ರಹ ಕಳವು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!