Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮತ್ಸ್ಯ ಗ್ರಾಮ ನಿರ್ಮಾಣ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮತ್ಸ್ಯ ಗ್ರಾಮ ನಿರ್ಮಾಣ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮತ್ಸ್ಯ ಗ್ರಾಮ ನಿರ್ಮಾಣ
(ಸುದ್ದಿಕಿರಣ ವರದಿ)

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸೋಲಾರ್ ಮೂಲಕ ಒಣಮೀನು ತಯಾರಿ, ಮತ್ಸ್ಯ ಗ್ರಾಮ ನಿರ್ಮಾಣ, ಕುಚ್ಚಲಕ್ಕಿಗೆ ಜಿಯೋ ಟ್ಯಾಗ್ ಕೊಡುವ ಯೋಜನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಕರಾವಳಿ ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಾರ್ ಮೂಲಕ ಒಣಮೀನು ತಯಾರಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರ ಉತ್ಸುಕವಾಗಿದೆ.

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಈ ಯೋಜನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೋಲಾರ್ ಮೂಲಕ ಒಣಮೀನು ತಯಾರಿಯಿಂದ ಒಣಮೀನಿನ ಗುಣಮಟ್ಟದ ಜೊತೆಗೆ ಬೇಡಿಕೆ ಹೆಚ್ಚಾಗಲಿದೆ. ಈ ಯೋಜನೆಗಾಗಿ ಮಲ್ಪೆಯಲ್ಲಿ 20 ಸೆಂಟ್ಸ್ ಜಾಗದಲ್ಲಿ ಅಂದಾಜು 2 ಕೋಟಿ ವೆಚ್ಚ ಮಾಡಿ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

ಕೇಂದ್ರ ಸರಕಾರ ಮತ್ಸ್ಯ ಸಂಪದ ಕಾರ್ಯಕ್ರಮದಡಿಯಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಸುಮಾರು 5 ಎಕರೆ ಜಾಗದಲ್ಲಿ ಮೀನುಗಾರಿಕೆ ಚಟುವಟಿಕೆಗಳಾದ ಮೀನು ಹಿಡಿಯುವುದರಿಂದ ಹಿಡಿದು ಸಗಟು ಮತ್ತು ರಿಟೈಲ್ ಮಾರಾಟ, ಒಣಮೀನು ತಯಾರಿ, ಬಲೆ ನಿರ್ಮಾಣ, ಕೋಲ್ಡ್ ಸ್ಟೋರೇಜ್ ಮೊದಲಾದವುಗಳನ್ನು ಮಾಡಲಾಗುವುದು. ಮಂಗಳೂರಿನ ಸಸಿಹಿತ್ಲುವಿನಲ್ಲಿ ಇದನ್ನು ಮಾಡುವ ಚಿಂತನೆಯಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿಯೂ ಈ ಬಗ್ಗೆ ಪ್ರಸ್ತಾವನೆ ಇದೆ ಎಂದರು.

ಕರಾವಳಿಯ ಕುಚ್ಚಲಕ್ಕಿಗೆ ಜಿಯೋ ಟ್ಯಾಗ್ ಮಾನ್ಯತೆಗಾಗಿ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಸಮುದ್ರ ನೀರಿನ ಗುಣಮಟ್ಟ ಪರಿಶೀಲನೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಗೋವಾ ಮೂಲಕ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ನೀರಿನ ಮಟ್ಟದ ವಿಶ್ಲೇಷಣೆ ನಡೆಸಲು ಯೋಜಿಸಲಾಗಿದೆ.

ಈ ನಿಟ್ಟಿನಲ್ಲಿ ಎಲ್ಲಾ ಮೂರು ಕರಾವಳಿ ಜಿಲ್ಲೆಗಳ ಸಂಬಂಧಪಟ್ಟ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!