Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ `ಕನ್ನಡ ಶಾಲೆಗಳ ಕುರಿತ ಸರಕಾರದ ನಿಲುವು ಸುಧಾರಿಸಬೇಕು'

`ಕನ್ನಡ ಶಾಲೆಗಳ ಕುರಿತ ಸರಕಾರದ ನಿಲುವು ಸುಧಾರಿಸಬೇಕು’

`ಕನ್ನಡ ಶಾಲೆಗಳ ಕುರಿತ ಸರಕಾರದ ನಿಲುವು ಸುಧಾರಿಸಬೇಕು’

(ಸುದ್ದಿಕಿರಣ ವರದಿ)
ಕಟೀಲು : ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ಕುರಿತು ಸರಕಾರದ ನಿಲುವಿನಲ್ಲಿ ಸುಧಾರಣೆಯಾಗಬೇಕಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ನಿಯಮಗಳು ಹಳ್ಳಿಯ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿವೆ. ಕನ್ನಡ ಭಾಷೆ ಉಳಿಸಿ ಎಂಬುದು ಕೇವಲ ಘೋಷಣೆಯಾಗದೆ ನಿಜಾರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿ ಸರಕಾರಕ್ಕಿದೆ ಎಂದು ನಿವೃತ್ತ ಶಿಕ್ಷಕ, ಉಡುಪಿ ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜಮುಖಿ ಕಾರ್ಯಗಳನ್ನು ಮಾಡಲು ಶಿಕ್ಷಕರಿಗೆ ಅನೇಕ ಅವಕಾಶಗಳಿವೆ. ಪುಸ್ತಕದ ಜೊತೆಗೆ ಅದರಲ್ಲಿ ಇಲ್ಲದ ಜೀವನೋತ್ಸಾಹದ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಬೇಕು. ನಿವೃತ್ತಿಯ ಕೊನೆಗೆ ತನ್ನ ಬದುಕಿನ ಪುಸ್ತಕ ತಿರುವಿದಾಗ ಖಾಲಿ ಪುಟಗಳು ಇರದಂತೆ ಸಾಧನೆಯ ಅಕ್ಷರಗಳಿಂದ ತುಂಬಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕನಿಗಿದೆ. ನಿವೃತ್ತಿಯ ಬಳಿಕವೂ ಕುಟುಂಬ, ಸಮಾಜದೊಂದಿಗೆ ತೊಡಗಿಸಿಕೊಂಡಾಗ ಲವಲವಿಕೆ ಇರುತ್ತದೆ ಎಂದವರು ಹೇಳಿದರು.

ಕಟೀಲು ವಿದ್ಯಾಸಂಸ್ಥೆಯಿಂದ ನಿವೃತ್ತಿಗೊಂಡ ಉಪನ್ಯಾಸಕರಾದ ಶಂಕರನಾರಾಯಣ ನಾಯಕ್, ವಿಜಯ್ ಕುಮಾರ್, ಸುರೇಶ್, ಜಗದೀಶ್ಚಂದ್ರ ಕೆ. ಕೆ., ಗಣೇಶ್ ಡಿ., ಅಪರ್ಣ ಮತ್ತು ಶ್ವೇತಾ ಮಾಡ ಅವರನ್ನು ಗೌರವಿಸಲಾಯಿತು.

ಕಟೀಲು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್ ಪ್ರಸಾದ್ ಶೆಟ್ಟಿ, ಅರ್ಚಕ ವೆಂಕಟರಮಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ನಿವೃತ್ತ ಉಪನ್ಯಾಸಕ ನಾರಾಯಣ ಹೆಗಡೆ, ವಿದ್ಯಾಲಯಗಳ ಮುಖ್ಯಸ್ಥರಾದ ಡಾ| ಕೃಷ್ಣ, ಕುಸುಮಾವತಿ, ಸೋಮಪ್ಪ ಅಲಂಗಾರ್, ಸರೋಜಿನಿ, ಚಂದ್ರಶೇಖರ ಭಟ್ ಮತ್ತು ವಿಜಯಲಕ್ಷ್ಮೀ ರಾವ್, ಹಳೆಯಂಗಡಿ ವಿದ್ಯಾವಿನಾಯಕ ಮಂಡಲದ ಸುಧಾಕರ ಅಮೀನ್, ಎಕ್ಕಾರು ವಿಜಯ ಯುವ ಸಂಗಮದ ವಿಕ್ರಂ ಮಾಡ, ಹಳೆ ವಿದ್ಯಾರ್ಥಿ ಸಂಘಗಳ ಲೋಕಯ್ಯ ಸಾಲ್ಯಾನ್, ಕಿರಣ್ ಶೆಟ್ಟಿ ಮೊದಲಾದವರಿದ್ದರು.

ಗೋಪಿನಾಥ ಹೆಗ್ಡೆ, ಶೈಲಜಾ ದಿವಾಕರ್, ಪುಂಡರೀಕ, ಡಾ| ಸುನೀತಾ, ವನಿತ, ರೇಷ್ಮಾ, ಉಷಾ ಪ್ರಕಾಶ್ ಸಂಮಾನಪತ್ರ ವಾಚಿಸಿದರು. ಸಂತೋಷ್ ಆಳ್ವ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!