Monday, July 4, 2022
Home ಸಮಾಚಾರ ಸಂಘಸಂಗತಿ ಉದ್ಯಾವರ: ಹಿರಿಯರ ದಿನ ಆಚರಣೆ

ಉದ್ಯಾವರ: ಹಿರಿಯರ ದಿನ ಆಚರಣೆ

ಉದ್ಯಾವರ: ಇಲ್ಲಿನ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಅಧೀನದ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಯುವ ಮತ್ತು ಆರೋಗ್ಯ ಆಯೋಗ ಸಂಯುಕ್ತಾಶ್ರಯದಲ್ಲಿ ಈಚೆಗೆ ಚರ್ಚ್ ವ್ಯಾಪ್ತಿಯ ಹಿರಿಯರ ದಿನ ಆಚರಣೆ ಮಾಡಲಾಯಿತು.

ಉಡುಪಿ ಧರ್ಮಪ್ರಾಂತ್ಯ ಕುಲಪತಿ ಮತ್ತು ಉದ್ಯಾವರ ಚರ್ಚ್ ಪ್ರಧಾನ ಧರ್ಮಗುರು ವಂ. ಫಾ| ಸ್ಟ್ಯಾನಿ ಬಿ. ಲೋಬೊ ಮತ್ತು ಫಾ| ಝೇವಿಯರ್ ಪಿಂಟೊ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ನಡೆಯಿತು.

ಬಳಿಕ ಚರ್ಚ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ದಾಂಪತ್ಯ ಜೀವನದ ಐವತ್ತಕ್ಕೂ ಅಧಿಕ ಸಂವತ್ಸರ ಪೂರೈಸಿದ ಹಿರಿಯ ಜೋಡಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲವ್ಯಕ್ತಿಯಾಗಿದ್ದ ಮಣಿಪಾಲ ಮಾಹೆ ಸ್ಟೂಡೆಂಟ್ ಕೌನ್ಸಿಲರ್ ಡಾ. ರಾಯನ್ ಮಿನೇಜಸ್, ಪ್ರಸ್ತುತ ಕಾಲದಲ್ಲಿ ಯುವ ಜನರಿಗಿಂತ ಹೆಚ್ಚು ಸಮಸ್ಯೆ ಇರುವುದು ಹಿರಿಯರಿಗೆ. ಹಿಂದಿನ ಕಾಲದಲ್ಲಿ ಮನೆ ತುಂಬಾ ಜನರಿದ್ದರು. ಆದರೆ, ಪರಿಸ್ಥಿತಿ ಬದಲಾಗಿದೆ. ಹಲವು ಮನೆಗಳಲ್ಲಿ ಒಂಟಿ ಜೀವನ ನಡೆಸುವವರೇ ಹೆಚ್ಚು. ಅದರಿಂದಾಗಿ ಮಾನಸಿಕ ಸಂತುಲನ, ಒತ್ತಡ, ಮನಸ್ಸಿಗೆ ಏಕಾಗ್ರತೆ ಇಲ್ಲದೆ ಇರುವುದರಿಂದ ಸಮಸ್ಯೆ ಹೆಚ್ಚಾಗಿವೆ.

ಉದ್ಯೋಗ ನಿಮಿತ್ತ ದೂರ ದೂರದ ಊರಿನಲ್ಲಿರುವ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಒಳ್ಳೆಯ ಮೊಬೈಲ್ ಕೊಡುತ್ತಾರೆ. ಆದರೆ, ದೊಡ್ಡ ಮೊಬೈಲ್ ಗಳ ಉಪಯೋಗ ಗೊತ್ತಿಲ್ಲದ ಹಿರಿಯರು ಸೈಬರ್ ಕ್ರೈಮ್ ಗೆ ಬಲಿಯಾಗುತ್ತಿದ್ದಾರೆ. ಇದು ನೋವಿನ ವಿಚಾರ. ಅದರಿಂದಾಗಿ ಹಿರಿಯರ ಮಾನಸಿಕ ಸಂತುಲನ ತಪ್ಪುತ್ತಿದೆ.

ಜಿಲ್ಲೆಯಲ್ಲಿ ಅನಾಥಾಶ್ರಮಗಳು ಹೆಚ್ಚುತ್ತಿವೆ. ಮಾತ್ರವಲ್ಲದೆ ಇದ್ದ ಅನಾಥಾಶ್ರಮಗಳು ಹಿರಿಯರಿಂದ ತುಂಬುತ್ತಿದೆ. ಇದನ್ನು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಂ. ಫಾ| ಸ್ಟ್ಯಾನಿ ಬಿ. ಲೋಬೊ ಹಿರಿಯರ ದಿನದ ಸಂದೇಶ ನೀಡಿದರು.
ವೇದಿಕೆಯಲ್ಲಿ ವಂ. ಫಾ| ಝೇವಿಯರ್ ಪಿಂಟೊ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿ’ಸೋಜ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷ ರೊನಾಲ್ಡ್ ಅಲ್ಮೆಡಾ, ಹಿರಿಯರಾದ ಜೋಸೆಫ್ ಮತ್ತು ಗ್ರೇಸಿ ಕರ್ಡೋಜಾ, ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಸ್ತ್ರೀ ಸಂಘಟನೆ ಕಾರ್ಯದರ್ಶಿ ಐರಿನ್ ಪಿರೇರ, ಯುವ ಆಯೋಗ ಸಂಚಾಲಕ ರೋಯ್ಸ್ ಫೆರ್ನಾಂಡಿಸ್, ಕೆಥೋಲಿಕ್ ಸಭಾ ಮಾಜಿ ಅಧ್ಯಕ್ಷ ಲೋರೆನ್ಸ್ ಡೇಸಾ ಇದ್ದರು.

ಆರೋಗ್ಯ ಆಯೋಗದ ಸಂಚಾಲಕ ವಿಲ್ಫ್ರೆಡ್ ಕ್ರಾಸ್ಟೋ ಸ್ವಾಗತಿಸಿ, ಕಥೋಲಿಕ್ ಸಭಾ ಕಾರ್ಯದರ್ಶಿ ಟೆರೆನ್ಸ್ ಪಿರೇರಾ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!