Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಫಿಲಿಯೇಶನ್ ರದ್ದು

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಫಿಲಿಯೇಶನ್ ರದ್ದು

ಸುದ್ದಿಕಿರಣ ವರದಿ
ಗುರುವಾರ, ಜುಲೈ 14

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಫಿಲಿಯೇಶನ್ ರದ್ದು
ಉಡುಪಿ: ಕೇಂದ್ರ ಸರ್ಕಾರದ ಕ್ರೀಡಾ ನೀತಿ ಹಾಗೂ ತನ್ನ ಬೈಲಾಕ್ಕೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಕರ್ನಾಟಕ ರಾಜ್ಯದ ಸಂಯೋಜಕತ್ವ (ಅಫಿಲಿಯೇಶನ್)ವನ್ನು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ರದ್ದುಪಡಿಸಿದೆ ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಕೆಎಸ್.ಬಿಎ) ಅಧ್ಯಕ್ಷ, ಶಾಸಕ ರಘುಪತಿ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೂರಕ ವರದಿ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಫಿಲಿಯೇಶನ್ ರದ್ದುಗೊಳಿಸುವಂತೆ ಶಾಸಕ ಭಟ್, ಸೂಕ್ತ ದಾಖಲೆ ಸಹಿತ ವರದಿ ಸಿದ್ಧಪಡಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಗಮನ ಸೆಳೆದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ಕ್ರೀಡಾ ಇಲಾಖೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪೂರಕ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಪ್ ಇಂಡಿಯಾಕ್ಕೆ ಸಲ್ಲಿಸಿದ್ದರು.

ಅಲ್ಲದೆ, ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಗಳ ತಂಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ನ್ಯೂನತೆಗಳ ಬಗ್ಗೆ ಮನವರಿಕೆ ಮಾಡಿದ್ದರು. ಅದರಂತೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಕರ್ನಾಟಕ ರಾಜ್ಯದ ಅಫಿಲಿಯೇಶನ್ ರದ್ದುಪಡಿಸಿದೆ ಎಂದು ಶಾಸಕ ಭಟ್ ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್, ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಬೈಲಾ ಪಾಲಿಸುತ್ತಿರಲಿಲ್ಲ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗಸೂಚಿ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯಕಾರಿ ಸಮಿತಿಗೆ ಅಫಿಲಿಯೇಟೆಡ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇದ್ದು, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ತನ್ನ ಬೈಲಾವನ್ನು 10 ಮಂದಿ ಆಜೀವ ಸದಸ್ಯರು, 9 ಮಂದಿ ಸದಸ್ಯರು ಜಿಲ್ಲಾ ಅಸೋಸಿಯೇಶನ್ ನಿಂದ ಆಯ್ಕೆ ಮಾಡುವಂತೆ ಹಾಗೂ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ಸ್ ಆಗಿ ತಿದ್ದುಪಡಿ ಮಾಡಿ ಆಜೀವ ಸದಸ್ಯತ್ವ ನೀಡಲಾಗಿತ್ತು.

ಅಸೋಸಿಯೇಶನ್ ಸದಸ್ಯರನ್ನು ಮತದಾನ ಮಾಡುವ ಉದ್ದೇಶದಿಂದ ಮತದಾರರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗಸೂಚಿಗೆ ವಿರುದ್ಧವಾಗಿ ತಿದ್ದುಪಡಿ ಮಾಡಲಾಗಿತ್ತು ಎಂದು ಭಟ್ ತಿಳಿಸಿದ್ದಾರೆ.

ಕ್ರೀಡೆಗೆ ಹಿನ್ನಡೆ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕೇಂದ್ರ ಸಕರ್ಾರದ ಕ್ರೀಡಾಭಿವೃದ್ದಿ ಸಂಹಿತೆಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಬೈಲಾ ಪರಿಷ್ಕರಣೆ ಮಾಡಿದ್ದ ಪರಿಣಾಮ, ಜಿಲ್ಲಾ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಪ್ರೋತ್ಸಾಹ ನೀಡದ ಕಾರಣ ಜಿಲ್ಲೆಗಳ ಪ್ರಾತಿನಿಧಿತ್ವಕ್ಕೆ ಕೊರತೆ ಉಂಟಾಗಿದ್ದಲ್ಲದೆ ಬ್ಯಾಡ್ಮಿಂಟನ್ ಕ್ರೀಡೆಗೂ ಹಿನ್ನಡೆಯಾಗಿತ್ತು.

ಗ್ರಾಮೀಣ ಭಾಗದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಉಪಯೋಗವಾಗುತ್ತಿರಲಿಲ್ಲ.

ಹೋರಾಟಕ್ಕೆ ಸಂದ ಜಯ
ಬ್ಯಾಡ್ಮಿಂಟನ್ ಉದ್ದೇಶಕ್ಕೆ ರಾಜ್ಯ ಸರ್ಕಾರದಿಂದ ಲೀಸ್ ಆಧಾರದ ಮೇಲೆ ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಭೂಮಿಯನ್ನು ಕೇವಲ 100 ರೂ.ಗೆ ಗುತ್ತಿಗೆ ದರವನ್ನು ನಿಗದಿಪಡಿಸಿ 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಮೂಲ ನಿಯಮ ಉಲ್ಲಂಘಿಸಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನಡೆಯುತ್ತಿತ್ತು.

ಅದನ್ನು ತಪ್ಪಿಸಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಗಳಿಗೆ ಬ್ಯಾಡ್ಮಿಂಟನ್ ಕ್ರೀಡೆ ಉತ್ತೇಜಿಸಲು ಅನುಕೂಲವಾಗುವಂತೆ ಮಾಡಬೇಕು ಹಾಗೂ ಎಲ್ಲಾ ಜಿಲ್ಲೆಗಳ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಿಫುಲ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಶಾಸಕ ಕೆ ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಗಳು ನಡೆಸಿದ ಸಂಘಟಿತ ಹೋರಾಟಕ್ಕೆ ಜಯ ದೊರೆತಿದೆ ಎಂದು ಭಟ್ ತಿಳಿಸಿದ್ದಾರೆ.

ನೂತನ ಅಸೋಸಿಯೇಶನ್ ಅಸ್ತಿತ್ವಕ್ಕೆ
ಇದೀಗ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ್ನು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಬೈಲಾ ಪ್ರಕಾರ ರಚಿಸಲಾಗಿದ್ದು, ಅದಕ್ಕೆ ಎಲ್ಲಾ ಜಿಲ್ಲೆಗಳ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸದಸ್ಯರ ಪ್ರಾತಿನಿಧ್ಯವಿದ್ದು, ರಾಜ್ಯದ ಶೇ. 50ರಷ್ಟು ಅಫಿಲಿಯೇಶನ್ ಇದೆ. ಆದ್ದರಿಂದ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಷಿಯೇಶನ್ ಗೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯದ ಅಫೀಲಿಯೇಶನ್ ನೀಡಬೇಕು ಎಂದು ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

ಕೃತಜ್ಞತೆ
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಬೈಲಾಗಳಿಗೆ ವಿರುದ್ಧವಾಗಿದ್ದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಫಿಲಿಯೇಶನ್ ರದ್ದತಿಯಲ್ಲಿ ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!