Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಜನೌಷಧ ದಿನಾಚರಣೆ: ಪ್ರಧಾನಿ ಜೊತೆ ಸಂವಾದಕ್ಕೆ ಈರ್ವರು ಆಯ್ಕೆ

ಜನೌಷಧ ದಿನಾಚರಣೆ: ಪ್ರಧಾನಿ ಜೊತೆ ಸಂವಾದಕ್ಕೆ ಈರ್ವರು ಆಯ್ಕೆ

ಉಡುಪಿ: ಈ ತಿಂಗಳ 7ರಂದು ನಡೆಯುವ ಜನೌಷಧಿ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದಕ್ಕೆ ಉಡುಪಿ ಜಿಲ್ಲೆಯಿಂದ ಈರ್ವರು ಆಯ್ಕೆಯಾಗಿದ್ದಾರೆ.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಬಳಿಯ ಜನೌಷಧ ಕೇಂದ್ರದ ಮಾಲಕ ಸುಂದರ ಪೂಜಾರಿ ಮೂಡುಕುಕ್ಕುಡೆ ಹಾಗೂ ಯೋಜನೆ ಫಲಾನುಭವಿ ದಿವ್ಯಾಂಗ ವ್ಯಕ್ತಿ ಸುಧೀರ್ ಪೂಜಾರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ.

ಮಾ. 7ರ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದ ನೇರಪ್ರಸಾರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಬಳಿಯ ಮೈದಾನದಲ್ಲಿ ನಡೆಸಲಾಗುತ್ತದೆ. ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದ ಗೌಡ ಮತ್ತು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಭಾಗವಹಿಸುವರು ಸ್ಥಳೀಯ ಸಂಸದರು, ಶಾಸಕರೂ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಜನೌಷಧ ಬಳಕೆ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತೇಜನ ನೀಡಲು ಕಳೆದ 3 ವರ್ಷದಿಂದ ಮಾ. 7ರಂದು ಜನೌಷಧಿ ದಿನಾಚರಣೆ ಮಾಡಲಾಗುತ್ತಿದೆ. ಅಂದು ಪ್ರಧಾನಿ, ಜನೌಷಧಿ ಕೇಂದ್ರದ ಮಾಲಕರು ಮತ್ತು ಯೋಜನೆಯ ಲಾನುಭವಿಗಳೊಂದಿಗೆ ಸಂವಾದ ನಡೆಸುತ್ತಾರೆ. ಪ್ರತೀ ವರ್ಷ ದೇಶದ ಅತ್ಯುತ್ತಮ ಐದಾರು ಜನೌಷಧಿ ಕೇಂದ್ರಗಳ ಮಾಲಕರನ್ನು ಪ್ರಧಾನಿಯೊಂದಿಗೆ ಮಾತುಕತೆಗಾಗಿ ಆಯ್ಕೆ ಮಾಡಲಾಗುತ್ತಿದೆ.

ಪ್ರತಿನಿತ್ಯ 100- 120 ಮಂದಿಯಿಂದ ಖರೀದಿ
ದಕ್ಷಿಣ ಭಾರತದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪೈಕಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೇಂದ್ರ ಆಯ್ಕೆಯಾಗಿದೆ. ಬ್ರಹ್ಮಾವರ ಸಿಎಚ್.ಸಿ ಬಳಿ 2018ರ ಸೆಪ್ಟೆಂಬರ್ ನಲ್ಲಿ ಸುಂದರ ಪೂಜಾರಿ ಜನೌಷಧಿ ಕೇಂದ್ರ ತೆರೆದಿದ್ದರು. ಪ್ರಸಕ್ತ ಪ್ರತೀ ತಿಂಗಳು 4- 5 ಲಕ್ಷ ರೂ. ಮೌಲ್ಯದ ಜನೌಷಧಿ ಮಾರಾಟವಾಗುತ್ತಿದೆ. ಪ್ರತಿದಿನ ಸುಮಾರು 100- 120 ಮಂದಿ ಜನೌಷಧಿ ಖರೀದಿಸುತ್ತಿದ್ದಾರೆ. ಈ ಕೇಂದ್ರ, ಜನೌಷಧಿ ಮಾರಾಟದ ಜೊತೆಗೆ ಸಮಾಜಸೇವೆಯಲ್ಲೂ ನಿರತವಾಗಿದೆ.

ಫಲಾನುಭವಿ ದಿವ್ಯಾಂದ ಸುಧೀರ್ ಆಯ್ಕೆ
ಜನೌಷಧಿ ಯೋಜನೆಯ ಫಲಾನುಭವಿ, ಕೋಟ ಮಣೂರು ಪಡುಕರೆ ಕೋಟಿಮನೆ ನಿವಾಸಿ ದಿವ್ಯಾಂಗ ವ್ಯಕ್ತಿ ಸುಧೀರ್ ಪೂಜಾರಿ ಜೊತೆ ಕೂಡಾ ಪ್ರಧಾನಿ ಮಾತನಾಡುವರು. 29ರ ಹರೆಯದ ಸುಧೀರ್ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ವೈದ್ಯರು 7 ಬಗೆಯ ಮಾತ್ರೆ ಸೂಚಿಸಿದ್ದು, ತಿಂಗಳಿಗೆ 2,500ರಿಂದ 3,000 ರೂ. ವೆಚ್ಚವಾಗುತ್ತಿತ್ತು. ಕಳೆದ 6 ತಿಂಗಳಿಂದ ಸುಧೀರ್ ಜನೌಷಧಿ ಬಳಸುತ್ತಿದ್ದಾರೆ. ಆದರೆ, ಕೇವಲ ಎರಡು ಮಾತ್ರೆಗಳು ಮಾತ್ರ ಕೇಂದ್ರದಲ್ಲಿ ಸಿಗುತ್ತಿದ್ದು, ಅದಕ್ಕೆ ಈ ಹಿಂದೆ 1,500 ರೂ.ಗಳಾದರೆ ಈಗ 600 ರೂ. ವೆಚ್ಚವಾಗುತ್ತಿದೆ. ಉಳಿದ 5 ಮಾತ್ರೆಗಳು ಜನೌಷಧಿ ಕೇಂದ್ರದಲ್ಲಿ ಲಭ್ಯವಿಲ್ಲ!

ಡಾ. ಕಾಮತ್ ಉತ್ತಮ ಚಿಕಿತ್ಸಕ
ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ, ಡಾ. ಪದ್ಮನಾಭ ಕಾಮತ್ ಅವರಿಗೆ `ಉತ್ತಮ ಜನೌಷಧಿ ಚಿಕಿತ್ಸಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ವರ್ಷದಿಂದ ಈ ಪ್ರಶಸ್ತಿ ಆರಂಭಿಸಲಾಗಿದ್ದು, ಚೊಚ್ಚಲ ಪ್ರಶಸ್ತಿಗೆ ಡಾ. ಕಾಮತ್ ಆಯ್ಕೆಯಾಗಿದ್ದಾರೆ. ದೇಶದಲ್ಲಿ ಮೂವರು ವೈದ್ಯರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಡಾ. ಕಾಮತ್ ಜನೌಷಧಿಗೆ ಅತ್ಯುತ್ತಮ ಸಹಕಾರ ನೀಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಈಚೆಗೆ ತಮ್ಮ ತಂದೆ ನಿಧನರಾಗಿದ್ದಾಗ ಅವರ ಅಂತ್ಯಕ್ರಿಯೆ ನಡೆಸಿದ ಡಾ. ಕಾಮತ್, ನೇರ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆ ನಡೆಸಿ ಇಬ್ಬರ ಜೀವ ಉಳಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!