Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಅಯೋಧ್ಯೆ ನಿಧಿ ಸಂಗ್ರಹ ಅಭಿಯಾನ: ಶೀಘ್ರ ಚೆನ್ನೈಯಲ್ಲಿ ಉದ್ಯಮಿಗಳ ಸಮಾವೇಶ

ಅಯೋಧ್ಯೆ ನಿಧಿ ಸಂಗ್ರಹ ಅಭಿಯಾನ: ಶೀಘ್ರ ಚೆನ್ನೈಯಲ್ಲಿ ಉದ್ಯಮಿಗಳ ಸಮಾವೇಶ

ಚೆನ್ನೈ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮಮಂದಿರದಲ್ಲಿ ದೇಶದ ಸಮಸ್ತ ಜನತೆಯ ಸಹಕಾರ ಪಡೆಯುವ ಉದ್ದೇಶದಿಂದ ಜ. 15ರಿಂದ ದೇಶಾದ್ಯಂತ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ. ಈ ಉದ್ದೇಶಕ್ಕಾಗಿ ತಮಿಳುನಾಡಿನ ಉದ್ಯಮಿಗಳ ಸಮಾವೇಶವನ್ನು ಚೆನ್ನೈನಲ್ಲಿ ನಡೆಸಲಾಗುವುದು ಎಂದು ವುಡ್ ಲ್ಯಾಂಡ್ ಗ್ರೂಪ್ ಆಫ್ ಹೋಟೆಲ್ ಆಡಳಿತ ಪಾಲುದಾರ ಕಡಂದಲೆ ರಾಜೇಶ್ ರಾವ್ ತಿಳಿಸಿದ್ದಾರೆ.

ಇಲ್ಲಿನ ಮೈಲಾಪುರದಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ತಮಿಳುನಾಡಿನಲ್ಲಿ ಸ್ವರ್ಣ, ವಸ್ತ್ರ, ಹೋಟೆಲ್, ರಿಯಲ್ ಎಸ್ಟೇಟ್, ಸಾಫ್ಟ್ ವೇರ್ ಹೀಗೆ ವಿವಿಧ ಉದ್ಯಮಿಗಳ ದೊಡ್ಡ ಸಮೂಹವಿದ್ದು ಅವರೆಲ್ಲರನ್ನು ಸೇರಿಸಿಕೊಂಡು ಸಮಾವೇಶ ನಡೆಸಲಾಗುವುದು. ಅದರಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ವಿನಂತಿಸಲಾಗಿದ್ದು, ಅವರು ಸಮ್ಮತಿಸಿದ್ದಾರೆ.

ಸಮಾವೇಶದಲ್ಲಿ ಉದ್ಯಮಿಗಳು ತಮ್ಮ ದೇಣಿಗೆಯನ್ನು ಶ್ರೀಗಳ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸುವರು ಎಂದು ರಾಜೇಶ್ ರಾವ್ ತಿಳಿಸಿದರು.

ಸಂತ ಸಮಾವೇಶ
ಇದೇ ಉದ್ದೇಶಕ್ಕಾಗಿ ಚೆನ್ನೈನಲ್ಲಿ ತಮಿಳುನಾಡಿನ ನೂರಾರು ಮಂದಿ ಸಾಧು ಸಂತರು, ಮಠಾಧೀಶರು ಮತ್ತು ಧಾರ್ಮಿಕ ಮುಖಂಡರ ಸಮಾವೇಶವನ್ನೂ ಜನವರಿಯಲ್ಲಿ ಆಯೋಜಿಸಿ ಅವರೆಲ್ಲರ ಮಾರ್ಗದರ್ಶನ ಮತ್ತು ಸಹಕಾರ ಪಡೆಯಲಾಗುವುದು ಎಂದು ತಮಿಳುನಾಡಿನ ಉತ್ತರ ಪ್ರಾಂತ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ, ವಕೀಲ ಶ್ರೀನಿವಾಸನ್ ತಿಳಿಸಿದ್ದು, ಸಮಾವೇಶದಲ್ಲೂ ಪೇಜಾವರ ಶ್ರೀಗಳು ಭಾಗವಹಿಸುವಂತೆ ವಿನಂತಿಸಿದರು.

ಸಭೆಯಲ್ಲಿ ವುಡ್ ಲ್ಯಾಂಡ್ ಗ್ರೂಪ್ ಆಫ್ ಹೋಟೆಲ್ ಪಾಲುದಾರ ಕೆ. ಮುರಳಿ ರಾವ್, ತಮಿಳುನಾಡಿನ ಸಂಘಪರಿವಾರದ ಪ್ರಮುಖರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!