ಮಂಗಳೂರು: ಮಕ್ಕಳಲ್ಲಿ ಗ್ರಹಿಕಾ ಶಕ್ತಿ, ಚಿಂತನಾ ಶಕ್ತಿ ಹೀಗೆ ಬೌದ್ಧಿಕ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಸೃಜನಶೀಲ ಚಟುವಟಿಗಳಿಂದ ಮಕ್ಕಳಲ್ಲಿ ಜೀವನೋತ್ಸಾಹ ಪ್ರೇರೇಪಿಸುವ ಆಶಯದೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ತನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಂತರ್ಜಾಲ ಮೂಲಕ ಇಂದ್ರಜಾಲ (ಮ್ಯಾಜಿಕ್) ಕಲಿಕೆ ತರಬೇತಿ ಶಿಬಿರ ಆಯೋಜಿಸಲಾಯಿತು.
ಶಿಬಿರವನ್ನು ದೆಹಲಿ ಸರಕಾರದ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಉದ್ಘಾಟಿಸಿದರು.
ಮಕ್ಕಳ ಕಲಿಕಾ ವಿಧಾನಕ್ಕೆ ಮ್ಯಾಜಿಕ್ ತಂತ್ರ ಪೂರಕ. ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ ಮೂಡಿಸಲು ಇಂಥ ಚಟುವಟಿಕೆ ಆಯೋಜಿಸಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಕಾರ್ಯ ಮಾದರಿ ಎಂದರು.
4ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟ ಹದಿನಾಲ್ಕು ದಿವಸಗಳ ಈ ಮ್ಯಾಜಿಕ್ ಕಲಿಕಾ ತರಬೇತಿಯನ್ನು ಭಾರತೀಯ ಜಾದೂರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡ ಅಂತಾರಾರಾಷ್ಟ್ರೀಯ ಖ್ಯಾತಿಯ ಜಾದೂಗಾರ, ಮಂಗಳೂರಿನ ಕುದ್ರೋಳಿ ಗಣೇಶ್ ನಡೆಸಿಕೊಡುತ್ತಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ತರಬೇತಿಯ ಮೂಲೋದ್ದೇಶ ವಿವರಿಸುತ್ತಾ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ಸಂಸ್ಥೆಯ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೊರೊನಾ ಸಂಕಷ್ಟದಲ್ಲಿಯೂ ಈ ನಿರಂತರತೆ ಕಾಯ್ದುಕೊಂಡು ಬರುತ್ತಿದೆ.
ಈ ಉಚಿತ ತರಬೇತಿಯಲ್ಲಿ ಸುಮಾರು 400 ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಮುಂದೆ ಈ ಮ್ಯಾಜಿಕ್ ಕಲಿಕೆಯನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ಶೈಕ್ಷಣಿಕ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನಕ್ಕೆ ಮುಂದಾಗುವುದು ಎಂದರು.
ಶಿಬಿರದ ಸಂಪನ್ಮೂಲವ್ಯಕ್ತಿ, ಜಾದೂಗಾರ ಕುದ್ರೋಳಿ ಗಣೇಶ್, ಜಾದೂ ಒಂದು ವೈಜ್ಞಾನಿಕ ಕಲೆಯಾಗಿದ್ದು ಜಾದೂ ಕಲೆಯಲ್ಲಿ ಅಡಕವಾಗಿರುವ ವಿಜಾನ ಮತ್ತು ಕೈಚಳಕದ ತಂತ್ರಗಾರಿಕೆ ಮಕ್ಕಳ ಮನಸ್ಸನ್ನು ಚುರುಕುಗೊಳಿಸಿ ಅವರಲ್ಲಿರುವ ಬುದ್ದಿಮತ್ತೆ ಅರಳಿಸುತ್ತದೆ. ಜಾದೂ ಕಲಿತ ಮಕ್ಕಳು ವೇದಿಕೆಯನ್ನೇರಿ ಜನರನ್ನು ಎದುರಿಸುವ ಆತ್ಮವಿಶ್ವಾಸ, ಪರಿಣಾಮಕಾರಿ ಮಾತನಾಡುವ ಕಲೆ ಮುಂತಾದ ಸಾಮರ್ತ್ಯ ಪಡೆದುಕೊಳ್ಳುತ್ತಾರೆ ಎಂದರು.
ಜಾದೂ ಕಲಿಕಾ ಶಿಬಿರದಲ್ಲಿ ವಿಜಾನ ಮತ್ತು ಗಣಿತ ಆಧರಿತ ಹಲವು ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುವುದು ಎಂದರು.
ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು, ದೆಹಲಿ ಕನ್ನಡ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ದೆಹಲಿ ಕನ್ನಡಿಗರು ಪಾಲ್ಗೊಂಡಿದ್ದರು.
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ. ಎಂ. ಎಸ್. ಶಶಿಕುಮಾರ್ ಸ್ವಾಗತಿಸಿದರು. ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲಾ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ವಂದಿಸಿದರು. ಶಿಕ್ಷಕಿ ಬಿದಿಶಾ ನಿರೂಪಿಸಿದರು.
ಬಳಿಕ ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ವರ್ಚ್ಯುವಲ್ ಮ್ಯಾಜಿಕ್ ಆನ್ ಲೈನ್ ಜಾದೂ ಮೂಲಕ ಜನರನ್ನು ಬೆರಗುಗೊಳಿಸಿದರು