ಅಧಿಕಾರಿಗಳೊಂದಿಗೆ ಪ್ರೀತಿಯಿಂದ ಇರತ್ತೇವೆ ಅದನ್ನು ದುರುಪಯೋಗವಾದರೆ ಪರಿಣಾಮ ಸರಿ ಇರಲ್ಲ : ಕೊತ್ತೂರು ಮಂಜುನಾಥ್

ಅಧಿಕಾರಿಗಳೊಂದಿಗೆ ಪ್ರೀತಿಯಿಂದ ಇರತ್ತೇವೆ ಅದನ್ನು ದುರುಪಯೋಗವಾದರೆ ಪರಿಣಾಮ ಸರಿ ಇರಲ್ಲ : ಕೊತ್ತೂರು ಮಂಜುನಾಥ್

ಕೋಲಾರ : ಅಧಿಕಾರಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತೇನೆ ಅಣ್ಣತಮ್ಮಂದಿರ ರೀತಿ  ನೋಡಿಕೊಳ್ಳುತ್ತೇನೆ ಅದನ್ನು ದುರುಪಯೋಗ ಪಡಿಸಿಕೊಂಡು ಗಾಂಚಾಳಿ ತೋರಿದರೆ ಏನು ಮಾಡಬೇಕೆಂಬುದು ನನಗೆ ಗೊತ್ತಿದೆ ಈ ಅಧಿಕಾರಿ ಇಲ್ಲದಿದ್ದರೆ ಮತ್ತೊಬ್ಬ

ಅಧಿಕಾರಿ ನಿಯೋಜಿಸಲಾಗುವುದು 10 ಜನ ಹೋದರೆ ಹನ್ನೊಂದನೆಯವರು ಬರುತ್ತಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಎಚ್ಚರಿಕೆ ನೀಡಿದರು. 

ತಾಲ್ಲೂಕಿನ ನರಸಾಪುರದಲ್ಲಿ ಗ್ರಾಮದಲ್ಲಿ ಬುಧವಾರ  12.40 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಅಧಿಕಾರಿಗಳ ಜೊತೆ ಪರ್ಸೆಂಟೇಜ್‌ ವ್ಯವಹಾರ ಮಾಡುವವರು ನಾವಲ್ಲ. ತಾಳ್ಮೆಯಿಂದ ಇರುತ್ತೇನೆ. ತಾಳ್ಮೆ ಕಳೆದುಕೊಂಡರೆ ಸುಮ್ಮನಿರುವುದಿಲ್ಲ ನ್ಯಾಯಯುತವಾಗಿ ಜನರಿಗೆ, ರೈತರಿಗೆ ಕೆಲಸ  ಮಾಡಿಕೊಡಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಬೆಳಿಗ್ಗೆ ಎದ್ದ ಕ್ಷಣದಿಂದಲೇ ಜನರೊಂದಿಗೆ ಸಂಪರ್ಕದಲ್ಲಿರುತ್ತೇವೆ. ರಾಜಕಾರಣಿ 24 ಗಂಟೆಯೂ ಕೆಲಸ ಮಾಡಬೇಕು. ಅಧಿಕಾರಿಯೊಬ್ಬರು ನನಗೆ ಬೆಳಿಗ್ಗೆ 4 ಗಂಟೆಗೆ ಕರೆ ಮಾಡಿದ್ದರು. ಅಧಿಕಾರಿಗಳು ಯಾರು 24 ಗಂಟೆ ಕೆಲಸ ಮಾಡಲ್ಲ. ಸಂಜೆ 5 ಗಂಟೆ ಆಗುತ್ತಿದ್ದಂತೆ ಹೊರಟು ಮನೆಗೆ ಹೋಗಿ ಮಜಾ ಮಾಡಿಕೊಂಡು ಇರುತ್ತೀರಿ. ಆದರೆ, ನಮಗೆ ಬೆಳಿಗ್ಗೆ 6ಗಂಟೆಗೆ ಜನರು, ಮುಖಂಡರು ಬಂದು ಬಾಗಿಲು ತಟ್ಟುತ್ತಾರೆ ಎಂದು ನುಡಿದರು. 

ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಗಡುವು ನೀಡಲಾಗಿದೆ. ಒಂದು ತಿಂಗಳು ವ್ಯತ್ಯಾಸವಾಗಬಹುದು. ಅಷ್ಟರಲ್ಲಿ ಮುಗಿಸಬೇಕು. ಮುಂದಿನ ಜನವರಿಗೆ ಉದ್ಘಾಟನೆ ಮಾಡಬೇಕು ಎಂದು ಹೇಳಿದರು.

ಕಳೆದ ಬಾರಿಯ ಕೆ.ಶ್ರೀನಿವಾಸಗೌಡ ಶಾಸಕರಾಗಿದ್ದ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಜಾಗ ಸಾಕಾಗದೆ ಗೊಂದಲ ಉಂಟಾಗಿತ್ತು. ಪಕ್ಕದಲ್ಲಿ ಕೆರೆ, ಕುಂಟೆ ಇದೆ. ಭವಿಷ್ಯದಲ್ಲಿ ಕೆರೆಯಲ್ಲಿ ಸೋರಿಕೆಯಾದರೆ ಸಮಸ್ಯೆ ಆಗಬಹುದೆಂದು ಸ್ಥಳಾಂತರಿಸಲಾಗಿದೆ ತುರ್ತು ಕೇರ್‌ ಸೆಂಟರ್ ಕೂಡ ಮಾಡಬೇಕೆಂದು ಕೋರಿದ್ದಾರೆ. ನರಸಾಪುರ ಜನರಿಗಾಗಿ ಮಾಡಲು ಅವರು ಕೇಳಿದ್ದಾರೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಜೊತೆ ಮಾತನಾಡಿ ಆ ಸೌಲಭ್ಯ ಕಲ್ಪಿಸಲಾಗುವುದು. ಕಟ್ಟಡ ಸುತ್ತ ಕಾಂಪೌಂಡ್‌ ನಿರ್ಮಿಸಲು ಎಂಜಿನಿಯರ್‌ಗಳು ಕ್ರಮ ವಹಿಸಬೇಕು. ಅದಕ್ಕೆ ಬೇಕಾದ ಅನುದಾನ ಕೊಡುತ್ತೇನೆ. ಸುತ್ತಲೂ ಕಾಲುವೆ ನಿರ್ಮಿಸಿ ಮಳೆ ನೀರನ್ನು ಕೆರೆಗೆ ಸಾಗಿಸಲು ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ನರಸಾಪುರ ಬೆಳೆಯುತ್ತಿದ್ದು, ಬೆಂಗಳೂರಿಗೆ ಸನಿಹದಲ್ಲಿದೆ. ಕೈಗಾರಿಕೆಗಳು ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆಯನ್ನೇ ನಿರ್ಮಿಸಬೇಕಿದೆ. ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ನಿರ್ಮಾಣವಾಗಲಿದೆ. ಉದ್ಯೋಗಗಳೂ ಸಿಗಲಿವೆ. ಹಳ್ಳಿಯ ಜನರಿಗೆ, ಕಾರ್ಮಿಕರಿಗೆ ಚಿಕಿತ್ಸೆಯೂ ಸಿಗಲಿದೆ’ ಎಂದು ತಿಳಿಸಿದರು.

ನರಸಾಪುರ ರಸ್ತೆ ವಿಸ್ತರಿಸಲು ಪಾದಚಾರಿ ಮಾರ್ಗದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ದ್ವಿಪಥ ರಸ್ತೆ ಮಾಡಲಾಗುವುದು. ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಪೊಲೀಸ್‌ ಠಾಣೆ ಸ್ಥಾಪಿಸುವಂತೆ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪ್ರಸ್ತಾವ ನೀಡಲಾಗಿದೆ. ಈ ಮೊದಲು ತಿರಸ್ಕೃತಗೊಂಡಿತ್ತು. ಈಗ ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಮೂಲಕ ಹೊಸದಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣವೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಅಧ್ಯತೆ ನೀಡಲಾಗುತ್ತಿದೆ  ನರಸಾಪುರ ಹೋಬಳಿಯ ಕೇಂದ್ರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಿಲ್ಲೆಗೆ ಮಾದರಿಯಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ ನರೇಗಾ ಯೋಜನೆಯಡಿಯಲ್ಲಿ ಆಸ್ಪತ್ರೆಯ ಕಾಂಪೌಂಡ್ ನಿರ್ಮಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ ನರಸಾಪುರ  ಹೋಬಳಿಯು ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿದೆ ಸುಮಾರು 45 ಸಾವಿರ ಜನಸಂಖ್ಯೆಯು ವಾಸಿಸುತ್ತಿದ್ದು ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವೈದ್ಯರು, 30 ಹಾಸಿಗೆಗಳನ್ನು ಒಳಗೊಂಡಿದೆ ಮುಂದೆ ಗ್ರಾಮ ಕೇರ್ ಸೆಂಟರ್ ಸಹ ಪ್ರಾರಂಭಿಸುವಂತೆ ಕ್ರಮ ವಹಿಸಲು ಮನವಿ ಮಾಡಿದರು

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ, ಇಂಜಿನಿಯರ್ ವಿಶ್ವನಾಥ್, ಮುಖಂಡರಾದ ನಾಗನಾಳ ಸೋಮಣ್ಣ, ಖಾಜಿಕಲ್ಲಹಳ್ಳಿ ಮುನಿರಾಜು, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಸಿಎಂಎಂ ಮಂಜುನಾಥ್, ಬೆಳ್ಳೂರು ವೆಂಕಟಸ್ವಾಮಿ, ಕೃಷ್ಣಪ್ಪ, ಜನಪನಹಳ್ಳಿ ನವೀನ್, ಶಿವಕುಮಾರ್, ನಾರಾಯಣಪ್ಪ, ಕುಮಾರ್ ಎಂಟಿಬಿ ಶ್ರೀನಿವಾಸ್, ಪರ್ಜೇನಹಳ್ಳಿ ನಾಗೇಶ್,ಮುಂತಾದವರು ಇದ್ದರು.