ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಲೇಖನ

ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಲೇಖನ

ಜನವರಿ 26 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಲೇಖನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.

ರಾಯಣ್ಣನ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ ಮೇಲೆ ನೆಲೆಸಿರುವ ಹಳ್ಳಿ. ಬರಮಪ್ಪ ಮತ್ತು ಕೆಂಚವ್ವ ದಂಪತಿಗಳ ಕಿರಿಯ ಮಗನಾಗಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15, 1798 ರಂದು. ತಂದೆ ಬರಮಪ್ಪ ಊರು ಮಂದಿಗೆ ಕಾಡುತ್ತಿದ್ದ ಹುಲಿಯೊಂದನ್ನು ಕತ್ತಿಯಿಂದ ಇರಿದು ಕಿತ್ತೂರಿನ ರಾಜ ಮಲ್ಲಸರ್ಜನ ಪ್ರೀತಿಗೆ ಪಾತ್ರರಾಗಿದ್ದರು. ಇದರಿಂದ ರಾಯಣ್ಣನ ಮನೆತನ ಕಿತ್ತೂರು ಸಂಸ್ಥಾನದಲ್ಲಿ ಹೆಸರುವಾಸಿಯಾಗಿತ್ತು.

ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರು ಪಡೆದಿತ್ತು. ನೆರೆಯ ಎಲ್ಲ ಹಳ್ಳಿಗಳ ಯುವಕರು ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ, ಕವಣೆ ಎಸೆತ ಮತ್ತು ದೊಣ್ಣೆ ವರಸೆಗಳನ್ನು ಕಲಿಯುತ್ತಿದ್ದರು. ಚಿಕ್ಕಂದಿನಿಂದಲೂ ರಾಯಣ್ಣ ಇದೇ ಗರಡಿಯಲ್ಲಿ ತನ್ನ ಹೊತ್ತು ಕಳೆದು ಪಳಗಿದ್ದ. ಎಲ್ಲ ಕಲೆಗಳನ್ನು ಚೆನ್ನಾಗಿ ರೂಡಿಸಿಕೊಂಡಿದ್ದ ರಾಯಣ್ಣ, ವೇಗವಾಗಿ ಓಡುವುದರಲ್ಲಂತೂ ಎತ್ತಿದಕೈ.

ಕಿತ್ತೂರು ಮೊದಲಿಂದಲೂ ಸಂಪತ್ತಿನಿಂದ ಕೂಡಿದ ಸಿರಿವಂತ ಸಂಸ್ಥಾನವಾಗಿತ್ತು. ಇಲ್ಲಿನ ಜನ ನೆಮ್ಮದಿಯ ಬದುಕು ನಡೆಸಿಕೊಂಡು ಹೋಗುತ್ತಿದ್ದರು. ಸಿರಿವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಕಿತ್ತೂರಿನ ಮೇಲೆ ಬ್ರಿಟಿಷರ ಕೆಂಗಣ್ಣು ಬಿದ್ದಿತ್ತು. ಸಂಸ್ಥಾನದ ದೊರೆ ಮಲ್ಲಸರ್ಜನ ಸಾವಿನ ನಂತರ ಮಕ್ಕಳಿಲ್ಲದೆ ರಾಣಿ ಚೆನ್ನಮ್ಮ ಕಿತ್ತೂರನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಳು. ಇದೇ ಸಮಯದಲ್ಲಿ ಆಂಗ್ಲರು ಕಿತ್ತೂರನ್ನು ಕಬಳಿಸುವ ಹುನ್ನಾರ ಮಾಡಿದರು. ತನ್ನ ನಾಡ ಮೇಲಿದ್ದ ಪ್ರೀತಿಯಿಂದ ರಾಯಣ್ಣ ಕಿತ್ತೂರಿನತ್ತ ಪ್ರಯಾಣ ಬೆಳೆಸಿ, ತನ್ನ ಕೌಶಲ್ಯದಿಂದ ರಾಣಿ ಚೆನ್ನಮ್ಮಳ ಮೆಚ್ಚುಗೆ ಗಳಿಸಿ, ರಾಣಿಯ ಕಾವಲು ಪಡೆಯ ನೇತೃತ್ವವನ್ನು ಪಡೆದ.

ಬಡಬಗ್ಗರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಆಂಗ್ಲ ದೊರೆಗಳ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಕಿತ್ತುಕೊಳ್ಳಲಾಗಿತ್ತು. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸಂಗೊಳ್ಳಿ ರಾಯಣ್ಣ ತನ್ನದೇ ಒಂದು ಸಮರ್ಥ ತಂಡವನ್ನು ಕಟ್ಟಿದ. ಆಂಗ್ಲರ ದಬ್ಬಾಳಿಕೆಯ ವಿರುದ್ಧ, ಆಂಗ್ಲರ ಜೊತೆ ಕೈಜೋಡಿಸಿದ್ದ ಭೂಮಾಲಿಕರ ವಿರುದ್ಧ ತಿರುಗಿನಿಂತ. ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡ, ಸುಟ್ಟುಹಾಕಿದ. ಅಲ್ಲದೆ, ಅವರಿಂದ ಕಿತ್ತುಕೊಂಡ ಹಣವನ್ನೂ ಬಡಬಗ್ಗರಲ್ಲಿ ಹಂಚಿದ.

ಕಪ್ಪ ಸಿಗದೇ ಸಿಟ್ಟುಗೊಂಡಿದ್ದ ಬ್ರಿಟಿಷರು ಅಕ್ಟೋಬರ್ 21, 1824 ರಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ಅಂಜದ ಹೆಣ್ಣು ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ದೊಡ್ಡ ಕಾಳಗವೇ ನಡೆದು ಹೋಯಿತು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನಿಕರು ಮುನ್ನುಗ್ಗಿದ್ದರು. ಈ ನಡುವೆ ಬಾಳಪ್ಪನ ಕೋವಿಯಿಂದ ಹಾರಿದ ಗುಂಡು ಬ್ರಿಟಿಷ ಕಲೆಕ್ಟರ್ ತ್ಯಾಕರೆಯ ರುಂಡ ಉರುಳಿಸಿತು. ಸೈನಿಕನೊಬ್ಬ ಇದನ್ನು ತನ್ನ ಕತ್ತಿಗೆ ಸಿಕ್ಕಿಸಿ ಗೆಲುವಿನ ಚಿಹ್ನೆಯಂತೆ ಮೇಲೆತ್ತಿ ಹಿಡಿದ. ಹೆದರಿದ ಆಂಗ್ಲರ ಪಡೆ ಹಿಮ್ಮೆಟ್ಟಿತ್ತು. ರಾಯಣ್ಣ ಈ ಕಾಳಗದಲ್ಲಿ ತನ್ನ ಪರಾಕ್ರಮ ಮೆರೆದಿದ್ದ.

ರಾಣಿ ಚೆನ್ನಮ್ಮನನ್ನು ಹಿಡಿತದಲ್ಲಿಡದಿದ್ದರೆ ಬೇರೆ ಸಂಸ್ಥಾನದ ದೊರೆಗಳು ತಮ್ಮ ವಿರುದ್ದ ಬಂಡೆದ್ದು ನಿಲ್ಲಬಹುದು ಎಂಬ ಅಳುಕು ಆಂಗ್ಲರಿಗಿತ್ತು. ತಮ್ಮ ಸೇನೆಯನ್ನು ಒಗ್ಗೂಡಿಸಿ ಕಿತ್ತೂರಿನ ಮೇಲೆ ಮತ್ತೆ ಮುಗಿಬಿದ್ದ ಆಂಗ್ಲರು ಈ ಬಾರಿ ಗೆಲವು ಕಂಡರು. ಕಿತ್ತೂರು ಚೆನ್ನಮ್ಮ ಆಂಗ್ಲರ ಸೆರೆಯಾದಳು. ರಾಯಣ್ಣ, ಚೆನ್ನಬಸವಣ್ಣನವರನ್ನು ಕೆಲಹೊತ್ತು ಸೆರೆಮನೆಯಲ್ಲಿಟ್ಟು ನಂತರ ಬಿಡುಗಡೆಗೊಳಿಸಿದರು. ಆದರೆ ರಾಣಿ ಮಾತ್ರ ಸೆರೆಮನೆಯಲ್ಲೇ ಕೊನೆಯುಸಿರೆಳದಳು.

ಈ ನಡುವೆ ರಾಯಣ್ಣ ಹೆಸರುವಾಸಿಯಾಗುವುದನ್ನು ಕಂಡು, ರಾಯಣ್ಣನನ್ನು ಮೆಟ್ಟಿನಿಲ್ಲಬೇಕೆಂದು ನಿರ್ಧರಿಸಿದ ಆಂಗ್ಲ ಅಧಿಕಾರಿಗಳು ಸಂಚುಹೂಡಿ, ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇದಕ್ಕಾಗಿ ಅವರು ಬಳಸಿಕೊಂಡಿದ್ದ ರಾಯಣ್ಣನ ಸಂಬಂಧಿ ಲಕ್ಷ್ಮಣನನ್ನು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಆಂಗ್ಲ ಸೈನಿಕರು ಆಕ್ರಮಣ ಮಾಡಿದಾಗ ರಾಯಣ್ಣ ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ ರಾಯಣ್ಣ ಆಂಗ್ಲರ ಕೈವಶವಾಗಬೇಕಾಯಿತು.

ಕೊನೆಗೆ 1831ರ ಜನವರಿ 26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನನ್ನು ಆಲದ ಮರಕ್ಕೆ ನೇಣಿಗೇರಿಸಿದರು. ಗಲ್ಲಿಗೇರಿಸುವ ಮುನ್ನ ಆಂಗ್ಲ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, “ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು” ಎಂದು ಸಿಂಹದಂತೆ ಗರ್ಜಿಸಿದ್ದ ಆ ವೀರ !

ಇಂತಿ,
ತಮ್ಮ ವಿಶ್ವಾಸಿ,
ಶ್ರೀ. ಮೋಹನ್ ಗೌಡ,
ರಾಜ್ಯ ವಕ್ತಾರರು, 
ಹಿಂದೂ ಜನಜಾಗೃತಿ ಸಮಿತಿ