ಅಭಿಮನ್ಯು ಆನೆಯನ್ನ ದಸರಾ ಗೆ ಕರೆತರಲು ಕನ್ನಡಪರ ಸಂಘಟನೆಗಳ ಮನವಿ
ಮೈಸೂರು: ಅಭಿಮನ್ಯು ಆನೆ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿ ಆನೆಗಳಲ್ಲಿ ಒಂದಾಗಿದ್ದು,ಅದನ್ನು ಈ ಬಾರಿಯ ದಸರಾಗೆ ಕರೆತರುವಂತೆ ಮನವಿ ಮಾಡಲಾಗಿದೆ.
ಅಭಿಮನ್ಯು ಆನೆಯನ್ನು ದಸರಾ ಗೆ ಕರೆತರುವಂತೆ ಇಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳು ಮೈಸೂರು ವನ್ಯಜೀವಿ ವಿಭಾಗ ಡಾ. ಪ್ರಭು ಗೌಡ ಅವರಿಗೆ ಇಂದು ಮೈಸೂರಿನ ಅರಣ್ಯ ಭವನಕ್ಕೆ ತೆರಳಿ ಕನ್ನಡ ಕ್ರಾಂತಿದಳ ಮತ್ತು ವಿವಿಧ ಕನ್ನಡಪರ ಸಂಘಟನೆಗಳಿಂದ ಮನವಿ ಪತ್ರ ಸಲ್ಲಿಸಲಾಯಿತು.
2020 ರಿಂದ 2025 ರವರೆಗೆ ಸತತವಾಗಿ ಆರು ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಹೆಗ್ಗಳಿಕೆ ಈ ಗಜರಾಜನಿಗೆ ಸಲ್ಲುತ್ತದೆ.
ಆದರೆ, ಸರ್ಕಾರಿ ನಿಯಮಾವಳಿಗಳ ಪ್ರಕಾರ ಆನೆಗೆ 60 ವರ್ಷ ತುಂಬಿರುವುದರಿಂದ ದೈಹಿಕ ಶ್ರಮದ ಕೆಲಸಗಳಿಂದ ಮುಕ್ತಿ ನೀಡುವ ಸಲುವಾಗಿ, ಪ್ರಸಕ್ತ 2026ರ ಮೈಸೂರು ದಸರಾ ಜಂಬೂ ಸವಾರಿಯ ಕರ್ತವ್ಯದಿಂದ ಅಭಿಮನ್ಯುವನ್ನು ಅಧಿಕೃತವಾಗಿ ನಿವೃತ್ತಿಗೊಳಿಸಿರುವುದು ಬೇಸರ ತಂದಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಜನತೆಯ ಅಚ್ಚು ಮೆಚ್ಚಿನ ಆನೆ ಯಾಗಿದ್ದ ಅಭಿಮನ್ಯು ವನ್ನು ಈಬಾರಿಯ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಕರೆತರುವಂತೆ ಒತ್ತಾಯಿಸಿ ಅರಣ್ಯಾಧಿಕಾರಿಗಳಿಗೆ ತೇಜಸ್ವಿ ನಾಗಲಿಂಗ ಸ್ವಾಮಿ ನೇತೃತ್ವದ ತಂಡ ಮನವಿ ಸಲ್ಲಿಸಿದೆ.