ಗೋವುಗಳು ವಿಶ್ವದ ಆಧಾರ-ಮೊಹಮ್ಮದ್ ಫೈಝ್ಖಾನ್
ಗೋವುಗಳು ವಿಶ್ವದ ಆಧಾರ-ಮೊಹಮ್ಮದ್ ಫೈಝ್ಖಾನ್

ಮನುಷ್ಯ ಶರೀರ ಶುದ್ಧಿ ಹಾಗೂ ಭಗವಂತನ ಪ್ರಾಣ ಪ್ರತಿಷ್ಠೆ ಹೀಗೆ ಎಲ್ಲ ಶುಭ ಕಾರ್ಯಗಳಿಗೂ ಗೋವಿನ ಪಂಚದ್ರವ್ಯ ಅತೀ ಆವಶ್ಯಕ. ಆದ್ದರಿಂದಲೇ ಗೋವು ವಿಶ್ವದ ಆಧಾರ ಎಂದು ಹೊಸದಿಲ್ಲಿಯ ಗೋ ಚಳುವಳಿಕಾರ ಮೊಹಮ್ಮದ್ ಫೈಝ್ಖಾನ್ ಹೇಳಿದರು. ಪುತ್ತಿಗೆ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ಮಂಗಳವಾರ ನಡೆದ “ಹಮೇಶಾ ದೇಶ್ ಕ ಅಸ್ತಿತ್ವ ಗಾಯ್ ಮೇ ಹೀ ಹೋತಾ ಹೈ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು. ಗೃಹಪ್ರವೇಶ, ಮದುವೆ, ನಾಮಕರಣ ಹಾಗೂ ಅಂತ್ಯಸಂಸ್ಕಾರ ಹೀಗೆ ಎಲ್ಲ ಕಾರ್ಯಗಳಿಗೂ ಗೋವಿನ ಪಂಚದ್ರವ್ಯ ಅತ್ಯಾವಶ್ಯಕ. ಭಗವಂತನ ರೂಪ ಭಿನ್ನವಾದರೂ ಶಕ್ತಿ ಒಂದೇ. ಎಲ್ಲ ದೇವರಲ್ಲೂ ಗೋವು ಇದೆ. ಹಿಂದೂಗಳು ಮಾತ್ರವಲ್ಲದೆ ಕ್ರಿಶ್ಚಿಯನ್, ಮುಸ್ಲಿಮರಿಗೂ ಗೋವು ಪವಿತ್ರ ಎಂದರು.
ಮುಸ್ಲಿಮರು ಖುಷಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಭವ್ಯ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ದೇಶದ ಮುಸ್ಲಿಮರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮುಸ್ಲಿಂ ಮಂಚ್ ನಡೆಸಿದ ಸರ್ವೇಯಲ್ಲಿ ಶೇ. 74 ಮುಸ್ಲಿಮರು ರಾಮಮಂದಿರ ನಿರ್ಮಾಣದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಮಜನ್ಮ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ಆಗುವಂತೆ ಶ್ರೀಕೃಷ್ಣ ಜನ್ಮಸ್ಥಳದಲ್ಲಿ ಕೃಷ್ಣನ ಮಂದಿರ ಆಗಬೇಕು. ಕಾಶೀ ವಿಶ್ವನಾಥ ಕ್ಷೇತ್ರವು ಸಂಪೂರ್ಣ ಹಿಂದುಗಳಿಗೆ ಸೇರಬೇಕು. ರಾಮ ಜನ್ಮಭೂಮಿ ಹೋರಾಟ ಮತ್ತು ಅನಂತರ ಪ್ರಕ್ರಿಯೆಗಳಲ್ಲಿ ಮುಸ್ಲಿಮರೂ ಪಾಲ್ಗೊಂಡಿದ್ದಾರೆ ಎಂದರು. ರಾಮ ಮಂದಿರ ಜಾಗದಲ್ಲಿ ಶಾಲೆ, ಆಸ್ಪತ್ರೆ ಅಥವಾ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬ ವಾದ ಸರಿಯಲ್ಲ. ವಿಶ್ವಶಾಂತಿಗಾಗಿ ಯಾವ ಯಾವ ನೆಲದಲ್ಲಿ ಏನೇನು ಮಾಡಬೇಕು ಅದನ್ನೇ ನಿರ್ಮಿಸಬೇಕು. ಕ್ರಿಕೆಟ್ ಮೈದಾನದಲ್ಲಿ ದೇವಸ್ಥಾನ ಅಥವಾ ಶಾಲೆ ನಿರ್ಮಾಣ ಸಾಧ್ಯವೇ ಎಂದವರು ಪ್ರಶ್ನಿಸಿದರು.
ಗೋಮಾಂಸ ಸೇವನೆ ನಮ್ಮ ಸಂಸ್ಕೃತಿಯಲ್ಲ:
ಗೋವುಗಳ ರಕ್ಷಣೆಯಿಂದ ಸಮಾಜ ಮತ್ತು ದೇಶ ರಕ್ಷಣೆ ಸಾಧ್ಯವಿದೆ. ಹೀಗಾಗಿ ಪ್ರತೀ ಮನೆಗಳಲ್ಲೂ ಗೋವುಗಳ ಪಾಲನೆ ಆಗಬೇಕು. ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಇತ್ಯಾದಿ ಬಳಕೆಯೂ ಹೆಚ್ಚಬೇಕು. ಗೋಮಾಂಸ ತಿನ್ನುವುದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು ಬೆಂಗಳೂರಿನ ಅಭಿಜ್ಞಾ ರಾವ್ ಮತ್ತು ಬಳಗದಿಂದ ಭಕ್ತಿ ಸಂಗೀತ, ಉಪನ್ಯಾಸದ ಅನಂತರ ಉಳಿಯಾರು ಶ್ರೀಲಲಿತಾ ಅವರಿಂದ ಹರಿಕಥೆ, ಮೇಘನಾ ಮತ್ತು ಬಳಗದಿಂದ ಸ್ಯಾಕೊÕàಫೋನ್ ವಾದನ ನಡೆಯಿತು. ಉದಾತ್ತ ಚಿಂತನೆ ಆವಶ್ಯಕಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಫೈಝ್ಖಾನ್ ಅವರಿಗೆ ಶುಭ ಹಾರೈಸಿ, ನಿಮ್ಮಂತಹ ಜಿಜ್ಞಾಸುಗಳು ಸಮಾಜದಲ್ಲಿ ಹೆಚ್ಚಾಗಬೇಕು. ಕೇವಲ ಒಂದು ವರ್ಗವನ್ನು ಟೀಕೆ ಮಾಡುವುದರಿಂದ ಯಾವುದೇ ಸಾಧನೆಯಾಗದು. ಉದಾತ್ತ ಚಿಂತನೆಗಳು ಇದ್ದಾಗ ಮಾತ್ರ ದೇಶ, ಸಮಾಜದ ರಕ್ಷಣೆ ಸಾಧ್ಯ ಎಂದು ಆಶೀರ್ವಚನ ನೀಡಿ, ಮೊಹಮ್ಮದ್ ಫೈಝ್ಖಾನ್ ಅವರನ್ನು ಅನುಗ್ರಹಿಸಿದರು.