ಪರಿಸರ ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ_ ಭೇರ್ಯ ರಾಮಕುಮಾರ್ ಎಚ್ಚರಿಕೆ
ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಎಂದಿಗೂ ನಮ್ಮನ್ನು ಕ್ಷಮಿಸದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಕಿವಿಮಾತು ನುಡಿದರು.
ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್ ಸಂಸ್ಥೆಯು ಪರಿಸರದ ದಿನದ ಅಂಗವಾಗಿ ತಮಗೆ ನೀಡಿದ ರಾಜ್ಯ ಸುವರ್ಣ ಪರಿಸರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರತಿಕ್ಷಣವೂ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಅವನ ದುಷ್ಟ ಮನಸ್ಸಿಗೆ ಬೆಟ್ಟಗುಡ್ಡಗಳು, ಹರಿಯುವ ಹೊಳೆ, ಮುಗ್ಧ ಪ್ರಾಣಿಗಳು ಎಲ್ಲವೂ ಬಲಿಯಾಗುತ್ತಿವೆ. ಬಹುತೇಕ ರೋಗರುಜಿನಗಳಿಗೆ ಪರಿಸರ ನಾಶವೇ ಕಾರಣವಾಗಿದೆ. ಪರಿಸರ ನಾಶ ಹೀಗೇ ಮುಂದುವರೆದರೆ ಮಾನವ ಜನಾಂಗ ಭೀಕರ ರೋಗ ರುಜಿನಗಳಿಗೆ ತುತ್ತಾಗಲಿದೆ ಎಂದವರು ಎಚ್ಚರಿಕೆ ನೀಡಿದರು.
ಈಗಲಾದರೂ ಎಲ್ಲರೂ ಎಚ್ಚೆತ್ತುಗೊಳ್ಳಬೇಕು.ಪ್ರತಿಯೊಬ್ಬರೂ ತಮ್ಮ ಜನ್ಮ ದಿನದಂದು,ತಮ್ಮ ತಂದೆ ತಾಯಿಗಳ ಜನ್ಮದಿನದಂದು,ವಿವಾಹ ವಾರ್ಷಿಕೋತ್ಸವ ದಿನದಂದು, ತಮ್ಮ ಕುಟುಂಬದ ಹಿರಿಯರ ನೆನಪಿನಲ್ಲಿ ಪ್ರತಿವರ್ಷವೂ ಒಂದೊಂದು ಸಸಿ ನೆಡಬೇಕು. ಆ ಮೂಲಕ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ಹಾಗೂ ಆರೋಗ್ಯ ನೀಡಬೇಕು ಎಂದವರು ಕರೆ ನೀಡಿದರು.
ಸಾವಯವ ಕೃಷಿ ತಜ್ಞರಾದ ಯೋಗ ಪ್ರಕಾಶ್ ಅವರು ಪರಿಸರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಪ್ರತಿಷ್ಟಿತ ಕಾಲೇಜೊಂದರಲ್ಲಿ ಅಧ್ಯಾಪಕರಾಗಿದ್ದ ತಾವು ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಚಲನಚಿತ್ರವನ್ನು ನೋಡಿ ಕೃಷಿ ಜೀವನವನ್ನು ಆರಂಭಿಸಿದ ಬಗ್ಗೆ ವಿವರಿಸಿದರು. ಯೋಗ ಹಾಗೂ ಪರಿಸರ ಸಂರಕ್ಷಣೆ ನಾಗರೀಕತೆಯ ಎರಡುಕಣ್ಣುಗಳು ಎಂದವರು ಕರೆ ನೀಡಿದರು.
ಸುವರ್ಣ ಬೆಳಕು ಸಂಸ್ಥೆಯ ಮುಖ್ಯಸ್ಥರಾದ ಮಹೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಂದರ ಹಸಿರು ಪರಿಸರದ ನಡೆದ ಈ ಪರಿಸರ ದಿನಾಚರಣೆ ಕಾರ್ಯಕ್ರಮ ಪರಿಸರ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು.