ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ ೭೫ ರ ಸಂಭ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ ೭೫ ರ ಸಂಭ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಗೆ ೭೫ ರ ಸಂಭ್ರಮ

ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ೭೫ ರ ಹರೆಯವನ್ನು ತಲುಪುವುದು ಯಾರಿಗಾದರೂ ಅತ್ಯಂತ ಸಂಭ್ರಮದ ಸಂಗತಿ. ಅದರಲ್ಲೂ ಹಲವಾರು ವಿಧದಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜೀವನದಲ್ಲಿ ತುಂಬು  ಸಾರ್ಥಕ್ಯವನ್ನು ಹೊಂದಿದ ವ್ಯಕ್ತಿಗೆ ೭೫ ರ ಮೈಲಿಗಲ್ಲನ್ನು ತಲುಪುವುದು ಅತ್ಯಂತ ವಿಶೇಷವೇ ಸರಿ. ಓರ್ವ ಮಾದರಿ ಶಿಕ್ಷಕನಾಗಿ, ಅತ್ಯುತ್ತಮ ಮುಖ್ಯ ಶಿಕ್ಷಕನಾಗಿ, ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದಿಲ್ಲೊಂದು ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ  ಪ್ರಸ್ತುತ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ತೇರನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಎಳೆಯಲು ತನ್ನ ಜೀವನವನ್ನೇ ಸಮರ್ಪಿಸಿಕೊಂಡು ಕನ್ನಡ ತಾಯಿ ಭುವನೇಶ್ವರಿಯ ಸೇವೆಯನ್ನು ಭಕ್ತಿ, ಗೌರವಾದರಗಳೊಂದಿಗೆ ಮಾಡುತ್ತಿರುವ ಬಿ.ವಾಮದೇವಪ್ಪ ಅವರು ಇಂದು ಅಂದರೆ ೧೮ ಜನವರಿ ೨೦೨೪ ರಂದು ತಮ್ಮ ಬದುಕಿನ ೭೫ ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ೭೫ ನೇ ವಯಸ್ಸು ಎಂದರೆ ಮುಕ್ಕಾಲು ಶತಮಾನ. ಈ ಸದವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರು ಪುಣ್ಯಶಾಲಿಗಳೇ ಸರಿ. ಅದರಲ್ಲೂ ವಿಶೇಷವೆಂದರೆ ೭೫ ನೇ ವಯಸ್ಸಿಗೆ ಕಾಲಿಟ್ಟಿದ್ದರೂ ಇಂದಿಗೂ ಅತ್ಯಂತ ಚುರುಕಾಗಿ, ಪಾದರಸದಂತೆ, ೨೫ ರ ಯುವಕರನ್ನೂ ನಾಚಿಸುವಂತೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯವನ್ನು ನಿಭಾಯಿಸುತ್ತಿರುವುದು ಅವರ ವಿಶೇಷತೆಯಾಗಿದೆ. ಈ ದಿನ ಅವರ ಕುಟುಂಬಕ್ಕೆ, ಅಪಾರ ಬಂಧು ಬಳಗಕ್ಕೆ, ಅಪಾರ ಶಿಷ್ಯ ವರ್ಗಕ್ಕೆ, ಆತ್ಮೀಯರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ, ವಿದ್ವಾಂಸರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಅತ್ಯಂತ ಸಂಭ್ರಮದ ದಿನವಾಗಿ ಮಾರ್ಪಟ್ಟಿದೆ.

ಬಿ. ವಾಮದೇವಪ್ಪ ಅವರು ದಿನಾಂಕ ೧೮-೦೧-೧೯೫೦ ರಂದು ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದ ಶ್ರೀಮತಿ ಗಂಗಮ್ಮ ಮತ್ತು ಶ್ರೀ ಬಿ. ಬಸಪ್ಪ ದಂಪತಿಗಳ ಸುಪುತ್ರನಾಗಿ ಜನಿಸಿದರು. ಎಂ.ಎ., ಬಿ.ಇಡಿ., ಪದವಿಧರರಾಗಿ, ಮೈಸೂರಿನಲ್ಲಿ ಇ.ಎಲ್.ಟಿ.ಸಿ. ಹಾಗೂ ನವದೆಹಲಿಯಲ್ಲಿ ಸಿ.ಸಿ.ಆರ್.ಟಿ. ವಿಶೇಷ ತರಬೇತಿಯನ್ನು ಪಡೆದು ಶ್ರೀ ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ೩೫ ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ  ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪಠ್ಯ ಪುಸ್ತಕ ಪುನರ್‌ರಚನಾ ಸಮಿತಿಯ ಸದಸ್ಯರಾಗಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನದ ಜಿಲ್ಲಾ ಜಂಟಿ ಮುಖ್ಯಸ್ಥರಾಗಿ, ದಾವಣಗೆರೆ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿ,  ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೧-೨೦೦೪ ರ ಅವಧಿಯಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ,  ೨೦೦೮-೨೦೧೨ ರವರೆಗೆ ಹಾಗೂ ೨೦೧೬-೨೧ ರವರೆಗೆ ಎರಡು ಅವಧಿಗೆ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ. 
ಈ ಅವಧಿಯಲ್ಲಿ ಜಿಲ್ಲೆಯ ಸಮಸ್ತ ಕನ್ನಡಿಗರ ಸಹಕಾರದಿಂದ ಮಾಯಕೊಂಡದಲ್ಲಿ ೨ ದಿನ, ಬಾಡದಲ್ಲಿ ೨ ದಿನ, ಹದಡಿಯಲ್ಲಿ ೧ ದಿನ, ಆನಗೋಡಿನಲ್ಲಿ ೧ ದಿನ ಹೀಗೆ ೪ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಗ್ರಾಮೀಣ ಪ್ರದೇಶದಲ್ಲಿಯೇ ಅರ್ಥಪೂರ್ಣವಾಗಿ, ವೈಭವಯುತವಾಗಿ ಸಂಘಟಿಸಿದ ಹೆಗ್ಗಳಿಕೆ ಬಿ.ವಾಮದೇವಪ್ಪ ಅವರದ್ದಾಗಿದೆ.  ಆ ಮೂಲಕ ಅನೇಕ ಸಾಹಿತಿಗಳಿಗೆ, ಲೇಖಕರಿಗೆ, ಯುವಕರಿಗೆ ಅವರ ಪ್ರತಿಭೆಯ ಅನಾವರಣಕ್ಕೆ ಅವಕಾಶ ಸಿಕ್ಕಿದೆ. ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ದೊರಕಿಸುವಲ್ಲಿ ಮತ್ತು ಭವನ ನಿರ್ಮಾಣದಲ್ಲೂ ಅವರ ಪಾತ್ರ ಗಮನಾರ್ಹವಾಗಿದೆ. ದಾವಣಗೆರೆ ತರಳಬಾಳು ಬಡಾವಣೆಯಲ್ಲಿ ಕಳೆದ ೩೦ ವರ್ಷಗಳಿಂದಲೂ ನಿರಂತರವಾಗಿ “ಶಿವಗೋಷ್ಠಿ” ಕಾರ್ಯಕ್ರಮ ನಡೆಸುತ್ತಾ ಬರುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು  ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. “ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ”,  ದಾವಣಗೆರೆ ತಾಲೂಕು ಕಸಾಪದ ೮೫ ದತ್ತಿ ಕಾರ್ಯಕ್ರಮಗಳನ್ನು ದಾವಣಗೆರೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅರ್ಥಪೂರ್ಣವಾಗಿ ಆಯೋಜನೆ ಹಾಗೂ ಅನೇಕ ದತ್ತಿ ನಿಧಿಗಳ ಸ್ಥಾಪನೆಯಾಗುವಲ್ಲಿ,  “ಮಹಲಿಂಗರಂಗ ಪ್ರಶಸ್ತಿ” ಸ್ಥಾಪಿಸುವಲ್ಲಿ, ಕಸಾಪ ಕ್ಕೆ ೬ ಸಾವಿರಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಮಾಡುವಲ್ಲಿ ಬಿ.ವಾಮದೇವಪ್ಪ ಅವರ ಕನ್ನಡದ ಸೇವೆ ಅನುಪಮವಾದುದಾಗಿದೆ. 

ಶತಮಾನದ ಹೊಸ್ತಿಲನ್ನು ದಾಟಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಬೆಳೆಸುವ ಬಗ್ಗೆ ಅವರಿಗೆ ಅಪಾರವಾದ ಗೌರವ, ಶ್ರದ್ಧೆ, ಕಾಳಜಿ, ಬದ್ಧತೆಯಿದೆ. ಕನ್ನಡ ನಾಡು-ನುಡಿಯ ಕುರಿತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ಅರಿವಿರುವುದರ ಜೊತೆಗೆ ಎಲ್ಲರನ್ನೂ ಜೊತೆಗೂಡಿಸಿಕೊಂಡು, ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವವನ್ನು  ರೂಢಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ, ಕಿರಿಯ ಸಾಹಿತಿಗಳ ಒಡನಾಟ, ಕನ್ನಡ ಪರ ಸಂಘಟನೆಗಳೊಡನೆ ಇರುವ ಅವರ ಪ್ರೀತಿಯ ಸಂಬಂಧ, ಸಾಹಿತ್ಯ ಪರಿಚಾರಕರ ಬಗ್ಗೆ ಇರುವ ಗೌರವಗಳಿಂದ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಅತ್ಯಂತ ಕ್ರಿಯಾಶೀಲವಾಗಿ ಮುನ್ನಡೆಸಲು ಸಾಧ್ಯವಾಗಿದೆ. 

ವಾಮದೇವಪ್ಪ ಅವರು ಕೇವಲ ಕನ್ನಡಪರ ಸಂಘಟನೆ ಮಾತ್ರವಲ್ಲದೇ ಸಾಹಿತ್ಯ ಕೃಷಿಯಲ್ಲಿಯೂ ತಮ್ಮ ಕಿಂಚಿತ್ ಸೇವೆಯನ್ನು ಸಲ್ಲಿಸಿದ್ದಾರೆ. ೧೫ ಕ್ಕೂ ಹೆಚ್ಚು ವ್ಯಕ್ತಿ ಪರಿಚಯಗಳು, ೧೦ ಸಂಪಾದಿತ ಕೃತಿಗಳು, ‘ಸ್ಮೃತಿ ಶಂಕರ’ ಕೃತಿ, ನಾಲ್ಕು ಸಮ್ಮೇಳನಗಳ ಸವಿನೆನಪಿಗಾಗಿ ಸ್ಮರಣ ಸಂಚಿಕೆಗಳನ್ನು ಹೊರತಂದು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಸಿರಿಗೆರೆ ಜಗದ್ಗುರುಗಳವರ ನೇತೃತ್ವದಲ್ಲಿ ನಡೆದ ಮಧ್ಯಪಾನ ನಿಷೇಧ ಆಂದೋಲನದಲ್ಲಿ ೧೫೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಜನ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೂರಕವಾಗಿ ಅನೇಕ ಪ್ರಶ್ನೆ ಪತ್ರಿಕೆ ಕೋಷ್ಠಕಗಳನ್ನು ರಚಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿದ್ದಾರೆ. 
ದಾವಣಗೆರೆ ನಗರದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷನಾಗಿ ಜಿಲ್ಲಾ ಶೈಕ್ಷಣಿಕ ಸಮ್ಮೇಳನಗಳನ್ನು ಸಂಘಟಿಸಿದ ಹೆಮ್ಮೆಯೂ ಅವರಿಗಿದೆ. ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ೬೫ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ೨೦೨೦ರ ನವಂಬರ್ ತಿಂಗಳಲ್ಲಿ
೩೦ ದಿನಗಳ ಕಾಲ ಅಂತರ್ಜಾಲದಲ್ಲಿ “ಕನ್ನಡ ನುಡಿಹಬ್ಬ” ಕಾರ್ಯಕ್ರಮ ನಡೆಸುವ ಮೂಲಕ ನಾಡಿನ, ದೇಶದ, ಪ್ರಪಂಚದ ೫೦ ಸಾವಿರಕ್ಕೂ
ಹೆಚ್ಚು ಜನ ಯೂಟ್ಯೂಬ್ ಮತ್ತು ಫೇಸ್‌ಬುಕ್‌ಗಳ ಮೂಲಕ ವಿದ್ವಾಂಸರ ಉಪನ್ಯಾಸ, ನಾಡು-ನುಡಿಗೆ ಸಂಬಂಧಿಸಿದ ಸಂಗೀತ ಕಾರ್ಯಕ್ರಮ
ವೀಕ್ಷಿಸಲು ಅವಕಾಶ ಮಾಡಿಕೊಟ್ಟು ಕನ್ನಡ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಪ್ರಸ್ತುತ ನಾಡು ಕರ್ನಾಟಕ ಎಂದು ನಾಮಾಂಕಿತವಾಗಿ ೫೦ ವರ್ಷ ಸಂದಿರುವ ಸವಿನೆನಪಿಗಾಗಿ "ಕರ್ನಾಟಕ ಸಂಭ್ರಮ-೫೦" ಎನ್ನುವ ಶಿರೋನಾಮೆಯಡಿಯಲ್ಲಿ ವರ್ಷಪೂರ್ತಿ ತಿಂಗಳಿಗೊಂದು ಕಾರ್ಯಕ್ರಮದಂತೆ "ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಲರವ" ಕಾರ್ಯಕ್ರಮ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿಶೇಷವಾಗಿ ಯುವಕ ಯುವತಿಯರಿಗೆ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಉಪನ್ಯಾಸದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಮಹತ್ವಾಕಾಂಕ್ಷೆಯಾಗಿದೆ. 

ಸಂದ ಪ್ರಶಸ್ತಿಗಳು, ಗೌರವಗಳು:

ಶಿಕ್ಷಣ ಕ್ಷೇತ್ರದಲ್ಲಿ ಅವರ ೩೫ ವರ್ಷಗಳ ಸಾರ್ಥಕ ಸೇವೆ ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ “ಜಿಲ್ಲಾ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಿದೆ. ೦೯.೦೧.೨೦೧೪ ರಂದು ಕೊಡಗಿನಲ್ಲಿ ನಡೆದ ೮೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ನಾಡೋಜ ಡಾ.ದೇ.ಜವರೇಗೌಡ ಅವರಿಂದ ಸನ್ಮಾನಕ್ಕೆ ಭಾಜನರಾಗಿದ್ದಾರೆ.  ದಾವಣಗೆರೆ ಲಯನ್ಸ್ ಕ್ಲಬ್‌ನ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ ಕೊಡಮಾಡುವ “ದೇವನಗರಿ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮತ್ತು ಶ್ರೀಮದ್ ರಂಭಾಪುರಿ ಜಗದ್ಗುರು ರೇಣುಕ ವೀರಸೋಮೇಶ್ವರ ಭಗವತ್ಪಾದರಿಂದ ಗೌರವ ಸ್ವೀಕರಿಸಿದ್ದಾರೆ. ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ, ಆಡಳಿತ ಮಂಡಳಿಗಳ ಒಕ್ಕೂಟ(ರಿ.), ದಾವಣಗೆರೆ “ಶ್ರೇಷ್ಠ ಶಿಕ್ಷಕ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೊಡ್ಡಬಾತಿಯ ವಿಶ್ವಗುರು ಭಾರತ ಪ್ರತಿಷ್ಠಾನದವರು ‘ನಮ್ಮ ಸಾಧಕರು’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೨೦೨೧ ರ ನವೆಂಬರ್‌ನಲ್ಲಿ ಪ್ರಚಂಡ ಬಹುಮತದಿಂದ ಚುನಾಯಿತರಾದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಅನೇಕ  ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿದ ಕೀರ್ತಿ ಶ್ರೀ ವಾಮದೇವಪ್ಪ ಅವರಿಗೆ ಸಲ್ಲುತ್ತದೆ. ಅವರು ತಮ್ಮ ಸೇವಾವಧಿಯ ಎರಡು ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಎರಡು ಜಿಲ್ಲಾ ಸಮ್ಮೇಳನಗಳನ್ನು ಹಾಗೂ ಐದು ತಾಲೂಕು ಸಮ್ಮೇಳನಗಳನ್ನು  ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಹಾಗೆಯೇ ನೂರಾರು ಸಂಖ್ಯೆಯಲ್ಲಿ ಕನ್ನಡದ ಕಾರ್ಯಕ್ರಮಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜನೆಗೊಂಡಿವೆ. ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಲೋಕಾರ್ಪಣೆಗೊಂಡ ವಿಶ್ರಾಂತ ಶಿಕ್ಷಕ ಬಿ.ಎಸ್.ಸಿದ್ದೇಶ್ ವಿರಚಿತ "ಅವಾಂತರ" ಕೃತಿ ಸೇರಿದಂತೆ ಈವರೆಗೆ ೭೩ ಪುಸ್ತಕಗಳು ಲೋಕಾರ್ಪಣೆಗೊಂಡಿವೆ. ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನೀಡಿರುವ ಐದು ಲಕ್ಷ ರೂಪಾಯಿಗಳ ಅನುದಾನದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಶಾಸಕ ಎಸ್.ಎ. ರವೀಂದ್ರನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಯವರು ನೀಡಿರುವ ತಲಾ ಐದು ಲಕ್ಷ ರೂಪಾಯಿಗಳ ಅನುದಾನದಲ್ಲಿ  ಕುವೆಂಪು ಕನ್ನಡ ಭವನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭವನಕ್ಕೆ ಅತೀ ಸುಂದರವಾದ ಧ್ವಾರ ಬಾಗಿಲು ನಿರ್ಮಾಣವಾಗಿದೆ. ಭವನದ ಹೊರಭಾಗದಲ್ಲಿ ಬಯಲು ರಂಗಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ನೆನೆಗುದಿಗೆ ಬಿದ್ದಿರುವ ವಿಶ್ವಕನ್ನಡ ಸಮ್ಮೇಳನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಮ್ಮ ಅವಧಿಯಲ್ಲಿ ದಾವಣಗೆರೆಯಲ್ಲಿ  ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಇತರೇ ಜನಪ್ರತಿನಿಧಿಗಳು, ಸಾಹಿತಿಗಳು, ವಿದ್ವಾಂಸರು, ಕಲಾವಿದರು, ಕನ್ನಡಪರ ಸಂಘಟಕರು ಹಾಗೂ ಎಲ್ಲ ಕನ್ನಡದ ಮನಸ್ಸುಗಳ ಸಹಕಾರದಿಂದ ನಡೆಸಬೇಕೆಂದು ಅಚಲ ವಿಶ್ವಾಸದಲ್ಲಿದ್ದಾರೆ. ಇನ್ನು ಬಾಕಿಯಿರುವ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲ ಸಾಹಿತ್ಯ ದಿಗ್ಗಜರನ್ನು, ಜನಪ್ರತಿನಿಧಿಗಳನ್ನು,  ಕಲಾವಿದರನ್ನು, ಕಸಾಪ ಆಜೀವ ಸದಸ್ಯರನ್ನು, ಕನ್ನಡಾಭಿಮಾನಿಗಳನ್ನು ವಿಶ್ವಾಸದಿಂದ ಅಪ್ಪಿಕೊಂಡು ಕನ್ನಡದ ತೇರನ್ನು ಜಿಲ್ಲೆಯಾದ್ಯಂತ ಎಳೆದು ಕನ್ನಡ ನುಡಿಯ ಕಂಪನ್ನು ಪಸರಿಸಿ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯ ಆಶಯ ಅವರದಾಗಿದೆ.

 ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸುವುದು, ದತ್ತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಪ್ರೌಢಶಾಲೆ, ಪದವಿ ಪೂರ್ವಕಾಲೇಜು, ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು, ಸಂವಾದ ಗೋಷ್ಠಿಗಳ ಮೂಲಕ ಆಯೋಜಿಸುವುದು, ಕನ್ನಡ ಅಧ್ಯಾಪಕರುಗಳಿಗೆ ಕನ್ನಡದ ಬಗ್ಗೆ ಉಪಯುಕ್ತ ಕಾರ್ಯಾಗಾರಗಳನ್ನು ಆಯೋಜಿಸುವುದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಪರಿಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ “ಕನ್ನಡರತ್ನ” ಎಂಬ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿ, ಪ್ರೋತ್ಸಾಹಿಸುವುದು ಹೀಗೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಹೊಂಗನಸು ವಾಮದೇವಪ್ಪ ಅವರದ್ದಾಗಿದೆ.  ಆದಿಕವಿ ಪಂಪ ಅವರು ಹೇಳಿರುವಂತೆ ‘ಮಾನವ ಕುಲಂ ತಾನೊಂದೇ ವಲಂ’, ಜಗಜ್ಯೋತಿ ಶ್ರೀ ಬಸವೇಶ್ವರರು ಹೇಳಿರುವಂತೆ ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ’, ನಾಡಿನ ಪ್ರಥಮ ಕವಯಿತ್ರಿ ಅಕ್ಕಮಹಾದೇವಿಯವರು ಹೇಳಿರುವಂತೆ ‘ನಿಮ್ಮ ಮುಡಿಗೆ ಹೂವ ತರುವೆನಲ್ಲದೆ, ಹುಲ್ಲ ತಾರೆನು’, ರಾಷ್ಟಕವಿ ಕುವೆಂಪುರವರ ‘ಮನುಜಮತ ವಿಶ್ವಪಥ’ ಎಂಬ ಆದರ್ಶದ ಧ್ಯೇಯ ವಾಕ್ಯಗಳನ್ನು ಸದಾ ತಮ್ಮ ನಡೆ ನುಡಿಯ ಮೂಲಕ ಸಾಕಾರಗೊಳಿಸುವುದು ಅವರ ಧ್ಯೇಯವಾಗಿದೆ.

ಪ್ರಸ್ತುತ ಸಾದು ಸದ್ಧರ್ಮ ಸಮಾಜದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ವಾಮದೇವಪ್ಪ ಅವರ ಸಾಮಾಜಿಕ ಚಟುವಟಿಕೆಗಳಿಗೆ ಸದಾ ಜೊತೆಗಿದ್ದು ಹೆಜ್ಜೆ ಹಾಕುವ ಅವರ ಧರ್ಮಪತ್ನಿ ಕಮಲಮ್ಮ,  ಅವರ ಕುಟುಂಬ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಹಿರಿ-ಕಿರಿಯ ವಿದ್ವಾಂಸರು, ಸಾಹಿತಿಗಳು, ಕಲಾವಿದರ ಸಹಕಾರವನ್ನು ಸದಾ  ನೆನೆಯುತ್ತಾರೆ. ಅವರುಗಳ ಸಹಕಾರದಿಂದಲೇ ನಾನಿಂದು ಏನಾದರೂ ಕಿಂಚಿತ್ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು  ಅವರೆಲ್ಲರನ್ನೂ ವಿನೀತರಾಗಿ ಸ್ಮರಿಸುತ್ತಾರೆ.

೭೫ ರ ವಯಸ್ಸು ನನ್ನ ದೇಹಕ್ಕಾಗಿದೆಯೇ ಹೊರತು ಕನ್ನಡದ ಕೆಲಸ ಮಾಡಬೇಕೆಂಬ ನನ್ನ ಮನಸ್ಸಿಗಲ್ಲ. ತನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ದುಡಿಯುತ್ತೇನೆ‌ ಎಂದು ಸದಾ ಹೇಳುವ ವಾಮದೇವಪ್ಪನವರಿಗೆ ಕನ್ನಡ ತಾಯಿ ಭುವನೇಶ್ವರಿಯು ಸದಾ ಆಶೀರ್ವದಿಸಲಿ ಹಾಗೂ ಅವರ ಮನದಿಚ್ಛೆಯಂತೆ ಕೊನೆವರೆಗೂ ಕನ್ನಡದ ಸೇವೆ ಮಾಡುವ ಚೈತನ್ಯವನ್ನು ದಯಪಾಲಿಸಲಿ ಎನ್ನುವುದೇ ಅವರ ಅಭಿಮಾನಿಗಳೆಲ್ಲರ ಈ ಹೊತ್ತಿನ ಪ್ರಾರ್ಥನೆಯಾಗಿದೆ.

ಲೇಖಕರು:
ಕೆ.ರಾಘವೇಂದ್ರ ನಾಯರಿ
ಗೌರವ ಕೋಶಾಧ್ಯಕ್ಷ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ಮೊ: 9844314543
ಮೈಲ್: krnairycbeu@gmail.com