ಸಮಾಜವನ್ನು ಜಾಗೃತಗೊಳಿಸುವ "ಚಮ್ಮಾವುಗೆಯ ಕಿಡಿಗಳು" 

ಸಮಾಜವನ್ನು ಜಾಗೃತಗೊಳಿಸುವ "ಚಮ್ಮಾವುಗೆಯ ಕಿಡಿಗಳು" 

ಸಮಾಜವನ್ನು ಜಾಗೃತಗೊಳಿಸುವ "ಚಮ್ಮಾವುಗೆಯ ಕಿಡಿಗಳು" 

ಡಾ. ಶಿವರಾಜ್ ಬ್ಯಾಡರಹಳ್ಳಿ ಅವರ ಎರಡನೇ ಕವನ ಸಂಕಲನ "ಚಮ್ಮಾವುಗೆಯ ಕಿಡಿಗಳು" ಈ ಸಂಕಲನದಲ್ಲಿ ಒಟ್ಟು 45 ಕವಿತೆಗಳಿವೆ. ಇಲ್ಲಿನ ಕವಿತೆಗಳು ಭಾಷೆ ಮತ್ತು ವಸ್ತು ಶೈಲಿಯಿಂದ ಗಮನ ಸೆಳೆಯುತ್ತವೆ. ರೂಪಕ ಮತ್ತು ಧ್ವನಿ ಪರಸ್ಪರ ಬೆಸೆದುಕೊಂಡು ಅದ್ಭುತವಾಗಿ ಇಲ್ಲಿನ  ಕವಿತೆಗಳು ರಚನೆಯಾಗಿವೆ. ಸಮಕಾಲೀನ ಸಾಂಸ್ಕೃತಿಕ ತವಕ ತಲ್ಲಣಗಳನ್ನು ಜವಾಬ್ದಾರಿತವಾಗಿ ಇಲ್ಲಿನ ಕವಿತೆಗಳಲ್ಲಿ ಓದುಗರು ಎದುರಾಗುವುದನ್ನು ನಾವು ಕಾಣಬಹುದು. ನಮ್ಮ ನಡುವಿನ ತಳ ಸಮುದಾಯದ ಬೇಗೆ,  ಭವಾಣೆಗಳನ್ನು ಉಚ್ಚ ವರ್ಗಗಳಿಂದ ಹವ್ಯಾಹತವಾಗಿ ಅನುಭವಿಸುತ್ತಿರುವ ಅಪಮಾನ ಅನ್ಯಾಯಗಳನ್ನು ತೋರಿಸುವ ಪದ್ಯಗಳು ಇಲ್ಲಿ ಸಾಕಷ್ಟು ಇವೆ.

ಚಮ್ಮಾ+ಆವುಗೆ ಎಂದರೆ ಚರ್ಮದಗೂಡು ಅಂದರೆ ಮನುಷ್ಯನ ಶರೀರ ಇದರಿಂದ ಹೊರಹೊಮ್ಮಿದ ಕಿಡಿಗಳೇ "ಚಮ್ಮಾವುಗೆಯ ಕಿಡಿಗಳು" ಇಲ್ಲಿ ಸಾಮಾಜಿಕ ಬದ್ಧತೆ ಹಾಗೂ ರಾಜಕೀಯ ಒಳನೋಟಗಳನ್ನು ನೋಡಬಹುದು.  ಇಲ್ಲಿ ಪ್ರತಿಮೆಗಳು ರೂಪಕಗಳು ಸಂಕೇತಗಳು ಉಪಮೆಗಳು ಬೆಳಕಿನ ಕಿಡಿಗಳು ಸಾಲುಗಟ್ಟಿ ಬರುತ್ತವೆ. ಕವಿ ಎನ್ಕೆ ಹನುಮಂತಯ್ಯ, ಗಾಂಧಿ, ಅಂಬೇಡ್ಕರ್, ಕಿ.ರಂ. ನಾಗರಾಜ ಮುಂತಾದವರ ಬಗ್ಗೆ ಬಂದಿರುವ ಕವಿತೆಗಳು ವ್ಯಕ್ತಿ ರೂಪಕಗಳಾಗಿ, ಶಕ್ತಿ ಪ್ರತೀಕಗಳಾಗಿ ಕಾಣಿಸಿಕೊಳ್ಳುತ್ತವೆ. ಹಳ್ಳಿಯಿಂದ ನಗರಕ್ಕೆ ಬಂದರೆ ರಾಕ್ಷಸನಗರಗಳಲ್ಲಿ ವ್ಯಕ್ತಿಯು ಕಳೆದು ಹೋಗುತ್ತಾನೆ. ಆದರೆ ಆ ಅನುಭವವನ್ನೇ ಇವರು ಕಾವ್ಯವಾಗಿಸುವುದರ ಮೂಲಕ ಎಲ್ಲರ ಅನುಭವಗಳಾಗಿ ಸಾಧಾರಣೀಕರಣವಾಗಿಸಿದ್ದಾರೆ.

ರೈತ ಸಂಘ, ದಲಿತ  ಸಂಘರ್ಷ ಸಮಿತಿ ಮುಂತಾದವು 1970ರ ಕಾಲಘಟ್ಟದಲ್ಲಿ ಹುಟ್ಟಿಕೊಂಡವು. ಅವು ಮಾಡಿದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ, ನಂತರ ಅವು ಒಡೆದು ವ್ಯಕ್ತಿಗತವಾದದ್ದು ಈಗ ಇತಿಹಾಸ. ಈ ನಿಟ್ಟಿನಲ್ಲಿ ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು "ಈಡುಗಾಯಿ" ಕವಿತೆ ಮೂಲಕ ಹೀಗೆ ಹೇಳುತ್ತಾರೆ

 ಸಂಘರ್ಷ ಸಮಿತಿಗಳೇ 
ಒಡೆದ ಈಡುಗಾಯಿಯಂತೆ 
ಚೂರು ಚೂರು ಹೋಳಾಗಿ 
ತನಗೊಂದು ನನಗೊಂದು 
ಪೀಠಕ್ಕೆ ಬಲಿಯಾಗಿ 
ಮಾಯವಾದವೊ 
ಮಂಕಾದವೊ... 

 ದೇವರ ಮುಂದೆ ಈಡುಗಾಯಿ ಒಡೆದರೆ ಹೇಗೆ ಅದು ಹಲವು ಹೋಳಾಗುತ್ತದೆಯೊ ಹಾಗೆ ದಲಿತ ಸಂಘರ್ಷ ಸಮಿತಿ, ರೈತ ಸಂಘಗಳು ಈಗ ಹೋಳಾಗಿವೆ ಎಂಬುದನ್ನು ಈ ವಸ್ತು ರೂಪದಲ್ಲಿ ಹೇಳುತ್ತಾರೆ. 

ಪಂಚಭೂತಗಳಿಂದಾದ ಈ ಕಾಯದಲ್ಲಿ ಉಸಿರು ಇದ್ದಾಗ ಮಾತ್ರ ಪಂಚಧಾತುಗಳು ಶಕ್ತಿದಾಯಕವಾಗಿರುತ್ತದೆ. ಸತ್ತಾಗ ಅವು  ಪಂಚತ್ವವನ್ನು ಪಡೆಯುತ್ತವೆ ಎಂದರೆ ಮಣ್ಣು ಪಾಲು ಮಣ್ಣಿಗೆ,  ನೀರು ಪಾಲು ನೀರಿಗೆ, ಗಾಳಿ ಪಾಲು ಗಾಳಿಗೆ,  ಬೆಂಕಿ ಪಾಲು ಬೆಂಕಿಗೆ, ಬೆಳಕಿನ ಪಾಲು ಬೆಳಕಿಗೆ ಸೇರಿ ಹೋಗುತ್ತವೆ ಇಷ್ಟು ಕ್ಷಣಿಕ ಈ ಐಹಿಕ ಬದುಕು. ಆದರೆ ಇದನ್ನೇ ನಂಬಿನೆಚ್ಚಿ ಕೆಡಬೇಡವೋ ಮನುಜ ಎಂದು ತತ್ವಪದಕಾರರು ಹಾಡುತ್ತಾರೆ.

 ಅಕ್ಕಮಹಾದೇವಿ ಈ ಕುರಿತು 'ಆವಗೆಯ ಕಿಚ್ಚಿನಂತೆ ಸುಳಿ ಸುಳಿದು ಬೆಂದೆ ಎನಗೆ ನೀ ಕರುಣಿಸು' ಎಂದು ಚೆನ್ನಮಲ್ಲಿಕಾರ್ಜುನಲ್ಲಿ ಮೊರೆ ಇಡುತ್ತಾಳೆ. ಈ ಮೊರೆಯೇ ಅವಳ ವಚನಗಳಾಗಿ ರೂಪುಗೊಂಡಿವೆ.

 ಗೋವು ಹಾದಿಬದಿಯಲ್ಲಿ ಕಸದ ಹುಲ್ಲನ್ನು ತಿಂದು ಹೇಗೆ ಅಮೃತವನ್ನು ನೀಡುತ್ತದೆಯೋ ಹಾಗೆ ಕವಿ ಡಾ. ಶಿವರಾಜ್ ಬ್ಯಾಡರಹಳ್ಳಿ ಲೋಕಾಂತದ ಅನುಭವಗಳನ್ನು ಏಕಾಂತದಲ್ಲಿ ಪರಿಭಾವಿಸಿ ಕಾವ್ಯಾಮೃತವನ್ನು ನಮಗೆ ನೀಡಿದ್ದಾರೆ. ಈ ಕರ್ತವ್ಯವನ್ನು ಕವಿ "ಕಾಡುವ ಕಿ.ರಂ." ನಾಗರಾಜ್ ರವರ ಬಗ್ಗೆ ಬರೆಯುತ್ತಾ 

ನಡೆಯುವ ಹಾದಿಯಲ್ಲಿ ಹೆಜ್ಜೆ 
ಮೂಡಿಸಿ ಕುಲುಮೆಯೊಳಗೆ ಕೆಂಡವನೆತ್ತಿ 
ಮುಡಿಗೆ ಮಲ್ಲಿಗೆಯಾಗಿಸಿಕೊಂಡವ 
ಎಲ್ಲರಂಥವನಲ್ಲ ಈ ಗುರು 

ಎಂದು ಹೇಳಿರುವುದನ್ನು ನೋಡಿದರೆ ಗುರುವಿನ ಮಹತ್ವ ಮತ್ತು ಶಕ್ತಿ ಏನೆಂಬುದು ತಿಳಿಯುತ್ತದೆ. ನಿಜವಾದ ಕವಿ ವಾಲ್ಮೀಕಿಯಂತೆ ಬೇಟೆಯ ಪರ ವಕೀಲಿ ನಡೆಸುತ್ತಾನೆ, ಬೇಟೆಗಾರನ ಪರ ಅಲ್ಲ. ಇದರಿಂದ ಅವನು ಹಿಂದೆ ಸರಿಯುವುದಿಲ್ಲ ಈ ಲಕ್ಷಣವನ್ನು "ನೀರ ಕುಲುಮೆ" ಕವಿತೆಯಲ್ಲಿ ಬರೆಯುತ್ತಾ 

ನೆನ್ನೆ ಸುಲಿದಿಟ್ಟ ಚರ್ಮವನ್ನು 
ಹದಮಾಡಿ ನೇರಕ್ಕೆ 
ನೇತಾಕಿ ಮೊಳೆ ಹೊಡೆದು 
ಆಕಾಶಕ್ಕೆ ಮುಖ ಮಾಡಿದ 
ಅಮಾಯಕ ಪ್ರಾಣಿಯ ಜೊತೆಗೊಂದಿಷ್ಟು 
ಕೂತು ಮಾತಾಡು 

ಎನ್ನುವುದನ್ನು ನಾವಿಲ್ಲಿ ಕಾಣಬಹುದು.  ಡಾ. ಶಿವರಾಜ್ ಬ್ಯಾಡರಹಳ್ಳಿ ಅವರ ಕಾವ್ಯಗಳಲ್ಲಿ ಮೊನಚು, ವ್ಯಂಗ್ಯ, ವಿಡಂಬನೆ, ಕಟಕಿ ಮುಂತಾಗಿ ಎರಡಲಗಿನ ಕತ್ತಿಯಂತೆ ನಾಟಿ ಇರಿಯುತ್ತವೆ.  ಸಾಮಾಜಿಕ ಅಸಮಾನತೆ,  ಜಾತಿಯತೆ, ಅಸ್ಪೃಶ್ಯತೆ, ರಾಜಕೀಯ ದೊಂಬರಾಟ, ಮೋಸದ ವ್ಯಾಪಾರ ಇತ್ಯಾದಿಗಳನ್ನು ಧಿಕ್ಕರಿಸುವ ಕವನಗಳು ಇಲ್ಲಿವೆ "ಮುಖವಾಡಗಳು" ಕವಿತೆಯಲ್ಲಿ ಹೀಗೆ ಬರೆಯುತ್ತಾರೆ 

ಬಿರಿಯುತ್ತಿದೆ ಬಾಯಲ್ಲಿ 
ಬ್ರಹ್ಮಾಂಡದ ಮಾತುಗಳು 
ಉದುರುತ್ತವೆ ಮಳೆ ಹನಿ 
ಯಂತೆ ಸುಳ್ಳು ಆಶ್ವಾಸನೆಗಳು....
 
ಹೀಗೆಯೇ "ಸುರಂಗ" ಕವಿತೆಯಲ್ಲಿ ಹೀಗೆ ಬರೆಯುತ್ತಾರೆ

ಇಕ್ಮತ್ತುಗಳ ಇಕ್ಕಟ್ಟಿನಲ್ಲಿ 
ಇರುವೆ ಸಾಲಂತೆ ನಡೆವ ಜಾಲದ 
ನಡಿಗೆಯೊಳಗೆ ಅದೆಷ್ಟು ಸುರುಳಿ 
ಸುರಂಗಗಳು?

ಮತ್ತೆ ಮತ್ತೆ ಓದಿಸಿಕೊಳ್ಳುವ "ಬೋನಿಗೆ ಬಿದ್ದ ದೊಡ್ಡ ಇಲಿ" ಎಂಬ ಕಥನ ಕವನ ವ್ಯಂಗ್ಯ ವಿಡಂಬನೆಯಿಂದ ಬೆರಗು ಮೂಡಿಸುತ್ತದೆ. ಹಾಗೆಯೇ "ಮತ" ಪದ್ಯದಲ್ಲಿ ಭ್ರಷ್ಟ ರಾಜಕಾರಣಿಯ ವಿಡಂಬನೆ ನಿತ್ಯ ನೂತನವಾಗಿ ಕಣ್ಣಿಗೆ ರಾಚುತ್ತದೆ. 

ಮುಖನೋಡಿ ಮುಚ್ಚಿಕೊಳ್ಳುವ 
ಮಂದಿಯೊಳಗೆ ಮುತ್ತಿನಂಥ 
ಮಾತುದುರಿಸಿ ಮಥಿಸಿ ಬಂದ 
ಪಾಪದುರಿಗೆ ಸಿಗಲಾರದೆ 
ದೊಳೆಬ್ಬಿಸಿ ದೂರವಾಗುವ ಮಂದಿ... 
ಎಂದು ಹೇಳುತ್ತಾರೆ.

"ಕವಿ ಸಮಯ" ಕವಿತೆಯಲ್ಲಿ ನಗರ ಜೀವನದ ಭವಣೆಯನ್ನು ಕವಿ ಸುಂದರವಾಗಿ ಬಿಡಿಸಿದ್ದಾರೆ. ಕವಿತೆಯ ಕೊನೆಯ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ 

ಮೂರಾ ಬಟ್ಟೆಯಲ್ಲಿ 
ಕೂಡಿಟ್ಟ ದ್ವೀಪದಂತೆ 
ಬದುಕುತ್ತಿದೆ 
ಬದುಕುಳಿದಿವರ ಮಂದಿ 

ಎನ್ನುವ ಈ ಸಾಲುಗಳು ಬಹು ಮಂದಿಯ ಜೀವನದ ಚಿತ್ರಣವನ್ನು ನಮಗೆ ತಿಳಿಸುತ್ತವೆ. 

"ಚಿತ್ತಾರ" ಕವಿತೆಯಲ್ಲಿ ಕವಿ ಹೀಗೆ ಬರೆಯುತ್ತಾರೆ 

"ಯಾರು ಕದ್ದರೇನು ಬಾನ ತುಂಬಾ 
ಅರಳಿ ನಿಂತ ಕಾಮನಬಿಲ್ಲ! 
ಸಂತೆ ಬಿಟ್ಟ ಮೇಲೆ ಚಿಂತೆ ಏಕೆ? 

12ನೆಯ ಶತಮಾನದಲ್ಲಿ ಶಿವಭಕ್ತರಾದ ಹರಳಯ್ಯ ದಂಪತಿಗಳು ತಮ್ಮ ತೊಡೆಯ ಚರ್ಮವನ್ನು ಸುಲಿದು ಚಮ್ಮಾವುಗೆಯ ಮಾಡಿ ಬಸವಣ್ಣನಿಗೆ ಅರ್ಪಿಸಿದಂತೆ,
ಕವಿ ಡಾ. ಶಿವರಾಜ್ ಬ್ಯಾಡರಹಳ್ಳಿ ತಮ್ಮ ಕವನ ಸಂಕಲನಕ್ಕೆ "ಚಮ್ಮಾವುಗೆಯ ಕಿಡಿಗಳು" ಎಂಬ ಸೂಕ್ತವಾದ ಶೀರ್ಷಿಕೆಯನ್ನೇ ಇಟ್ಟಿದ್ದಾರೆ. "ಆಸೆ" ಕವನದಲ್ಲಿ ಹೀಗೆ ಬರೆಯುತ್ತಾ 

ಹದ ಮಾಡಿದ ಮಣ್ಣ 
ತಿರುಗೋ ರಾಟೆಗೆ ಹಾಕಿ 
ಗಿರಗಿರ ತಿರುಗಿಸಿ 
ಬೆರಳಿನಿಂದಲೇ ತಿದ್ದಿ ತೀಡುವ 
ಕುಂಬಾರನ ಕೈಗಳಿಗೆ 
ನಮಿಸುವ ಆಸೆ.....ಎಂಬಂತೆ ಸಮಾಜದೊಳಗಿನ ಅವ್ಯವಸ್ಥೆಯ, ಅವೈಜ್ಞಾನಿಕತೆಯ , ಅವೈಚಾರಿಕತೆಯ ಬಗ್ಗೆ ತನ್ನೊಳಗೆ ಬೆಂದು ಹೊರಬಂದ ಈ ಕಿಡಿಗಳು ಮೆಚ್ಚುಗೆಯನ್ನು ಗಳಿಸುತ್ತವೆ. ಪ್ರಜ್ಞೆಯನ್ನು ಮೂಡಿಸುತ್ತವೆ,  ಸಫಲವಾಗುತ್ತವೆ. ಕವಿ ಡಾ.ಶಿವರಾಜ್ ಬ್ಯಾಡರಹಳ್ಳಿ ರವರು ಹೀಗೆ ತಮ್ಮ ಕವಿತೆಗಳ ಮೂಲಕ ಎಲ್ಲರನ್ನು ಜಾಗೃತಗೊಳಿಸುತ್ತಿರಲಿ.

ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -೫೬೦೦೫೬
ಮೊಬೈಲ್ ನಂ: 9739758558