Wednesday, August 10, 2022
Home ಅಧ್ಯಾತ್ಮ ಬಾಲಸಂಸ್ಕಾರ ಕೇಂದ್ರ ಅಗತ್ಯ

ಬಾಲಸಂಸ್ಕಾರ ಕೇಂದ್ರ ಅಗತ್ಯ

ಸುದ್ದಿಕಿರಣ ವರದಿ
ಗುರುವಾರ, ಜೂನ್ 9

ಬಾಲಸಂಸ್ಕಾರ ಕೇಂದ್ರ ಅಗತ್ಯ
ಉಡುಪಿ: ದೇವಸ್ಥಾನಗಳಲ್ಲಿ ಬಾಲ ಸಂಸ್ಕಾರ ಕೇಂದ್ರಗಳ ಸ್ಥಾಪನೆ ಅಗತ್ಯ ಎಂದು ಕುತ್ಯಾರು ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಮಕ್ಕಳಿಗೆ ಧರ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತೀ ದೇವಸ್ಥಾನಗಳಲ್ಲಿ ಬಾಲ ಸಂಸ್ಕಾರ ಕೇಂದ್ರ ಪ್ರಾರಂಭಿಸುವ ಅಗತ್ಯವಿದೆ ಎಂದರು.

ಕಡಿಯಾಳಿ ಮಹಿಷಮರ್ದಿನಿ ದೇವಳ ಬ್ರಹ್ಮಕಲಶೋತ್ಸವ ಸಮಾರೋಪ ಸಮಾರಂಭದಲ್ಲಿ ಗುರುವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.

14ರಿಂದ 25 ವರ್ಷದೊಳಿಗಿನ ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು. ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳ ಪರಿಚಯ ಮಾಡಿಸಬೇಕು. ಇಲ್ಲದಿದ್ದಲ್ಲಿ ವೈಭವಯುತ ದೇವಸ್ಥಾನಗಳಿದ್ದು ಪ್ರಯೋಜನವೇನು ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಧಾರ್ಮಿಕ ಉಪನ್ಯಾಸ ನೀಡಿ, ಭಾರತದಲ್ಲಿ ದೇವರನ್ನು ನಂಬಿದವರಿಗೆ ಮಾನ್ಯತೆ ಇದೆಯೇ ಹೊರತು ದೇವ ವಿರೋಧಿಗಳನ್ನು ಜನರು ಸ್ವೀಕಾರ ಮಾಡುವುದಿಲ್ಲ.

ವ್ಯಕ್ತಿಗತ ಮಾನ್ಯತೆ ಹಂಬಲ ಭಾರತೀಯ ಸಂಸ್ಕೃತಿಯಲ್ಲ. ಸೇವೆಯಲ್ಲಿ ಧನ್ಯತಾ ಭಾವ ಹೊಂದುವುದು ಹಿಂದೂ ಸಂಸ್ಕೃತಿ. ದೇವಸ್ಥಾನಗಳು ಭಾವ ಬಂಧದಲ್ಲಿ ಪೋಣಿಸುವ ಕೆಲಸವನ್ನು ಮಾಡುತ್ತವೆ. ಹೀಗಾಗಿ ಮೊಘಲರ ಆಕ್ರಮಣಕ್ಕೆ ರಾಜರು ಸೋತಿದ್ದರೂ ಧಾರ್ಮಿಕ ಕೇಂದ್ರಗಳು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿವೆ ಎಂದರು.

ದೇವಸ್ಥಾನದ ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಉದ್ಯಮಿ ಬಿ. ಜಯರಾಜ್ ಹೆಗ್ಡೆ, ನಗರಸಭಾ ಸದಸ್ಯರಾದ ಸಂತೋಷ್ ಜತ್ತನ್ನ ಮತ್ತು ಕಲ್ಪನಾ ಸುಧಾಮ, ಧಾರ್ಮಿಕ ಪರಿಷತ್ ಸದಸ್ಯ ಯು. ಮೋಹನ್ ಉಪಾಧ್ಯ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರವಿರಾಜ್ ವಿ. ಆಚಾರ್ಯ, ಸದಸ್ಯೆ ಶಶಿಕಲಾ ಭರತ್ ರಾಜ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ. ಪುರಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಭಾಸ್ಕರ ಶೇರಿಗಾರ್ ಉಪಸ್ಥಿತರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!