Thursday, July 7, 2022
Home ಅಧ್ಯಾತ್ಮ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜ್, ಬೆಳಧಡಿ

ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜ್, ಬೆಳಧಡಿ

ಪ್ಲವ ನಾಮ ಸಂವತ್ಸರದ ಭಾದ್ರಪದ ಅಮಾವಾಸ್ಯೆ ದಿನಾಂಕ 06-10-2021ಕ್ಕೆ ಬೆಳಧಡಿ ಶ್ರೀ ಬ್ರಹ್ಮಾನಂದ ಗುರು ಮಹಾರಾಜರು ದೇಹ ತ್ಯಜಿಸಿ 103 ವರ್ಷಗಳಾಗುತ್ತವೆ. ಮಹಾಲಯ ಅಮಾವಾಸ್ಯೆಯ ಪುಣ್ಯದಿನದಂದು ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರನ್ನು ಸ್ಮರಿಸೋಣ.

ಕರ್ನಾಟಕದಲ್ಲಿ ಸಮರ್ಥ ರಾಮದಾಸಿ ಪರಂಪರೆಯನ್ನು ಪ್ರಚುರಪಡಿಸಿದವರು ಬೆಳಧಡಿಯ ಶ್ರೀ ಬ್ರಹ್ಮಾನಂದರು.

ಅಪ್ರತಿಮ ಗುರುಭಕ್ತ, ಶ್ರೀರಾಮನಾಮೋಪಾಸನೆಯೇ ಮೋಕ್ಷಪ್ರಾಪ್ತಿಯ ಗುಟ್ಟು ಎಂದು ಸಾರಿದ, ದ.ಕ. ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿ ಶ್ರೀರಾಮ ಮಂದಿರ ಸ್ಥಾಪಿಸಿದ (1915) ಶ್ರೀ ಬ್ರಹ್ಮಾನಂದ ಗುರುಗಳ ಪುಣ್ಯತಿಥಿಯ ಈ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರ ಸಮರ್ಥ ಎಂ. ಕಾಂತಾವರ ಅವರು ಶ್ರೀ ಬ್ರಹ್ಮಾನಂದ ಗುರುಗಳ ಬಗ್ಗೆ ಸ್ಥೂಲವಾಗಿ ತಿಳಿಸಿದ್ದಾರೆ.

ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜ್, ಬೆಳಧಡಿ

ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರ ಸಚ್ಛಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರು ಶ್ರೀ ಬ್ರಹ್ಮಾನಂದ ಮಹಾರಾಜರು. ಅವರ ನಿಜ ನಾಮ ಅನಂತ ಶಾಸ್ತ್ರಿ. ಹುಟ್ಟಿದ್ದು ಈಗಿನ ವಿಜಯಪುರ ಜಿಲ್ಲೆಯ ಜಾಲಿಹಾಳ ಎಂಬ ಚಿಕ್ಕ ಹಳ್ಳಿಯಲ್ಲಿ.

ಸಕಲ ಶಾಸ್ತ್ರ ನಿಷ್ಣಾತ
ಬಾಲ್ಯದಲ್ಲಿಯೇ ತರ್ಕ ಮೀಮಾಂಸೆ ಸಾಹಿತ್ಯ ವ್ಯಾಕರಣ ಅಭ್ಯಾಸ ಮಾಡಿದ್ದರು. ಜಗನ್ಮಾತೆ ಬಾದಾಮಿಯ ಶ್ರೀ ಬನಶಂಕರಿ ದೇವಿಯ ಸಾಕ್ಷಾತ್ ದರ್ಶನ ಪಡೆದು ಮಾತೆಯ ಅಪ್ಪಣೆಯಂತೆ ಹೆಚ್ಚಿನ ವೇದಾಂತ ಶಾಸ್ತ್ರಗಳ ಅಭ್ಯಾಸಕ್ಕಾಗಿ ಗದಗ ಸಮೀಪದ ಮುಳುಗುಂದ ಗ್ರಾಮದ ಪಂಡಿತಾಗ್ರಣ್ಯ, ನ್ಯಾಯ ವ್ಯಾಕರಣ ವೇದಾಂತಾದಿ ಶಾಸ್ತ್ರಗಳ ಘನವಿದ್ವಾಂಸರೆಂದು ಪ್ರಸಿದ್ದರಾದ ಜಂತ್ಲಿ ಗುರುನಾಥ ಶಾಸ್ತ್ರಿಗಳಲ್ಲಿ ಶಿಷ್ಯ ವೃತ್ತಿ ವಹಿಸಿ ಶಾಸ್ತ್ರಾಭ್ಯಾಸ ಮಾಡಿ ಅನಂತ ಶಾಸ್ತ್ರಿಗಳೆಂದು ಹೆಸರುವಾಸಿಯಾದರು.

ಬ್ರಹ್ಮಾನಂದ ನಾಮಕ
ಲೌಕಿಕ ಪರಾಙ್ಮುಖರಾದ ಅನಂತ ಶಾಸ್ತ್ರಿಗಳು ಆತ್ಮೋದ್ಧಾರಕ್ಕಾಗಿ ಗುರುಶೋಧ ನಿರತರಾಗಿದ್ದಾಗ ಅವರಿಗೆ ಲಭಿಸಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಾಣ ತಾಲೂಕು ಗೋಂದಾವಲೆ ಎಂಬಲ್ಲಿನ ಪರಮ ನಾಮ ಸಾಧಕ, ಸಾಕ್ಷಾತ್ ಶ್ರೀ ಮಾರುತಿಯ ಪುನರವತಾರಿ ಎಂದೇ ಖ್ಯಾತರಾದ ಶ್ರೀ ಬ್ರಹ್ಮಚೈತನ್ಯ ಮಹಾರಾಜರು. ಅವರು ಅನಂತ ಶಾಸ್ತ್ರಿಗಳಿಗೆ ಬ್ರಹ್ಮಾನಂದ ಎಂಬ ನಾಮಕರಣ ಮಾಡಿ, ಶ್ರೀರಾಮ ತಾರಕ ಮಂತ್ರೋಪದೇಶ ಮಾಡಿದರು.

ಕರ್ನಾಟಕ ಪ್ರಾಂತ್ಯದಲ್ಲಿ ಶ್ರೀರಾಮ ನಾಮ ಪ್ರಸಾರ ಮಾಡುವಂತೆ ಶ್ರೀ ಗುರುಗಳ ಆಜ್ಞೆಯ ಮೇರೆಗೆ ಗೋಂದಾವಲೆಯಿಂದ ಹೊರಟ ಶ್ರೀ ಬ್ರಹ್ಮಾನಂದರು ತಮ್ಮ ಜನ್ಮಭೂಮಿ ಜಾಲೀಹಾಳಕ್ಕೆ ಬಂದರು. ಕೆಲವು ದಿನ ಕಳೆದ ಮೇಲೆ ಶ್ರೀಕ್ಷೇತ್ರ ವೆಂಕಟಾಪುರಕ್ಕೆ ಬಂದರು. ಅಲ್ಲಿ ರಾಮ ನಾಮದಲ್ಲಿ ಮಗ್ನರಾಗಿದ್ದಾಗ ಶ್ರೀ ಮಹಾರಾಜರು ಅವರಿಗೆ ದರ್ಶನವಿತ್ತು ಬೆಳಧಡಿಗೆ ಹೋಗಿ ಅಲ್ಲಿ, ಶ್ರೀರಾಮಸೇವೆ ಮತ್ತು ಲೋಕಸಂಗ್ರಹ ಪ್ರಾರಂಭಿಸುವಂತೆ ಅಪ್ಪಣೆಪಡಿಸಿ, ಅದೃಶ್ಯರಾದರು.

ತೇರಾಕೋಟಿ ಜಪ ಸಾಧಕ
ಶ್ರೀಕ್ಷೇತ್ರ ಬೆಳಧಡಿಯಲ್ಲಿ ಶ್ರೀ ರಾಮನ ಮಂದಿರ ಕಟ್ಟಿಸಿ ಸುಂದರ ವಿಗ್ರಹಗಳ ಪ್ರತಿಷ್ಠಾ ಮಹೋತ್ಸವ ಮಾಡಿದರು. ನಂತರ ನರಗುಂದ, ಬಿದರಹಳ್ಳಿ ಮತ್ತು ತೇರದಾಳ ಗ್ರಾಮದಲ್ಲಿ (ನರಪುರ- ರಥಪುರ- ವೇಣುಪುರ) ತೇರಾಕೋಟಿ (13 ಕೋಟಿ) ಜಪಯಜ್ಞ ಸಮಾರಂಭಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ನೆರವೇರಿಸಿದರು.

ಶ್ರೀ ಬ್ರಹ್ಮಾನಂದ ಮಹಾರಾಜರು ತಮ್ಮ ಜೀವನದಲ್ಲಿ ಸಗುಣೋಪಾಸನಾ ಮಾರ್ಗ ಅನುಸರಿಸಿ, ಶ್ರೀರಾಮ ನಾಮ ಪ್ರಚಾರ ಕಾರ್ಯ ನಡೆಸಿದರು. ಸಂಪೂರ್ಣ ಕರ್ನಾಟಕ ಅವರ ಕಾರ್ಯಕ್ಷೇತ್ರವಾಗಿತ್ತು. ಗುರುಗಳಾದ ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಪ್ರತ್ಯಕ್ಷ ದೇವರಾಗಿದ್ದಾರೆ ಎಂಬುದು ಅವರ ಶ್ರದ್ಧೆಯಾಗಿತ್ತು.

ರಾಮ ನಾಮದ ದೀಕ್ಷೆ
ಕರ್ನಾಟಕ ಪ್ರಾಂತ್ಯದಲ್ಲಿ ರಾಮದಾಸಿ ಸಂಪ್ರದಾಯವನ್ನು ಪ್ರಚುರಪಡಿಸಿದವರು ಶ್ರೀ ಬ್ರಹ್ಮಾನಂದ ಮಹಾರಾಜರು. ರಾಮನಾಮವನ್ನೇ ನಂಬಿ ಬದುಕಿದವರು, ಬದುಕುವ ದಾರಿಯನ್ನು ಇತರರಿಗೆ ತೋರಿದವರು.

ಅವರು ಶ್ರೀಮಂತ, ಬಡವ ಎನ್ನುವ ಭೇದ ಮಾಡದೆ ಎಲ್ಲಾ ವರ್ಗದ ಮಂದಿಗೆ ಶ್ರೀರಾಮ ನಾಮದ ಜಪ ದೀಕ್ಷೆ ಕೊಟ್ಟರು. ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ನೆರಳಿನಂತೆ ಅನುಸರಿಸಿದರು. ಬೆಳಧಡಿ, ಅಶ್ವತ್ಥಪುರ ಸೇರಿದಂತೆ ವಿವಿಧೆ ಶ್ರೀರಾಮ ಮಂದಿರ ನಿರ್ಮಿಸಿದರು.

ತಮ್ಮ ಆಯುಷ್ಯವನ್ನು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಸೇವೆ, ರಾಮ ನಾಮ ಪ್ರಚಾರದಲ್ಲಿ ಕಳೆದರು. ಮೋಕ್ಷ ಪ್ರಾಪ್ತಿಯ ಗುಟ್ಟು ಮೂಲಕ ರಾಮೋಪಾಸನೆಯ ಮಾರ್ಗ ಮತ್ತು ಮಹತ್ತನ್ನು ತಿಳಿಸಿದರು.

ತಮ್ಮ ಜೀವಿತಾವಧಿಯ ಕೊನೆಯ ಕಾಲಘಟ್ಟದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ಸಮೀಪದ ನವಭಾಗಕ್ಕೆ ಆಗಮಿಸಿ, ಶಾಲಿವಾಹನ ಶಕೆ 1840 ಕಾಲಯುಕ್ತಾಕ್ಷಿ ನಾಮ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆ ದಿನಾಂಕ 04- 10- 1918ರಂದು ಬೆಳಿಗ್ಗೆ 10.40 ಗಂಟೆಗೆ ಮಹಾಪ್ರಸ್ಥಾನಗೈದರು.

ಅವರ ಇಚ್ಛಯಂತೆ ಅವರ ಪಾರ್ಥೀವ ಶರೀರವನ್ನು ಕೃಷ್ಣಾನದಿಗೆ ಅರ್ಪಿಸಲಾಯಿತು.

ಬುದ್ದಿಗೊಪ್ಪಿದ ಮೇಲೆ ನಿಷ್ಠೆಯಿಂದ ಬಾಳ್ವೆ ನಡೆಸಿದ ಶ್ರೀ ಬ್ರಹ್ಮಾನಂದರ ಚರಿತ್ರೆ ನಮಗೆಲ್ಲರಿಗೂ ದಾರಿದೀಪವಾಗಲಿ.

-ಸಮರ್ಥ ಎಂ. ಕಾಂತಾವರ, ಚಿತ್ರದುರ್ಗ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!