Thursday, July 7, 2022
Home ಅಧ್ಯಾತ್ಮ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

ಅದ್ವೈತ ಮತ ಪ್ರತಿಪಾದಕ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತವಾದ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ 34ನೆಯ ಜಗದ್ಗುರುಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಅರಾಧನೆ ಪ್ರಯುಕ್ತ ವಿಶೇಷ ಲೇಖನ.

ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

ಸದಾತ್ಮಧ್ಯಾನ ನಿರತಂ ವಿಷಯೇಭ್ಯಃ ಪರಾಙ್ಮುಖಮ್ |
ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರಭಾರತೀಮ್ ||

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ನರಸಿಂಹ.

ನಂದನ ನಾಮ ಸಂವತ್ಸರದ ಆಶ್ವಯುಜ ಬಹುಳ ಏಕಾದಶಿ ಭಾನುವಾರ 16-10-1892ರಂದು ಗೋಪಾಲಶಾಸ್ತ್ರೀ- ಲಕ್ಷ್ಮಮ್ಮ ದಂಪತಿ ಸುಪುತ್ರರಾಗಿ ಶೃಂಗೇರಿಯಲ್ಲಿ ಜನಿಸಿದರು.

ಬಾಲ್ಯದಿಂದಲೇ ನರಸಿಂಹರಿ ಅವರಿಗೆ ಭಗವದ್ಭಕ್ತಿ, ಗುರು-ಹಿರಿಯರಲ್ಲಿ ಗೌರವ, ವಿನಯ ಎಲ್ಲವೂ ಮೈಗೂಡಿತ್ತು.

ಪ್ರತಿಭಾನ್ವಿತ ವಿದ್ಯಾರ್ಥಿ
8ನೇ ವಯಸ್ಸಿನಲ್ಲಿ ಉಪನೀತರಾಗಿ ಇತ್ತ ಶಾಲೆಯಲ್ಲಿ ಲೌಕಿಕ ಆಂಗ್ಲ ವಿದ್ಯಾಭ್ಯಾಸ ಮತ್ತು ಸದ್ವಿದ್ಯಾಸಂಜೀವಿನಿ ಸಂಸ್ಕೃತ ಪಾಠಶಾಲೆಯಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನ ಪ್ರಾರಂಭಿಸಿದರು. ಎರಡರಲ್ಲೂ ಪ್ರಗತಿಯನ್ನು ಸಾಧಿಸುತ್ತ, ಸದಾ ತರಗತಿಯಲ್ಲಿ ಮೊದಲನೇಯವರಾಗಿ ತೇರ್ಗಡೆ ಹೊಂದುತ್ತಿದ್ದರು.

ನಂತರ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳ ಅಪ್ಪಣೆಯಂತೆ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಉನ್ನತ ಶಾಸ್ತ್ರ ಅಧ್ಯಯನಕ್ಕಾಗಿ ಬೆಂಗಳೂರಿನ ಗೀರ್ವಾಣ ಪ್ರೌಢವಿದ್ಯಾಭಿವರ್ಧಿನೀ ಪಾಠಶಾಲೆಗೆ ತೆರಳಿದರು. ಶ್ರೀ ನರಸಿಂಹಭಾರತೀ ಮಹಾಸ್ವಾಮಿಗಳು ನರಸಿಂಹ ಅವರ ವಿದ್ಯಾ ಪ್ರಗತಿಯನ್ನು ಸ್ವತಃ ಪರಿಶೀಲಿಸುತ್ತಿದ್ದರು ಮತ್ತು ಸ್ವತಃ ಶಾರದಮ್ಮನವರಲ್ಲಿ ನರಸಿಂಹ ಅವರನ್ನು ಸರ್ವಜ್ಞನನ್ನಾಗಿ ಮಾಡು ಎಂದು ಪ್ರಾರ್ಥಿಸುತ್ತಿದ್ದರಂತೆ.

ಯೋಗಪಟ್ಟ
ನರಸಿಂಹ ಅವರ ವಿದ್ಯಾಪ್ರಗತಿ, ಭಗವದ್ಭಕ್ತಿ, ವಿರಕ್ತಿಯನ್ನು ಕಂಡು, ಶ್ರೀ ಶಾರದಾಂಬಾ ಪ್ರೇರಣೆಯೆಂತೆ ನರಸಿಂಹ ಅವರೇ ತಮ್ಮ ಉತ್ತರಾಧಿಕಾರಿ ಎಂದು ತೀರ್ಮಾನಿಸಿದರು. ನಂತರ ನರಸಿಂಹರು ಶೃಂಗೇರಿಗೆ ತಲುಪುವದರಲ್ಲೆ ಶ್ರೀ ನರಸಿಂಹಭಾರತೀ ಮಹಾಸ್ವಾಮಿಗಳು ನಿರ್ಯಾಣ ಹೊಂದಿದರು. ಅವರ ಅಪ್ಪಣೆಯಂತೆ ಚೈತ್ರ ಬಹುಳ ಷಷ್ಠಿ 7-4-1912ರಂದು ನರಸಿಂಹ ಅವರಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀ ಶ್ರೀ ಚಂದ್ರಶೇಖರಭಾರತೀ ಎಂಬ ಯೋಗಪಟ್ಟ ನೀಡಲಾಯಿತು. ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಶೃಂಗೇರಿ ಶ್ರೀ ಶಾರದಾಪೀಠದ 34ನೇ ಜಗದ್ಗುರುಗಳಾಗಿ ನಿಯುಕ್ತರಾದರು.

ಜೀವನ್ಮುಕ್ತ ಅವಧೂತ
ಸದಾ ಆತ್ಮಧ್ಯಾನದಲ್ಲಿ ನಿರತರಾಗಿ ಬ್ರಹ್ಮತತ್ವದ ಅನುಸಂಧಾನ ಮಾಡುತ್ತ ನಿತ್ಯವೂ ಜಪ ತಪಾನುಷ್ಠಾನದಲ್ಲಿ ನಿರತರಾಗಿ ಶ್ರೀ ಶಾರದಾ ಚಂದ್ರಮೌಳೇಶ್ವರ ಆರಾಧನೆ ಮಾಡುತ್ತ ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಕೆಲವು ಬಾರಿ ಸಂಚಾರ ಮಾಡಿದರು.

ತಮಿಳು, ತೆಲುಗು, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ನಿರರ್ಗಳವಾಗಿ ಅನುಗ್ರಹ ಭಾಷಣಗಳನ್ನು ನೀಡುತ್ತ ಜನರನ್ನು ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.

ಸದಾ ಆತ್ಮಾರಾಮರಾಗಿ ಅವಧೂತರಂತೆ ಜೀವನ್ಮುಕ್ತರಂತೆ ಇದ್ದು ಶಾರದಾ ಪೀಠದ ಮಾಣಿಕ್ಯದಂತೆ 42 ವರ್ಷ ಕಾಲ ಶ್ರೀ ಶಾರದಾ ಪೀಠದಲ್ಲಿ ವಿರಾಜಮಾನರಾಗಿ ಜಯ ನಾಮ ಸಂವತ್ಸರದ ಭಾದ್ರಪದ ಅಮಾವಾಸ್ಯೆ ಭಾನುವಾರ 26-09-1954ರಂದು ಪ್ರಾತಃಕಾಲ 4 ಗಂಟೆಗೆ ಪವಿತ್ರ ತುಂಗಾನದಿಯಲ್ಲಿ ಸ್ನಾನ ಮಾಡಲು ಹೋಗಿ, ಯೋಗಾರೂಢರಾಗಿ ಪದ್ಮಾಸನದಲ್ಲಿರುವಾಗಲೆ ಭೌತಿಕ ದೇಹ ತ್ಯಜಿಸಿ ಬ್ರಹ್ಮೈಖ್ಯರಾದರು.

ತಮ್ಮ ತಪಃಶಕ್ತಿಯಿಂದ ಭಾರತ ದೇಶವನ್ನು ಪರಮ ಪಾವನಗೊಳಿಸಿದ ಅವರ ಮಹಿಮೆ ಅಪಾರವಾದದ್ದು. ಇಂದಿಗೂ ಪರೋಕ್ಷವಾಗಿ ಅನುಗ್ರಹ ಪಡೆಯುತ್ತಿರುವ ಅನೇಕ ಭಕ್ತರಿದ್ದಾರೆ. ಶೃಂಗೇರಿಯ ನರಸಿಂಹವನದಲ್ಲಿ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಅಧಿಷ್ಠಾನ ಮಂದಿರವಿದೆ.

ಶ್ರೀಗಳ ಆರಾಧನೆ ಸಂದರ್ಭದಲ್ಲಿ ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತ ಅಜ್ಞಾನ ಅಂಧಕಾರಗಳನ್ನು ಹೋಗಲಾಡಿಸಿ, ಉದ್ಧರಿಸುವಂತೆ ಪ್ರಾರ್ಥಿಸೋಣ.

ಜಯತು ಜಯತು ನಿತ್ಯಂ ಶಾರಾದಾಭೀಷ್ಟಧಾತ್ರಿ |
ಜಯತು ಜಯತು ನಿತ್ಯಂ ಚಂದ್ರಮೌಳೀರ್ಮಹೇಶಃ ||
ಜಯತು ಜಯತು ನಿತ್ಯಂ ಶಂಕರೋ ದೇಶಿಕೇಂದ್ರಃ |
ಜಯತು ಜಯತು ನಿತ್ಯಂ ಚಂದ್ರಚೂಡೋ ಗುರುನಃ ||

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!