Tuesday, May 17, 2022
Home ಕ್ರೀಡೆ ಮನಸ್ಸಿಗೆ ಮುದ ನೀಡುವ ತುಳು ಸಂಸ್ಕೃತಿ ಕ್ರೀಡೆ

ಮನಸ್ಸಿಗೆ ಮುದ ನೀಡುವ ತುಳು ಸಂಸ್ಕೃತಿ ಕ್ರೀಡೆ

ಸುದ್ದಿಕಿರಣ ವರದಿ
ಭಾನುವಾರ, ಮೇ 8

ಮನಸ್ಸಿಗೆ ಮುದ ನೀಡುವ ತುಳು ಸಂಸ್ಕೃತಿ ಕ್ರೀಡೆ
ಉಡುಪಿ: ಕರಾವಳಿಯಲ್ಲಿ ಆಚರಣೆಯಲ್ಲಿರುವ ತುಳು ಸಂಸ್ಕೃತಿ ಹಾಗೂ ತುಳುವಿನ ಕ್ರೀಡೆಗಳು ಮನಸ್ಸಿಗೆ ಮುದ ನೀಡುತ್ತವೆ. ಆರೋಗ್ಯದ ಹಿತದೃಷ್ಟಿಯಿಂದ ತುಳುವರ ತಿಂಡಿ ತಿನಿಸು, ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.

ತುಳುಕೂಟ ಉಡುಪಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಸಿ, ಇಂದ್ರಾಳಿ- ಉಡುಪಿ ಲಯನ್ಸ್ ಮತ್ತು ಲಿಯೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ತುಳುನಾಡ ಗೊಬ್ಬುಲು ಹಾಗೂ ಆಹಾರ ಮೇಳ, ತುಳುನಾಡ ಸಂಗೀತ ನೃತ್ಯ ಕಾರ್ಯಕ್ರಮವನ್ನು ಕಳಸೆಗೆ ಅಕ್ಕಿ ಸುರಿದು ಸಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಲ್ಪೆ ಕಡಲ ಕಿನಾರೆಯಲ್ಲಿ ಪ್ರತೀ ವಾರ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಬೀಚ್ ನವೀಕರಣ ಮಾಡಲಾಗಿದೆ. ಪ್ರಸ್ತುತ ಮಲ್ಪೆ ಬೀಚ್ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದರು.

ಇದೇ ವೇಳೆ ಚೊಕ್ಕಾಡಿ ಸಂತೋಷ್ ಶೆಟ್ಟಿ ಅವರ ಕಂಬಳದ ಕೋಣಗಳನ್ನು ಮಲ್ಪೆ ಬೀಚ್ ನಲ್ಲಿ ಓಡಿಸುವ ಮೂಲಕ ಕ್ರೀಡಾಕೂಟಕ್ಕೆ ಶಾಸಕ ಭಟ್ ಹಾಗೂ ವಿವಿಧ ಅತಿಥಿ ಗಣ್ಯರು ಚಾಲನೆ ನೀಡಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ತುಳು ಸಂಸ್ಕೃತಿ ಉಳಿವಿಗೆ ಸಹಕಾರ ಅಗತ್ಯ
ಉಡುಪಿ ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ತುಳುನಾಡಿನಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಜಾನಪದ ಕ್ರೀಡೆಗಳನ್ನು ಇಂಥ ಕಾರ್ಯಕ್ರಮಗಳ ಮೂಲಕ ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಜಂಟಿ ಸಂಸ್ಥೆಗಳ ಮೂಲಕ ಪ್ರಯತ್ನಿಸಲಾಗಿದೆ.

ನಮ್ಮ ನಾಡಿನ ಸಂಸ್ಕೃತಿಯ ಉಳಿವಿಗೆ ಸರ್ವರೂ ಪ್ರೋತ್ಸಾಹಿಸಬೇಕು ಎಂದರು.

ತುಳು ಸಂಸ್ಕೃತಿ ಎತ್ತಿಹಿಡಿವ ಕಾರ್ಯ
ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ಮಾತನಾಡಿ, ಲಯನ್ಸ್ ಸೇವಾ ಸಂಸ್ಥೆಯೊಂದಿಗೆ ತುಳುಕೂಟ ಉಡುಪಿ ಸೇರಿಕೊಂಡು ತುಳುನಾಡ ಕ್ರೀಡಾಕೂಟ ಆಯೋಜಿಸುವ ಮೂಲಕ ತುಳು ಸಂಸ್ಕ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಿದೆ ಎಂದರು.

ಇಂದ್ರಾಳಿ- ಉಡುಪಿ ಲಯನ್ಸ್ ಮತ್ತು ಲಿಯೋ ಕ್ಲಬ್ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಬನ್ನಂಜೆ ಬಾಬು ಅಮೀನ್, ಲಯನ್ಸ್ ಜಿಲ್ಲಾ ಉಪಗವರ್ನರ್ ಎಂ. ಕೆ. ಭಟ್, ಮಹಮ್ಮದ್ ಹನೀಫ್, ಪಾಂಡುರಂಗ ಮಲ್ಪೆ, ಭೀಮಾ ಜುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ಸಂದೇಶ್ ಕಾಮತ್, ಆಹಾರ ಮೇಳ ಸಂಚಾಲಕ ಚಂದ್ರಶೇಖರ್ ರಾವ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ತಾರಾ ಆಚಾರ್ಯ ಮತ್ತು ಆಕಾಶ್ ಜೈನ್, ತುಳುಕೂಟ ಕೋಶಾಧಿಕಾರಿ ಎಂ.ಜಿ. ಚೈತನ್ಯ, ಯಶೋದಾ ಕೇಶವ್, ಮೋಹನ್ ಶೆಟ್ಟಿ, ಪ್ರಭಾಕರ ಭಂಡಾರಿ, ರತ್ನಾಕರ ಇಂದ್ರಾಳಿ, ಮಹಮ್ಮದ್ ಮೌಲಾ ಮೊದಲಾದವರಿದ್ದರು.

ಉಡುಪಿ ಜಿಲ್ಲಾ ಮಟ್ಟದ ತುಳುನಾಡ ಗೊಬ್ಬುಲು ಕಾರ್ಯಕ್ರಮ ಸಂಚಾಲಕ ಸ್ಮರಣಿಕಾ ದಿವಾಕರ ಸನಿಲ್ ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ಪ್ರಾರ್ಥಿಸಿದರು. ವಿ. ಕೆ. ಯಾದವ ನಿರೂಪಿಸಿದರು. ತುಳುಕೂಟ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರ್ ವಂದಿಸಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಪುರುಷರಿಗಾಗಿ ತುಳುನಾಡಿನ ಕ್ರೀಡೆಗಳಾದ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಮಾನವ ಗೋಪುರ, ಸೊಪ್ಪಾಟ, ಪಾಲೆದ ಗೊಬ್ಬು, ಚೆನ್ನೆಮಣೆ, ಪೊಕ್ಕು, ತೆಂಗಿನ ಸೋಗೆ ಹೆಣೆಯುವುದು, ತೆಂಗಿನಕಾಯಿ ಸಿಪ್ಪೆ ತೆಗೆಯುವ ಸ್ಪರ್ಧೆ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!