Sunday, October 2, 2022
Home ಕ್ರೀಡೆ ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ ಪೂಜಾರಿಗೆ ಜಿಲ್ಲಾಡಳಿತ ಗೌರವ

ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ ಪೂಜಾರಿಗೆ ಜಿಲ್ಲಾಡಳಿತ ಗೌರವ

ಸುದ್ದಿಕಿರಣ ವರದಿ
ಭಾನುವಾರ, ಆಗಸ್ಟ್ 7

ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ ಪೂಜಾರಿಗೆ ಜಿಲ್ಲಾಡಳಿತ ಗೌರವ
ಉಡುಪಿ: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಜಿಲ್ಲಾಡಳಿತ ವತಿಯಿಂದ ಭಾನುವಾರ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಂತರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್., ಪೌರಾಯುಕ್ತ ಡಾ| ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಅವರು ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಿದರು.

ಯುವಜನತೆಗೆ ಸ್ಪೂರ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅವಧಿಯಲ್ಲಿ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಪಡೆಯುವ ಮೂಲಕ ಗುರುರಾಜ ಪೂಜಾರಿ ಅವರು ಉಡುಪಿ ಜಿಲ್ಲೆಯ ಸಂಭ್ರಮ ಹೆಚ್ಚಿಸಿದ್ದು, ದೇಶದಲ್ಲಿ ಜಿಲ್ಲೆಯ ಹೆಸರನ್ನು ಖ್ಯಾತಿಗೊಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉನ್ನತ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ಇವರ ಸಾಧನೆ ಜಿಲ್ಲೆಯ ಯುವಜನತೆ ಹಾಗೂ ಕ್ರೀಡಾಪಟುಗಳಿಗೆ ಸದಾ ಸ್ಪೂರ್ತಿ.

ಜಿಲ್ಲೆಯಲ್ಲಿ ಉತ್ತಮ ಕ್ರೀಡಾಂಗಣ ಹಾಗೂ ಕ್ರೀಡಾ ಸೌಲಭ್ಯಗಳಿದ್ದು ಕ್ರೀಡಾಪಟುಗಳು ಈ ಸೌಲಭ್ಯ ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.

ಮೊದಲ ಬಾರಿಗೆ ದೇಶಕ್ಕೆ ಪದಕ
ಜಿಲ್ಲಾಡಳಿತದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ ಪೂಜಾರಿ, ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ರಜತ ಪಡೆಯುವ ಗುರಿಯಿಂದ 4 ವರ್ಷದಿಂದ ಕಠಿಣ ಪರಿಶ್ರಮಪಟ್ಟಿದ್ದು, ಬರ್ಮಿಂಗ್ ಹ್ಯಾಮ್ ಗೆ ತೆರಳಿದ ನಂತರ ಅನಾರೋಗ್ಯ ಸಮಸ್ಯೆ ತಲೆದೋರಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು.

ಆದರೆ, ಕೇರಳದ ಕೋಚ್ ಮಾರ್ಗದರ್ಶನ, ಆತ್ಮವಿಶ್ವಾಸ ಮತ್ತು ಎಲ್ಲರ ಹಾರೈಕೆಯಿಂದ ಗುಣಮುಖನಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ, ತೀವ್ರ ಪೈಪೋಟಿ ನಡುವೆ ಕಂಚಿನ ಪದಕ ಪಡೆದು, ವೇಯ್ಟ್ ಲಿಪ್ಟಿಂಗ್ ನ 61 ಕೆಜಿ ವಿಭಾಗದಲ್ಲಿ ದೇಶಕ್ಕೆ ಇದೇ ಮೊದಲ ಬಾರಿಗೆ ಪದಕ ಪಡೆದ ಇತಿಹಾಸ ನಿರ್ಮಿಸಲು ಸಾಧ್ಯವಾಯಿತು ಎಂದರು.

ತನ್ನ ಈ ಸಾಧನೆಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಕಳೆದ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಪಡೆದಾಗಲೂ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆ ನೀಡಿದ ಗೌರವವನ್ನು ಸ್ಮರಿಸಿದರು. ಕ್ರೀಡಾಪಟುಗಳು ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮಪಟ್ಟಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.

ಇಂದು ತನ್ನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಆಗಮಿಸಿದ ರಾಜ್ಯಸಭಾ ಸದಸ್ಯ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುರುರಾಜ್ ಪೂಜಾರಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರುರಾಜ ಪೂಜಾರಿ ತಂದೆ ಮಹಾಬಲ ಪೂಜಾರಿ ಮತ್ತು ಪತ್ನಿ ಸೌಜನ್ಯಗುರುರಾಜ್, ಅಜ್ಜರಕಾಡು ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು, ನೇಷನ್ ಫೆಸ್ಟ್ ತಂಡದ ಸದಸ್ಯರು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!