ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗ ಹಿರಿಯ ಸಾಧಕರ ಸ್ಮರಣೆ ಮತ್ತು ಗೌರವಾರ್ಥ ನೀಡುವ ವಿವಿಧ ಪ್ರಶಸ್ತಿಗಳಿಗೆ 17 ಮಂದಿ ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಕಲಾವಿದರಾದ ಅನಂತ ಕುಲಾಲ ಕಕ್ಕುಂಜೆ, ಮಹಾಬಲ ನಾಯ್ಕ್ ಬುಕ್ಕಿಗುಡ್ಡೆ, ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಾಬು ಕುಲಾಲ ಹಳ್ಳಾಡಿ, ನಗ್ರಿ ಮಹಾಬಲ ರೈ, ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ರಾಮಕೃಷ್ಣ ಮಂದಾರ್ತಿ, ಮಂಜುನಾಥ ಭಟ್ ಬೆಳ್ಳಾರೆ, ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಬಸವರಾಜ್ ಹುಣ್ಸೆಮಕ್ಕಿ, ರಾಮಚಂದ್ರ ಹೆಗಡೆ ಮೂರೂರು, ರಘುರಾಮ ಗೌಡ ಕೇಂಜ, ದಿನೇಶ ಅಮ್ಮಣ್ಣಾಯ ಅರಸಿನಮಕ್ಕಿ, ಉಮೇಶ ಹೆಬ್ಬಾರ್ ನಿಡ್ಲೆ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಮಹಾದೇವ ಪಟಗಾರ ಕುಮಟಾ, ರಾಘವದಾಸ್ ಮುಡಿಪು ಅವರನ್ನು ಆಯ್ಕೆಮಾಡಲಾಗಿದೆ.
ಪ್ರಶಸ್ತಿ ತಲಾ 20 ಸಾವಿರ ರೂ. ನಗದು ಮತ್ತು ಫಲಕ ಹಾಗೂ ಸನ್ಮಾನ ಒಳಗೊಂಡಿದೆ.
ಈ ತಿಂಗಳ 26ರಂದು ಸಂಜೆ 5 ಗಂಟೆಗೆ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡುವರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡುವರು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದ್ದಾರೆ.
ಇದೇ ವೇಳೆ ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಗೆ ವಿದ್ಯಾಪೋಷಕ್ ಕೋಶಾಧಿಕಾರಿ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್ ಆಯ್ಕೆಯಾಗಿದ್ದು, ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು.